ರಾಯಚೂರು

ಸ್ತ್ರೀರೋಗ ತಜ್ಞರ ನೇಮಕ, ಸಿಟಿ ಸ್ಕ್ಯಾನ್ ಭಾಗ್ಯ

Published On :

ಲಿಂಗಸ್ಗೂರು: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಖಾಲಿಯಿರುವ ವಿವಿಧ ತಜ್ಞವೈದ್ಯರ ಹುದ್ದೆಗಳಲ್ಲಿ ಸ್ತ್ರೀರೋಗ ತಜ್ಞರ ನೇಮಕ, ಸಿ.ಟಿ. ಸ್ಕ್ಯಾನ್ ಯಂತ್ರ ಅಳವಡಿಕೆಯಿಂದ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಜರ್ಮನ್ ಸಹಾಯ ಧನದಲ್ಲಿ ನಿರ್ಮಿಸಲಾದ ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಗೆ ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಸ್ತ್ರೀರೋಗ, ನೇತ್ರ ತಜ್ಞ, ದಂತ ವೈದ್ಯರು ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇರುವ ಪ್ರಯುಕ್ತ ರೋಗಿಗಳು ತೀವ್ರ ತೊಂದರೆ ಅನುಭವಿಸುವ ಪರಿಸ್ಥಿತಿ ಬಂದೊದೆ. ಈ ಕುರಿತು ವಿವಿಧ ಸಂಘ-ಸಂಸ್ಥೆಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ರೋಗಿಗಳಿಗೆ ಅನುಕೂಲ ಕಲ್ಪಿಸುವಂತೆ ಹಲವು ವರ್ಷಗಳಿಂದ ಮನವಿ, ಹೋರಾಟ, ಧರಣಿ ಹಮ್ಮಿಕೊಳ್ಳುತ್ತಾ ಬರಲಾಗಿತ್ತು. ತಾಲೂಕು ಆರೋಗ್ಯಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಎಲ್ಲದರ ಪರಿಣಾಮ ಸಾರ್ವಜನಿಕ ಆಸ್ಪತ್ರೆಗೆ ಸ್ತ್ರೀರೋಗ ತಜ್ಞರನ್ನು ಕಾಯಂ ಆಗಿ ನೇಮಕ ಮಾಡುವ ಮೂಲಕ ಸರ್ಕಾರ ಆದೇಶ ಹೊರಡಿಸಿದೆ.
ಸಿ.ಟಿ. ಸ್ಕ್ಯಾನ್ ಯಂತ್ರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಜರ್ಮನ್ ಮಾದರಿಯಲ್ಲಿ ನವೀಕರಣಗೊಂಡಿದ್ದು, ಆಸ್ಪತ್ರೆಯಲ್ಲಿ ಸಿ.ಟಿ. ಸ್ಕ್ಯಾನ್ ಅಳವಡಿಸುವಂತೆ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. 2009-10ನೇ ಸಾಲಿನ ಬಿಆರ್‌ಜಿಎಫ್ ಯೋಜನೆಯಡಿ 100.44 ಲಕ್ಷ ಮತ್ತು ಗ್ರಾಪಂ.ಗಳ ಸ್ವತ್ತುಗಳ ನಿರ್ಮಾಣ ಅನುದಾನದಲ್ಲಿ 114.93 ಲಕ್ಷ ಸೇರಿ ಒಟ್ಟು 215.37 ಲಕ್ಷವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒದಗಿಸಲಾಗಿತ್ತು.
ಜಪಾನ್ ದೇಶದ ಸಿಂಗಪೂರ ತೋಷೀಬಾ ಕಂಪನಿಯು ಯಂತ್ರದ ಬೆಲೆ 1.78 ಕೋಟಿ ಬೆಲೆಯ ಸಿ.ಟಿ. ಸ್ಕ್ಯಾನ್ ಯಂತ್ರ ಪೂರೈಕೆ ಮಾಡಿದ್ದು, ರಾಯಚೂರು ಜಿಲ್ಲೆಯಲ್ಲಿ ಸಿ.ಟಿ. ಸ್ಕ್ಯಾನ್ ಸೌಲಭ್ಯವಿರುವ 2ನೇ ಆಸ್ಪತ್ರೆ ಇದಾಗಿದೆ. ಹೈ-ಕ ಭಾಗದಲ್ಲೇ ತಾಲೂಕು ಆಸ್ಪತ್ರೆಯಲ್ಲಿ ಅಳವಡಿಸಿರುವುದು ಮೊಟ್ಟಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೊಠಡಿ ವ್ಯವಸ್ಥೆ: ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿ.ಟಿ. ಸ್ಕ್ಯಾನ್ ಯಂತ್ರ ಅಳವಡಿಸುವ ಕೊಠಡಿಗೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ರಾಯಚೂರು ಇವರಿಗೆ 30 ಲಕ್ಷ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಯಂತ್ರ ಅಳವಡಿಸುವ ಎಲ್ಲ ಆಕೃತಿಗಳನ್ನು ಮಾಡಿ ಮುಗಿಸಲಾಗಿದೆ. ಆದರೆ ಸಿ.ಟಿ. ಸ್ಕ್ಯಾನ್ ಯಂತ್ರ ನಿರ್ವಹಣೆಗೆ ತಜ್ಞ ವೈದ್ಯ ರೇಡಿಯಾಲಾಜಿಸ್ಟ್ ಸದಸ್ಯರಿದ್ದು, ರೇಡಿಯೋಗ್ರಾಫರ್, ಟೆಕ್ನಿಷಿಯನ್ ಅಟೆಂಡರ್ ಹುದ್ದೆಗಳು ಭರ್ತಿ ಮಾಡಬೇಕಿದೆ. ದುಬಾರಿ ಬೆಲೆಯ ಯಂತ್ರ ನಿರ್ವಹಣೆಗೆ ನಾಲ್ಕು ವರ್ಷಗಳಿಗೆ 69 ಲಕ್ಷ ನೀಡುವಂತೆ ಗುತ್ತಿಗೆದಾರರು ಬೇಡಿಕೆ ಮುಂದಿಟ್ಟಿದ್ದು, ಯಂತ್ರ ಸೇವೆಗೆ ಸಿದ್ಧಗೊಳಿಸಲು ವಿಳಂಬ ಮಾಡಿದರೆ ನಿರ್ವಹಣೆ ವೆಚ್ಚದ ಹೊರೆ ಆಸ್ಪತ್ರೆ ಮೇಲೆ ಬೀಳಲಿದೆ.
ನಾಗರಿಕರ ಹರ್ಷ: ಹಲವು ವರ್ಷಗಳ ಬೇಡಿಕೆ ಈಡೇರಿದ ಪ್ರಯುಕ್ತ ಹಿರಿಯ ಮುಖಂಡರಾದ ಮಹಾಂತಪ್ಪ ವಿಟ್ಲಾಪೂರ, ಲಾಲಅಹ್ಮದ್ ಸಾಬ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ನೀಡಿ ಸಿಹಿ ಹಂಚುವ ಮೂಲಕ ಹರ್ಷ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.