ವಿಕಲಚೇತನ ಯುವತಿ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ
ರಾಯಚೂರು: ಮಾನವಿ ತಾಲೂಕಿನಲ್ಲಿ ವಿಕಲಚೇತನ ಯುವತಿಯ ಮೇಲೆ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗವಿಕಲರ ಒಕ್ಕೂಟದ ಜಿಲ್ಲಾ ಘಟಕದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಜಿಲ್ಲೆಯ ಮಾನವಿ ತಾಲೂಕಿನ ಹಳ್ಳಿಹೊಸೂರು ಗ್ರಾಮದಲ್ಲಿ ಈಚೆಗೆ ಗ್ರಾಮದ ವಿತಲಚೇತನ ಯುವತಿಯ ಮೇಲೆ ಕಾಮುಕರು ಅತ್ಯಾಚಾರ ಎಸಗಿದ್ದು, ಯುವತಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ದುಷ್ಕರ್ಮಿಗಳ ಆಸ್ತಿಮುಟ್ಟುಗೋಲು ಹಾಕಬೇಕೆಂದು ಆಗ್ರಹಿಸಿದರು.
ಪ್ರತ್ಯೇಕ ಸಚಿವಾಲಯ: ಅತ್ಯಾಚಾರ ಘಟನೆಯ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ವಿಕಲಚೇತನರಿಗೆ ಸಾಮಾಜಿಕ ಭದ್ರತೆ ಒದಗಿಸಿ, ರಾಜ್ಯದಲ್ಲಿ ವಿಕಲಚೇತನರ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾಗಬೇಕು. ಜಿಲ್ಲೆಯಲ್ಲಿ ವಿಕಲಚೇತನರ ಕಲ್ಯಾಣಾಧಿಕಾರಿಗಳ ಹುದ್ದೆ ಭರ್ತಿ ಮಾಡಲು ಒತ್ತಾಯಿಸಿದರು.
ಹೈ.ಕ. ಅಭಿವೃದ್ಧಿ ಸಮಿತಿಯಲ್ಲಿ ಜಿಲ್ಲೆಗೊಬ್ಬ ವಿಕಲಚೇತನರ ಪ್ರತಿನಿಧಿಯನ್ನು ನೇಮಿಸಬೇಕು. ವಿಕಲಚೇತನರಿಗೆ ರಾಜ್ಯಾದ್ಯಂತ ಸಂಚರಿಸಲು ಉಚಿತ ಬಸ್ಪಾಸ್ ನೀಡಬೇಕು. ಭಾಗ್ಯಲಕ್ಷ್ಮಿ ಯೋಜನೆಯಂತೆ ವಿಕಲಭಾಗ್ಯ ಯೋಜನೆ ಜಾರಿಗೆ ತಂದು ವಿಕಲಚೇತನರ ಏಳಿಗೆಗೆ ಅನುದಾನ ನೀಡುವಂತೆ ಆಗ್ರಹಿಸಿದರು.
ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಮಿತಿ: ನಗರದ ವಿಕಲಚೇತನರ ಕಲ್ಯಾಣ ಇಲಾಖೆಯನ್ನು ಸಮೀಪದ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಗ್ರಾಪಂ, ತಾಪಂ, ಜಿಪಂ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಶೇ.3ರಷ್ಟು ಅನುದಾನವನ್ನು ವಿಕಲಚೇತನರಿಗಾಗಿ ಮೀಸಲಿಡುತ್ತಿದ್ದು, ಅದರ ಬಳಕೆ ಮಾತ್ರ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಅನುದಾನದ ಸಮರ್ಪಕ ಬಳಕೆಗೆ ಪೂರಕವಾಗಿ ಕ್ರಿಯಾ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಮಿತಿ ರಚಿಸಬೇಕೆಂದು ಒತ್ತಾಯಿಸಿದರು.
ವಿಕಲಚೇತನರ ಮಾಸಾಶನವನ್ನು ಸದ್ಯದ 500 ಗಳಿಂದ 1200 ಕ್ಕೆ ಹೆಚ್ಚಿಸಿ, 1200 ಮಾಸಾಶನವನ್ನು 3 ಸಾವಿರಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದ ಕಾರ್ಯಕರ್ತರು, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ವಿಕಲಚೇತನರ ಭವನ ನಿರ್ಮಾಣಕ್ಕೆ ನಿವೇಶನ ಮತ್ತು ಕಟ್ಟಡದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವುಗೇನಿ, ರಾಜ್ಯ ಉಪಾಧ್ಯಕ್ಷ ಕುಪ್ಪೇಂದ್ರ, ಕಾರ್ಯದರ್ಶಿ ವೀರೇಶ ರಾಯಚೂರು ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

