ರಾಯಚೂರು

ರೈತ ಆತ್ಮಹತ್ಯೆಗೆ ಸರ್ಕಾರವೇ ಹೊಣೆ

Published On :

ಕ.ಪ್ರ.ವಾರ್ತೆ ರಾಯಚೂರು  ನ.28
ಕಬ್ಬು, ಹತ್ತಿ, ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆ ನೀಡದ ಸರ್ಕಾರದ ನಿರ್ಲಕ್ಷ್ಯದ ಧೋರಣೆಯಿಂದಾಗಿ ರಾಜ್ಯದಲ್ಲಿ ರೈತನ ಆತ್ಮಹತ್ಯೆಗೆ ದಾರಿ ಮಾಡಿದೆ ಎಂದು ಆರೋಪಿಸಿ ನಗರ ಯುವಘಟಕದ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಗುರುವಾರ ಸರ್ಕಾರದ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಪ್ರತಿಭಟನಾಕಾರರು ಅಣಕು ಶವಯಾತ್ರೆ ನಡೆಸಿ ಸಿಎಂ ಪ್ರತಿಕೃತಿ ದಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬೆಳಗಾವಿಯ ಸುವರ್ಣ ಸೌಧದ ಎದುರು ಬೆಳಗಾವಿಯ ಅರಭಾವಿ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ದೂರಿದರು.
ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬತ್ತ, ಹತ್ತಿ, ಕಬ್ಬು ಮತ್ತಿತರೆ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವಲ್ಲಿ ಸರ್ಕಾರ ಅಸಡ್ಡೆ ತೋರಿದ್ದರಿಂದಲೇ ರೈತ ಸಮುದಾಯ ಪ್ರತಿಭಟನೆಗೆ ಇಳಿಯುವಂತಾಗಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ರಾಜ್ಯದ ರೈತರ ಹಿತಕಾಯಲು ಮುಂದಾಗಬೇಕು. ತಕ್ಷಣ ಎಲ್ಲ ಬೆಳೆಗಳಿಗೆ ಸೂಕ್ತ ಬೆಂಬಲ ಪ್ರಕಟಿಸಿ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು. ನೊಂದ ರೈತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಹೋರಾಟಗಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಶಿವಶಂಕರ, ಎಂ.ವಿರೂಪಾಕ್ಷಿ, ನಗರಸಭೆ ಸದಸ್ಯರಾದ ಹರೀಶ ನಾಡಗೌಡ, ಮಕ್ಬೂಲ್, ನಗರ ಯುವ ಘಟಕದ ಅಧ್ಯಕ್ಷ ರಾಮಕೃಷ್ಣ ಆರ್. ಸೇರಿ ಪಕ್ಷದ ಪ್ರಮುಖರು ಹಾಗೂ ನೂರಾರು ಕಾರ್ಯಕರ್ತರಿದ್ದರು.
ಪ್ರತಿಭಟನೆ:  ಬೆಳಗಾವಿಯಲ್ಲಿ ಅರಭಾವಿಯ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಖಂಡಿಸಿ ಹಾಗೂ ಸರ್ಕಾರದಿಂದ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ನಗರದಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರವೇ ಜಿಲ್ಲಾ ಘಟಕ ಜಂಟಿಯಾಗಿ ಪ್ರತಿಭಟನೆ ನಡೆಸಿದವು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ಆಗಮಿಸಿದ ಎರಡೂ ಸಂಘಟನೆಗಳ ಕಾರ್ಯಕರ್ತರು, ರಾಜ್ಯ ಸರ್ಕಾರವು ಸಕ್ಕರೆ ಕಾರ್ಖಾನೆ ಮಾಲೀಕರ ಪರ ಧೋರಣೆ ಅನುಸರಿಸುತ್ತಿದೆ. ಅದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರವು ರೈತರ ಬಹುದಿನದ ಬೇಡಿಕೆಯತ್ತ ಗಮನಹರಿಸದಿರುವುದರಿಂದ ರೈತನ ಆತ್ಮಹತ್ಯೆಯಂಥ ಘಟನೆ ನಡೆದಿದೆ ಎಂದು ಹೋರಾಟಗಾರರು ಆರೋಪಿಸಿದರು.
ಕಬ್ಬು ಬೆಳೆದ ರೈತರಿಗೆ ವಿವಿಧ ಸಕ್ಕರೆ ಕಾರ್ಖಾನೆಗಳು 200 ಕೋಟಿ ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಈ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. ಕಬ್ಬು ಸೇರಿದಂತೆ ಎಲ್ಲ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಸರ್ಕಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಮೃತ ರೈತನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿ ಕೈ ತೊಳೆದುಕೊಳ್ಳದೇ ಆತನ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊರಬೇಕು ಎಂದು ರಾಜ್ಯಪಾಲರಿಗೆ ಕೋರಿದ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭ ಉಭಯ ಸಂಘಟನೆಗಳ ಪ್ರಮುಖರಾದ ಅಮರಣ್ಣ ಗುಡಿಹಾಳ, ಬಸನಗೌಡ ಬಲ್ಲಟಗಿ, ಲಕ್ಷ್ಮಣಗೌಡ ಕಡಗಂ ದೊಡ್ಡಿ, ನರಸಪ್ಪ ವಕ್ರಾಣಿ, ಕೆ.ವೀರೇಶಗೌಡ, ಬಸನಗೌಡ ಮಲ್ಲಿಗೆ ಮಡುವು, ಅಶೋಕಕುಮಾರ ಸಿ.ಕೆ. ಜೈನ್, ಖಲೀಲ್ ಪಾಷಾ, ರಘುವೀರನಾಯಕ, ಮಲ್ಲು, ಸಾಗರ, ಮಾನಸಿಂಗ್ ಠಾಕೂರ್ ಸೇರಿ ನೂರಾರು ಕಾರ್ಯಕರ್ತರಿದ್ದರು. ಈ ವೇಳೆ ಬೆಳಗಾವಿಯಲ್ಲಿ ಆತ್ಮಹತ್ಯೆ ಹಿನ್ನೆಲೆ ಕರವೇ ಕಾರ್ಯಕರ್ತರು ಮೌನಾಚರಿಸಿ ಸಂತಾಪ ವ್ಯಕ್ತಪಡಿಸಿದರು.
ಬೆಂಬಲ ಬೆಲೆಗೆ ಮೊರೆ:  ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಗುರುವಾರ ಪ್ರತಿ ಟನ್ ಕಬ್ಬಿಗೆ 3000 ದರ ನಿಗದಿಗೆ ಆಗ್ರಹಿಸಿ ಹಾಗೂ ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಮೃತ ರೈತನ ಕುಟುಂಬದ ವ್ಯಕ್ತಿಗೆ ಸರ್ಕಾರಿ ನೌಕರಿ ನೀಡಬೇಕು ಎಂದೂ ಸಂಘದ ಜಿಲ್ಲಾ ಸಮಿತಿ ಸಿಎಂ ಅವರಿಗೆ ಒತ್ತಾಯಿಸಿದ್ದು, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಜಾಲಹಳ್ಳಿ, ಉಪಾಧ್ಯಕ್ಷ ಕೆ.ಜಿ. ವೀರೇಶ ಜಂಟಿಯಾಗಿ ಮನವಿ ಸಲ್ಲಿಸಿ, ಸರ್ಕಾರ ಕಾರ್ಖಾನೆಗಳ ಮಾಲೀಕರ ಪರ ನಿಲುವು ರೈತನ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ಕಾರ್ಯಕರ್ತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.