ಅಡ್ಡಪಲ್ಲಕ್ಕಿ: ಗೌರವ ಸಮರ್ಪಣೆ ಪ್ರತೀಕ
ದೇವದುರ್ಗ ನ.24
ಶತಶತಮಾನಗಳಿಂದ ವೀರಶೈವ ಧರ್ಮ ಪರಂಪರೆಯಲ್ಲಿ ಆಚರಿಸಲಾಗುತ್ತಿರುವ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ವಿರೋಧಿಸುವುದು ಸರಿಯಲ್ಲ. ಭಕ್ತರು ತಮ್ಮ ಗುರುವಿಗೆ ಗೌರವ ಸಲ್ಲಿಸುವ ಧಾರ್ಮಿಕ ಆಚರಣೆ ಇದಾಗಿದೆ. ಭಕ್ತರು ವಿರೋಧಿಗಳ ಬಗ್ಗೆ ಎಚ್ಚರದಿಂದಿದ್ದು, ವೀರಶೈವ ಸಮಾಜವನ್ನು ಉತ್ತುಂಗಕ್ಕೆ ಕೊಂಡೊಯ್ಯುವಂತೆ ಉಜ್ಜಯಿನಿ ಪೀಠದ ಶ್ರೀ1008 ಜಗದ್ಗುರು ಸಿದ್ದಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯರು ಕರೆ ನೀಡಿದರು.
ಅವರು ಭಾನುವಾರ ಪಟ್ಟಣದ ಶಿಖರ ಮಠದ ಶ್ರೀಸಿದ್ದರಾಮೇಶ್ವರ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧಾರ್ಮಿಕ ಸಭೆಗೆ ಚಾಲನೆ ನೀಡಿ ಮಾತನಾಡಿ, ಸನಾತನ ಮತ್ತು ಮೂಲಪರಂಪರೆಯಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಗುರುವಿಗೆ ಮತ್ತು ಧರ್ಮ ಗುರುಗಳಿಗೆ ಗೌರವ ಪೂರ್ವಕವಾಗಿ ಭಕ್ತರು ಅಡ್ಡಪಲ್ಲಕ್ಕಿ ಆಯೋಜಿಸುವುದು ತಪ್ಪಲ್ಲ ಎಂದರು.
ಗೊಂದಲ ಸಲ್ಲದು: ಅಡ್ಡಪಲ್ಲಕ್ಕಿ ಮಹೋತ್ಸವದ ಆಚರಣೆ ಅಪರಾಧ ಎಂಬರ್ಥದ ಹೇಳಿಕೆ ಕೇಳಿಬರುತ್ತಿವೆ. ಆದರೆ ಇದರ ಆಚರಣೆ ಅಪರಾಧವಲ್ಲ. ಇಂಥ ಧಾರ್ಮಿಕ ಆಚರಣೆಗಳಿಂದ ಭಕ್ತರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ತುಂಬಲಿದೆ. ಈಚಿನ ದಿನಗಳಲ್ಲಿ ಕೆಲ ಪ್ರಗತಿಪರರು ಹಾಗೂ ಬುದ್ಧಿಜೀವಿಗಳೆಂದು ಕರೆಯಿಸಿಕೊಂಡವರು ಅಡ್ಡಪಲ್ಲಕ್ಕಿ ಮಹೋತ್ಸವದ ಸಂದರ್ಭ ಗೊಂದಲ ಹುಟ್ಟುಹಾಕುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗದು ಎಂದು ಹೇಳಿದರು.
ಗುರುಗಳ ಬಗೆಗೆ ಭಕ್ತರಲ್ಲಿ ಅಪಾರ ಗೌರವವಿದೆ. ಗೌರವದ ದ್ಯೋತಕವಾಗಿ ಭಕ್ತರು ಗುರುಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯುತ್ತಾರೆ. ಇಂಥ ಭಕ್ತರಿರುವವರೆಗೆ ಯಾರಿಂದಲೂ ಅಡ್ಡಪಲ್ಲಕ್ಕಿಗೆ ಅಡಚಣೆಯಾಗದು ಎಂದು ಎಚ್ಚರಿಸಿದರು.
ಭಯೋತ್ಪಾದಕರು: ತಾಲೂಕಿನ ಜಾಲಹಳ್ಳಿಯ ಶ್ರೀಜಯಶಾಂತಲಿಂಗೇಶ್ವರ ಶ್ರೀ ಮಾತನಾಡಿ, ಅಡ್ಡಪಲ್ಲಕ್ಕಿ ಮಹೋತ್ಸವವನ್ನು ವಿರೋಧಿಸುವವರು, ವೀರಶೈವ ಧರ್ಮದ ವಿರೋಧಿಗಳೆಂದು ಟೀಕಿಸಿ, ವೀರಶೈವ ಧರ್ಮಕ್ಕೆ ಅಂಥವರು ಭಯೋತ್ಪಾದಕರೆಂದು ಎಚ್ಚರಿಸಿದರು. 5 ಸಾವಿರ ವರ್ಷಗಳ ಪರಂಪರೆ ವೀರಶೈವ ಸಮಾಜದ್ದಾಗಿದೆ. ಭಕ್ತರು ತಮ್ಮ ಗುರುಗಳೆಡೆಗಿನ ಭಕ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಧರ್ಮ ಗುರುಗಳನ್ನು ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆದೊಯ್ಯುವ ಮೂಲಕ ಪ್ರದರ್ಶಿಸುತ್ತಾರೆ. ಇದು ಅಮಾನವೀಯವಲ್ಲ. ವಿವಿಧ ಹಬ್ಬಗಳಲ್ಲಿ ಪ್ರಾಣಿ ಬಲಿ ನೀಡುತ್ತಿರುವುದಕ್ಕೆ ವಿರೋಧಿಸಿ ಪ್ರಗತಿಪರರು ಏಕೆ ದನಿಯೆತ್ತುವುದಿಲ್ಲ ಎಂದು ಸವಾಲು ಹಾಕಿದರು.
ಭರವಸೆ: ಯುವಕಾಂಗ್ರೆಸ್ ಮುಖಂಡ ಬಿ.ವಿ.ನಾಯಕ ಮಾತನಾಡಿ, ಸ್ಥಳೀಯ ಶಾಸಕ ಎ.ವೆಂಕಟೇಶ ನಾಯಕ ಅವರು ಸಂಸದರಾಗಿದ್ದ ಅವಧಿಯಲ್ಲಿ ಶಿಖರ ಮಠದ ಕಟ್ಟಡಕ್ಕೆ ಅನುದಾನ ನೀಡಿದ್ದರು. ಅದರಂತೆಯೇ ಮಠಕ್ಕಾಗಮಿಸುವ ಭಕ್ತರ ಅನುಕೂಲಕ್ಕೆ ಭೋಜನಾಲಯ ಕಟ್ಟಡ ನಿರ್ಮಾಣಕ್ಕೆ ರು. 5 ಲಕ್ಷ ಶಾಸಕರ ಅನುದಾನದಲ್ಲಿ ನೀಡಲಿದ್ದಾರೆಂದು ಹೇಳಿದರು.
ಸಮಾರಂಭದಲ್ಲಿ ಶಿಖರಮಠದ ಶ್ರೀಕಪಿಲ ಸಿದ್ದರಾಮೇಶ್ವರ ಸ್ವಾಮೀಜಿ, ರಾಯಚೂರಿನ ಕಿಲ್ಲೇಮಠದ ಶ್ರೀಶಾಂತಮಲ್ಲ ಶಿವಾಚಾರ್ಯ, ಮಾನ್ವಿಯ ಕಲ್ಮಠಶ್ರೀ, ಗಬ್ಬೂರಿನ ಬೂದಿಬಸವೇಶ್ವರ ಸ್ವಾಮಿ ಸೇರಿ ವಿವಿಧ ಮಠಾಧೀಶರಿದ್ದರು. ಎ.ಮಲ್ಲಿಕಾರ್ಜುನ ಪಾಟೀಲ್, ಬುಡ್ಡನಗೌಡ ಜಾಗಟಗಲ್, ಸಿ.ಎಸ್. ಪಾಟೀಲ್, ರಾಜಾ ಚಂದ್ರಹಾಸ ನಾಯಕ, ರವಿ ಪಾಟೀಲ್, ಯಕ್ಬಾಲಸಾಬ ಹೌದುಡಿ, ಶಿವನಗೌಡ ಶೆಟ್ಟಿ, ಪ್ರಕಾಶ ಖೇಣದ್, ನಾಗರಾಜ ಪಾಟೀಲ್ ಇದ್ದರು.
ಅಡ್ಡಪಲ್ಲಕ್ಕಿಗೆ ವಿರೋಧ: ಪ್ರಗತಿಪರರಿಂದ ಧರಣಿ
ದೇವದುರ್ಗ: ಪಟ್ಟಣದ ಶಿಖರ ಮಠದಿಂದ ಆಯೋಜಿಸಿರುವ ಉಜ್ಜಯಿನಿಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ವಿರೋಧಿಸಿ ಪಟ್ಟಣದಲ್ಲಿ ಭಾನುವಾರ ಬಸವ ಕೇಂದ್ರ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಸಾಂಕೇತಿಕ ಧರಣಿ ನಡೆಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ಶಿಖರಮಠದ ಸಿದ್ದರಾಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಆಯೋಜಿಸಿರುವ ಉಜ್ಜಿಯಿನಿಯಶ್ರೀ 1008 ಜಗದ್ಗುರು ಸಿದ್ದಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವವು ಅಮಾನವೀಯ ಆಚರಣೆಯಾಗಿದೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

