ನ.1ರಂದು ರಂಗಮಂದಿರ ನಿರ್ಮಾಣಕ್ಕೆ ಒತ್ತಾಯ
ರಂಗಮಂದಿರ ಹೋರಾಟ ಸಮಿತಿಯಿಂದ ಧರಣಿ ಟಿ ಜಿಲ್ಲಾಧಿಕಾರಿ ಖಾತೆಯಲ್ಲಿದೆ 78 ಲಕ್ಷ
ಸಿಂಧನೂರು: ಒಂದುವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಂಗಮಂದಿರ ಕಾಮಗಾರಿಯನ್ನು ಆರಂಭಿಸುವಂತೆ ಒತ್ತಾಯಿಸಿ ರಂಗಮಂದಿರ ಹೋರಾಟ ಸಮಿತಿಯಿಂದ ನ.1ರಂದು ತಹಸೀಲ್ದಾರ್ ಕಾರ್ಯಲಯದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಒಮ್ಮತದಿಂದ ತೀರ್ಮಾನಿಸಲಾಯಿತು.
ನಗರದಲ್ಲಿ ಭಾನುವಾರ ಸಭೆ ಸೇರಿದ ರಂಗಭೂಮಿ ಕಲಾವಿದರು, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಲಾಸಕ್ತರು, ಹಲವು ನೆಪವೊಡ್ಡಿ ಕಾಮಗಾರಿಯನ್ನು ಜಿಲ್ಲಾಡಳಿತ ನಿರ್ಲಕ್ಷಿಸುತ್ತಾ ಬರುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ನಿರ್ಮಾಣಕಾರ್ಯ ಮತ್ತಷ್ಟು ವಿಳಂಬ: 1.34 ಕೋಟಿ ವೆಚ್ಚದ ರಂಗಮಂದಿರ ಕಾಮಗಾರಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ ನಿರ್ಮಿತಿಕೇಂದ್ರ ವಿವಿಧೆಡೆ ಅವ್ಯವಹಾರ ನಡೆಸಿ ಸಿಬಿಐಗೆ ಸಿಕ್ಕಿಬಿದ್ದಿದ್ದರಿಂದ ಸಿಂಧನೂರು ರಂಗಮಂದಿರ ನಿರ್ಮಾಣಕಾರ್ಯ ಮತ್ತಷ್ಟು ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಯಿತು.
ರಂಗಮಂದಿರ ನಿರ್ಮಾಣಕ್ಕೆ ಬಿಡುಗಡೆಯಾದ 78 ಲಕ್ಷ ಹಣ ಜಿಲ್ಲಾಧಿಕಾರಿ ಖಾತೆಯಲ್ಲಿದ್ದು, ತನಿಖೆಯ ಕಾರಣದಿಂದಾಗಿ ಉಪಯೋಗಕ್ಕೆ ಬಾರದಂತಾಗಿದೆ. ಕಾರಣ ಪರ್ಯಯವಾಗಿ ಜಿಲ್ಲಾಧಿಕಾರಿ ರಂಗಮಂದಿರ ನಿರ್ಮಾಣಕ್ಕೆ ಏನಾದರೂ ವ್ಯವಸ್ಥೆ ಕಲ್ಪಿಸಬೇಕು. ಸಿಬಿಐ ತನಿಖೆ ಮುಗಿಯುವವರೆಗೂ ಕಾಮಗಾರಿ ಸ್ಥಗಿತಗೊಂಡರೆ ಈಗಾಗಲೇ ಬುನಾದಿ ಹಾಕಿದ ಕಾಮಗಾರಿ ಶಿಥಿಲಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗೆ ಸೂಚನೆ: ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಹಂಪನಗೌಡ ಅವರು ರಂಗಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಿಲ್ಲಾ ಕಸಾಪ ಗೌರವ ಅಧ್ಯಕ್ಷ ಎಸ್. ಶರಣೇಗೌಡ ಸಭೆಗೆ ತಿಳಿಸಿದರು.
ರಂಗಮಂದಿರ ಹೋರಾಟ ಸಮಿತಿ ಅಸ್ತಿತ್ವಕ್ಕೆ ತಂದು ಸಂಚಾಲಕರು ಹಾಗೂ ಸದಸ್ಯರನ್ನು ನೇಮಿಸಲಾಯಿತು. ಜೊತೆಗೆ ರಂಗಮಂದಿರ ನಿರ್ಮಾಣವಾಗುವರೆಗೂ ಹೋರಾಟಕ್ಕೆ ಮುಂದಾಗಲು ಎಲ್ಲರಿಗೂ ಸೂಚಿಸಲಾಯಿತು.
ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್. ದೇವೇಂದ್ರಗೌಡ ಮಾತನಾಡಿ, ತಾಲೂಕಿನಲ್ಲಿ ಅನೇಕ ರಂಗಭೂಮಿ ಕಲಾವಿದರಿದ್ದು, ಸಾಹಿತ್ಯ, ಸಾಂಸ್ಕೃತಿಕ ಆಸಕ್ತರಿದ್ದಾರೆ. ಸಾಂಸ್ಕೃತಿಕ ವಾತಾವರಣ ನಿರ್ಮಾಣದ ಹಿನ್ನೆಲೆಯಲ್ಲಿ ರಂಗಮಂದಿರ ಹೋರಾಟ ಸಮಿತಿಗೆ ಪ್ರಗತಿಪರ ಸಂಘಟನೆಗಳು ಸಹಕಾರ ನೀಡುವಂತೆ ಮನವಿ ಮಾಡಿದರು.
ರಂಗಭೂಮಿ ಕಲಾವಿದ ಹುಸೇನಪ್ಪ, ವೈ.ನರೇಂದ್ರನಾಥ, ಸಮುದಾಯದ ಗೋಪಾಲಕೃಷ್ಣ, ಶ್ಯಾಮಸುಂದರ ಕೀತರ್, ಎಚ್.ಜಿ. ಹಂಪಣ್ಣ, ಖಾದರ ಸುಭಾನಿ, ಚುಸಾಪ ಜಿಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ, ಬಸವ ಯೋಗ ಸಮಿತಿಯ ಅಧ್ಯಕ್ಷ ಶಿವಣ್ಣ, ವೆಂಕಣ್ಣ ಜೋಶಿ, ಸುಭಾಷ್ ಪ್ರಾಂಕ್ಲಿನ್, ವೆಂಕನಗೌಡ ಗದ್ರಟಗಿ, ಮುರುಡಯ್ಯ ಸ್ವಾಮಿ, ಅಶೋಕ ಗದ್ರಟಗಿ, ಮನುಜಮತ ಬಳಗದ ಬಸವರಾಜ, ಅಶೋಕ ಉಮಲೂಟಿ, ಮಮತಾ ಹಿರೇಮಠ, ಕಸಾಪ ತಾಲೂಕು ಅಧ್ಯಕ್ಷೆ ರಮಾದೇವಿ ಶಂಭೋಜಿ, ಆರ್. ಆಂಬ್ರೂಸ್, ಕನ್ನಡಿಗರ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಸೈ.ರಬ್ಬಾನಿ ಜಾಗೀರದಾರ, ಉಪಾಧ್ಯಕ್ಷ ಧರ್ಮರಾಜ್ ಉಪ್ಪಾರ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

