'ಅಧ್ಯಯನದಿಂದ ಪರಿವರ್ತನೆಗೆ ನಾಂದಿ ಹಾಡಿ'
ಸಿಂಧನೂರು: ಪ್ರಪಂಚದಲ್ಲಿ ಮಾನವ ಧರ್ಮ ಒಂದೇ, ಉಳಿದವು ಅದರ ಶಾಖೆಗಳು. ಸಂತರು, ಶರಣರು ನೀಡಿದ ಮಾನವೀಯ ಮೌಲ್ಯಗಳ ಸಂದೇಶಗಳನ್ನು ಸಾಹಿತ್ಯದ ಮೂಲಕ ಸಮಾಜ ಒಗ್ಗೂಡುವಂತೆ ಮಾಡುತ್ತಿರುವ ಶಾಂತಿ ಪ್ರಕಾಶನದ ಕಾರ್ಯ ಶ್ಲಾಘನೀಯ. ಪ್ರತಿಯೊಬ್ಬರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆ ಮೂಲಕ ಸಮಾಜ ಪರಿವರ್ತನೆಗೆ ನಾಂದಿ ಹಾಡಬೇಕಿದೆ ಎಂದು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಹೇಳಿದರು. ನಗರದ ಕರಟೂರಿ ವೆಂಕಣ್ಣನವರ ನಿವೇಶನದಲ್ಲಿ ಸೋಮವಾರ ರಾತ್ರಿ ಶಾಂತಿ ಪ್ರಕಾಶನದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿಯ ಅಂತರ್ಧಾರೆಗಳು ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರತಿಷ್ಠೆ ತಂದಿಟ್ಟ ಆತಂಕ: ಭಾರತ ಹಲವಾರು ಜಾತಿ, ಮತ, ಧರ್ಮ, ಭಾಷೆ ಹೊಂದಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಬಹು ಸಂಸ್ಕೃತಿಯ ದೇಶ. ಆದರೆ ಇತ್ತೀಚಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಅಸಮಾನತೆ, ಅಸಮಾಧಾನ, ಕಲಹ ನಡೆಯುತ್ತಿವೆ. ಧರ್ಮಗಳಲ್ಲಿ ಮೇಲು- ಕೀಳು ಎನ್ನುವ ಪ್ರತಿಷ್ಠೆ ಮಾನವತಾವಾದಕ್ಕೆ ಆತಂಕ ಉಂಟುಮಾಡಿದೆ ಎಂದರು. ಜಗತ್ತಿನಲ್ಲಿರುವ ಎಲ್ಲ ಧರ್ಮಗಳು ಮಾನವನ ಒಳಿತನ್ನೇ ಬಯಸುತ್ತವೆ. ಸೌಹಾರ್ದತೆ, ಪ್ರೀತಿಯಿಂದ ಬದುಕಬೇಕೆನ್ನುವ ಮೂಲ ವಿಚಾರಗಳನ್ನು ಬಿಟ್ಟು ಸ್ವಪ್ರತಿಷ್ಠೆಗಾಗಿ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವಂತಹ ಕಾರ್ಯ ನಡೆಯುತ್ತಿದೆ ವಿಷಾದ ವ್ಯಕ್ತಪಡಿಸಿದರು.
ಕೃತಿ ಲೋಕಾರ್ಪಣೆ: ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ ತನಾಡಿ, ಮಾತು ಹೇಗಿರಬೇಕು, ನಗರಸಭಾಧ್ಯಕ್ಷ ಜಾಫರ್ ಅಲಿ ಜಾಹಗೀರದಾರ ಖುರಾನ್ ಭಾಗ-3, ಕೆಜೆಪಿ ಮುಖಂಡ ರಾಜಶೇಖರ ಪಾಟೀಲ್ ಮಾನವ ಜೀವನ ಮತ್ತು ಪರಲೋಕ ಎನ್ನುವ ಶಾಂತಿ ಪ್ರಕಾಶನದ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.
ಸಾಹಿತ್ಯ ಮತ್ತು ಸಮಾಜ ಪರಿವರ್ತನೆ ಕುರಿತು ಪತ್ರಕರ್ತ ಡಿ.ಎಚ್. ಕಂಬಳಿ ಉಪನ್ಯಾಸ ಮಂಡಿಸಿದರು. ಅಧ್ಯಕ್ಷತೆಯನ್ನು ಲಾಲ್ ಹುಸೇನ್ ಕಂದಗಲ್ ವಹಿಸಿದ್ರು. ವೆಲ್ಫೇರ್ ಪಾರ್ಟಿಯ ಅಧ್ಯಕ್ಷ ರಸೂಲ್ ಸಾಬ್, ಸಂಚಾಲಕ ಹುಸೇನ್ಸಾಬ್, ಮಹ್ಮದ್ ದಿಲಾವರ್, ಅಂಬರಖಾನ್ ಹಾಗೂ ವೇದಿಕೆಯಲ್ಲಿದ್ದರು.
ಭಾರೀ ಮಳೆಗೆ ಬತ್ತದ ಬೆಳೆ ಹಾನಿ
ರಾಯಚೂರು: ಮಾನವಿ ತಾಲೂಕಿನ ಸಿರವಾರ ಪಟ್ಟಣದ ಸುತ್ತಲೂ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಬತ್ತದ ಬೆಳೆಗೆ ಹಾನಿಯಾಗಿದೆ. ಸಿರವಾರ ಮತ್ತು ಸುತ್ತಲಿನ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ರೈತರು ಈಚೆಗಷ್ಟೇ ಕಟಾವು ಮಾಡಿ ರಾಶಿ ಮಾಡಲು ಕೂಡಿಟ್ಟಿದ್ದ ಬತ್ತದ ಅಪಾರ ಬೆಳೆ ಮಳೆಯ ನೀರಿಗೆ ಸಿಲುಕಿ ಹಾನಿಗೀಡಾಗಿದ್ದು, ರೈತರು ಆತಂಕಕ್ಕೆ ಸಿಲುಕುವಂತಾಗಿದೆ. ಮುಂಗಾರು ಹಂಗಾಮಿನಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಸಮರ್ಪಕ ನೀರು ದೊರೆಯದೇ ತಡವಾಗಿ ರೈತರು ಬತ್ತ ಬೆಳೆದಿದ್ದರು. ಆದರೆ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ರೈತರು ಕಟಾವು ಮಾಡಿ ಗದ್ದೆಗಳಲ್ಲಿ ರಾಶಿ ಮಾಡಲು ಸಜ್ಜಾಗಿರಿಸಿದ್ದ ಬತ್ತದ ಬೆಳೆಯು ಮಳೆ ನೀರಿಗೆ ಸಿಲುಕಿ ಹಾನಿಗೀಡಾಗಿದೆ ಎಂದು ಮೂಲಗಳು ತಿಳಿಸಿವೆ.
ಹಾಲುಮತದವರು ಸಂಘಟಿತರಾಗಲಿ
ಗುಲ್ಬರ್ಗ: ಹಾಲುಮತದ ಸಂಸ್ಕ ೃತಿ ವಿಶೇಷವಾದದ್ದು, ಅದನ್ನು ಮುಂದಿನ ಪೀಳಿಗೆಯವರೆಗೆ ಮುಂದುವರಿಸಿಕೊಂಡು ಹೋಗಬೇಕು. ಸಮಾಜದ ಜನರು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಮಾಜಿ ಸಚಿವ ರೇವು ನಾಯಕ ಬೆಳಮಗಿ ಹೇಳಿದರು. ನಗರದ ಬ್ರಹ್ಮಪುರ ಧನಗರಗಲ್ಲಿಯ ಕೋರಿಮಠದ ರೇವಣಸಿದ್ದೇಶ್ವರ ತರುಣ ಸಂಘ ಕೋರಿಮಠ ಏರ್ಪಡಿಸಿದ್ದ ದಾಸ ಶ್ರೇಷ್ಠಭಕ್ತ ಕನಕದಾಸರ 526ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಹಾಲುಮತ ಸಮಾಜ ಕರ್ನಾಟಕದಲ್ಲಿ 3ನೇ ಅತಿ ದೊಡ್ಡ ಸಮಾಜವಾಗಿದೆ. ಸಮಾಜದವರು ಶಿಕ್ಷಣ ಪಡೆದು ಮುಂದೆ ಬರಬೇಕು. ಹೆಚ್ಚೆಚ್ಚು ರಾಜಕೀಯ ಅವಕಾಶಗಳು ಸಮಾಜಕ್ಕೆ ದೊರೆಯುವಂತಾಗಲು ಎಲ್ಲರು ಸಂಘಟನೆಯಿಂದ ಇರಬೇಕು ಎಂದರು. ಶಾಸಕ ದತ್ತಾತ್ರೇಯ ಪಾಟೀಲ್ ರೇವುರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಿಂಗರಾಜ ಬಿರಾದಾರ, ದೀಲಿಪ ಆರ್. ಪಾಟೀಲ್, ನಿಂಗಣ್ಣ ಪೂಜಾರಿ ಕುಸನೂರ, ಶಿವಾನಂದ ಪಾಟೀಲ್ ಅಷ್ಟಗಿ, ಅಪ್ಪು ಕಣಕಿ, ಹಣಮಂತ ಕುಸನೂರ, ಮಹೇಶ ಧರಿ, ಗಿರೆಪ್ಪ ಕಟ್ಟಿಮನಿ, ಶಂಕರ ಮೇಳಕುಂದಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

