ರಾಯಚೂರು

ನಗರ ಭೂಮಿ ಹಂಚಿಕೆ ನೀತಿ ಜಾರಿಗೊಳಿಸಿ

Published On :

ಕನ್ನಡಪ್ರಭ ವಾರ್ತೆ ರಾಯಚೂರು ಅ.28
ನಗರ ಭೂಮಿ ಹಂಚಿಕೆ ನೀತಿ ಜಾರಿಗೆ ಒತ್ತಾಯಿಸಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ನಗರ ಭೂಮಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದು ಸ್ಲಂ ನಿವಾಸಿಗಳ ಜನಸಂಖ್ಯೆಯ ಅನುಪಾತದಲ್ಲಿ ನಗರದ ಭೂಮಿಯನ್ನು ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಸ್ಲಂ ಅಭಿವೃದ್ಧಿಗೆ ಹಣ ಮೀಸಲಿಡಿ: ನಗರ, ಪಟ್ಟಣಗಳಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ಕೇಂದ್ರದ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಸಚಿವಾಲಯದಿಂದ ಸೂಚಿಸಿದಂತೆ ಮತ್ತು ಸ್ಲಂ ನಿವಾಸಿಗಳ ರಾಷ್ಟ್ರೀಯ ಮಾದರಿ ಆಸ್ತಿ ಹಕ್ಕು ಕಾಯಿದೆಯನ್ವಯ ಸ್ಲಂಗಳ ಅಭಿವೃದ್ಧಿಗೆ ಶೇ. 25ರಷ್ಟು ಹಣವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಗುಡಿಸಲುಮುಕ್ತ ರಾಜ್ಯ ಮತ್ತು 3 ಲಕ್ಷ ಮನೆ ನಿರ್ಮಾಣಕ್ಕೆ ಸಂಕಲ್ಪ ಮಾಡಿರುವ ಸರ್ಕಾರವು ಸ್ಲಂ ನಿವಾಸಿಗಳಿಗೆ ಸಮರ್ಪಕವಾದ ವಸತಿ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಂದ ಒದಗಿಸದೇ ಸರ್ಕಾರವೇ ನಿಗಮ, ಮಂಡಳಿ, ಪ್ರಾಧಿಕಾರಗಳಿಂದ ಮಂಜೂರು ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಭೂ ಒಡೆತನ ಕಲ್ಪಿಸಿ: 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ರಾಜ್ಯದ ಕೊಳಗೇರಿ ನಿವಾಸಿಗಳಿಗೆ ಭೂಮಿ ಒಡೆತನ ನೀಡಲು ಅಘೋಷಿತ ಕೊಳಚೆ ಪ್ರದೇಶಗಳನ್ನು ಕೂಡಲೇ ಘೋಷಿಸಬೇಕು. ಜಿಲ್ಲಾಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಮನವಿ ಮಾಡಿದರು.
ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಸ್ಲಂ ನಿವಾಸಿಗಳ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆಯಂತೆ ಒದಗಿಸುತ್ತಿರುವ ಸೌಲಭ್ಯವು ಖಾಸಗಿ ಶಾಲೆಗಳಿಗೆ ವರದಾನವಾಗಿದೆ. ಕೇಂದ್ರದ ಮೇಲೆ ಕೂಡಲೇ ರಾಜ್ಯ ಸರ್ಕಾರ ಒತ್ತಾಯ ಹೇರಿಕೆ ಮೂಲಕ ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣವನ್ನು ನೀಡುವ ಕಾಯಿದೆ ಜಾರಿಗೆ ಮುಂದಾಗಬೇಕೆಂದು ಆಗ್ರಹಿಸಿದರು.
'ಆಧಾರ್‌' ಕಡ್ಡಾಯ ಸರಿಯಲ್ಲ: ಸರ್ಕಾರಿ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಶಾಲೆಗಳಿಗೆ ಅಗತ್ಯ ಸೌಕರ್ಯಗಳನ್ನು ನೀಡಬೇಕು. ಆಧಾರ್ ಕಾರ್ಡುಗಳ ಕಡ್ಡಾಯಗೊಳಿಸಿ ಜನಸಾಮಾನ್ಯರ ಕೈಗೆ ಅಧಿಕಾರ ನೀಡುವ ಪರಿಕಲ್ಪನೆಯನ್ನು ಪುನಾ ಪರಿಶೀಲಿಸಬೇಕು. ಸರ್ಕಾರದ ಯೋಜನೆಗಳ ಅನುದಾನದ ಸೋರಿಕೆ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಧಾರ್ ಕಾರ್ಡ್‌ನ್ನು ಕಡ್ಡಾಯ ಮಾಡಿರುವುದು ಸರಿಯಾದ ಕ್ರಮವಲ್ಲ. ಎಲ್ಲವನ್ನೂ ಆಧಾರ ಕಾರ್ಡಿಗೆ ಸೇರ್ಪಡೆಗೊಳಿಸುವುದು ಬಡವರ ವಿರೋಧಿ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಆಧಾರ್ ಕಾರ್ಡು ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ತಾಯಣ್ಣ ಹೊಸೂರು, ಪ್ರಧಾನ ಕಾರ್ಯದರ್ಶಿ ಜನಾರ್ಧನ ಅರಳಿಬೆಂಚಿ ಸೇರಿ ನೂರಾರು ಸಂಖ್ಯೆಯ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಕಾರ್ಯಕರ್ತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.