ರಾಯಚೂರು

ಆಧುನಿಕತೆಯ ಧಾಳಿಗೆ ನಲುಗಿದ ಜಾನಪದ

Published On :

ಕನ್ನಡಪ್ರಭ ವಾರ್ತೆ ರಾಯಚೂರು ಅ.28
ಹಳ್ಳಿಗರ ಬದುಕಿಗೆ ಆಧುನಿಕತೆಯ ಪ್ರವೇಶದಿಂದ ಗ್ರಾಮೀಣರ ಬದುಕಿನಲ್ಲಿ ಹಾಸುಹೊಕ್ಕಾಗಿದ್ದ ಜಾನಪದ ಕಲೆ ಮಾಯವಾಗುತ್ತಿದೆ. ಮುಂದಿನ ಪೀಳಿಗೆಗೆ ಜಾನಪದ ಕಲೆಯನ್ನು ಉಳಿಸಿ ಬೆಳೆಸಿ ಹಸ್ತಾಂತರಿಸುವ ಕಾರ್ಯ ಇಂದಿನ ಯುವಕರು ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹೇಳಿದರು.
ಅವರು ನಗರದಲ್ಲಿ ರಂಗಮಂದಿರದಲ್ಲಿ ಸೋಮವಾರ ಕರ್ನಾಟಕ ಜಾನಪದ ಪರಿಷತ್ತಿನಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಘಟಕ ಉದ್ಘಾಟಿಸಿ, ಹಿಂದೊಮ್ಮೆ ಹೊಲ ಮತ್ತು ಮನೆಗಳಲ್ಲಿ ಕೆಲಸದ ವೇಳೆ ತಮಗಾಗುತ್ತಿದ್ದ ದುಡಿಮೆಯ ಶ್ರಮವನ್ನು ಹಳ್ಳಿಗರು ಜಾನಪದ ಹಾಡು ಹಾಡುವ ಮೂಲಕ ಮರೆಯುತ್ತಿದ್ದರು. ಅಂಥ ಅಗಾಧವಾದ ಶಕ್ತಿ ಜಾನಪದಕ್ಕಿದೆ ಎಂದು ಹೇಳಿದರು.
ಅಗಾಧ ಶಕ್ತಿ: ಜಾನಪದ ಕಲೆಯು ಇಂದು ಮಾಯವಾಗುತ್ತಿದ್ದು, ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದಿನ ಯುವಕರು ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗದೇ ಜಾನಪದ ಕಲೆ ಮತ್ತು ಸಂಗೀತದತ್ತ ಒಲವು ಮೂಡಿಸಿಕೊಳ್ಳಬೇಕು. ಜಾನಪದಕ್ಕೆ ಅಗಾಧವಾದ ಶಕ್ತಿಯಿದೆ. ಜಾನಪದ ಕಲೆ, ಕಲಾಕೃತಿಗಳ ಕುರಿತು ಯುವಕರು ಅಧ್ಯಯನ ನಡೆಸಬೇಕಿದೆ ಎಂದು ಹೇಳಿದರು.
ಜಿಲ್ಲಾ ಜಾನಪದ ಪರಿಷತ್ತಿನ ಸ್ಥಾಪನೆ ಮೂಲಕ ಜಿಲ್ಲೆಯಲ್ಲಿರುವ ಜಾನಪದ ಕಲಾವಿದರಿಗೆ ಹಾಗೂ ಜಾನಪದ ಸಂಗೀತಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆತು ಎಲ್ಲ ಕಲಾವಿದರನ್ನು ಒಗ್ಗೂಡಿಸುವ ಕಾರ್ಯವಾಗಲಿ ಎಂದು ಹಾರೈಸಿ, ಜಿಲ್ಲೆಯಲ್ಲಿ ಪರಿಷತ್ತಿನಿಂದ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಹಿನ್ನಡೆ: ಜಾನಪದ ಪರಿಷತ್ತಿನ ವ್ಯವಸ್ಥಾಪಕ ಟ್ರಸ್ಟ್ ಇಂದಿರಾ ಬಾಲಕೃಷ್ಣ ಮಾತನಾಡಿ, ವಿದೇಶಿ ಸಂಸ್ಕೃತಿಯತ್ತ ಯುವಕರ ಒಲವು ಹೆಚ್ಚುತ್ತಿರುವುದು ದೇಶೀ ಸಂಸ್ಕೃತಿಯ ಹಿನ್ನಡೆಗೆ ಕಾರಣವಾಗುತ್ತಿದೆ. ಎಲ್ಲ ಯುವಕರು ನಗರದ ಜೀವನ ಶೈಲಿಗೆ ಮಾರು ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿನ ಜನಪದರ ಜೀವನ ಮತ್ತು ಕಲೆಯನ್ನು ಅರಿಯುವ ಪ್ರಯತ್ನ ಯುವಕರು ಮಾಡಬೇಕಿದೆ ಎಂದು ಸಲಹೆ ನೀಡಿದರು.
ಪರಿಷತ್ತಿನ ರಾಜ್ಯ ಅಧ್ಯಕ್ಷ ತಿಮ್ಮೇಗೌಡ ಮಾತನಾಡಿ, ಜಾನಪದದಲ್ಲಿ ನಮ್ಮ ಸಂಸ್ಕೃತಿಯ ಮೂಲಸತ್ವ ಅಡಗಿದೆ. ವಿದ್ಯೆಯನ್ನು ಅರಿಯದವರೂ ಜಾನಪದವನ್ನು ತಲೆತಲಾಂತರದಿಂದ ಮುನ್ನಡೆಸಿಕೊಂಡು ಬಂದಿದ್ದಾರೆ. ಸಂಸ್ಕೃತಿಯ ಭಾಗವಾದ ಇಂಥ ಕಲೆಯನ್ನು ಎಲ್ಲರೂ ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.
ಇಂದಿನ ದಿನಮಾನದಲ್ಲಿ ಸಾಮಾಜಿಕ, ನೈತಿಕ ಮೌಲ್ಯಗಳ ಕುಸಿತಕ್ಕೆ ಜಾನಪದದ ಮರೆವು ಕಾರಣ. ವಿದೇಶಿ ಸಂಸ್ಕೃತಿಯ ಅನುಕರಣೆಯಿಂದ ಯುವಜನತೆಗೆ ಮೌಲ್ಯಗಳ ಬಗ್ಗೆ ಅರಿವಿನ ಕೊರತೆ ಉಂಟಾಗಿದೆ. ಅದರಿಂದ ಸಮಾಜ ಅಧಃಪತನದತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸ್ವಾಭಿಮಾನದ ಪ್ರತೀಕ: ಈಗಲೂ ಅನೇಕ ಹಳ್ಳಿಗಳಲ್ಲಿ ಜಾನಪದವು ಮನೆ ಮನೆಗಳಲ್ಲಿ ಹಾಸುಹೊಕ್ಕಾಗಿದೆ. ಜಾನಪದರ ನಡೆ- ನುಡಿ, ಜೀವನ ಶೈಲಿ ಎಲ್ಲವನ್ನು ರಕ್ಷಿಸುವುದು ಸ್ವಾಭಿಮಾನದ ಪ್ರತೀಕ ಎನಿಸಲಿದೆ. ಈ ನಿಟ್ಟಿನಲ್ಲಿ ನಿರ್ಲಕ್ಷಿಸಿದರೆ ಸಮಾಜದ ಸೋಲು ಖಂಡಿತ ಎಂದು ಎಚ್ಚರಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ 24 ಜಿಲ್ಲಾ ಘಟಕಗಳು ಈಗಾಗಲೇ ಕಾರ್ಯಾರಂಭ ಮಾಡಿದ್ದು, ಎಲ್ಲ ಜಿಲ್ಲೆಗಳಲ್ಲಿನ ಪರಿಷತ್ತಿನ ಘಟಕಗಳ ಮೂಲಕ ಜಾನಪದ ಕಲೆಯ ಸಂರಕ್ಷಣೆ ಕಾರ್ಯ ಮಾಡಲಾಗುತ್ತದೆ. ಅದರ ಜತೆಜತೆಗೆ ಜಾನಪದವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಎಚ್.ಆರ್. ರಾಜೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಜಿಲ್ಲಾ ವಾರ್ತಾಧಿಕಾರಿ ಟಿ. ಕನುಮಪ್ಪ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬೋರೆಡ್ಡಿ, ಪರಿಷತ್ತಿನ ರಾಜ್ಯ ಸಂಚಾಲಕ ಬಾಲಾಜಿ ಸೇರಿ ಅನೇಕರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಜನತೆ ಮತ್ತು ಆಸಕ್ತರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ವಿವಿಧ ಕಲಾವಿದರು ಜಾನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

'ಭಾಗ್ಯದ ಬಳೆಗಾರ' ಹಾಡು ಮೆಲಕು ಹಾಕಿದ ಜಿಲ್ಲಾಧಿಕಾರಿ
ರಾಯಚೂರು: ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ...
- ಆಧುನಿಕ ಜಗತ್ತಿನಿಂದ ಮರೆಯಾಗುತ್ತಿರುವ ಜಾನಪದ ಸಂಗೀತದ ನೆನಪು ಮರುಕಳಿಸುವಂತೆ ಮಾಡಿದ್ದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು. ಜಾನಪದ ಪರಿಷತ್ತಿನ ಉದ್ಘಾಟನೆ ನೆರವೇರಿಸಿ ಮಾತನಾಡಿ, ತಾವೂ ಗ್ರಾಮೀಣ ಹಿನ್ನೆಲೆಯವರಾಗಿದ್ದು, ಮಂಡ್ಯ ತಾಲೂಕಿನ ಹಳ್ಳಿಗಾಡಿನ ಹೊಲಗಳಲ್ಲಿ ಕೆಲಸದ ವೇಳೆ ಜಾನಪದದ ಹಾಡು ಹಾಡುತ್ತಿದ್ದ ಬಗ್ಗೆ ಸಭಿಕರರಿಗೆ ತಿಳಿಸಿ, ಭಾಗ್ಯದ ಬಳಿಗಾರ ಹೋಗಿ ಬಾ ನನ್ ತವರಿಗೆ ಹಾಡು ಸಂಪೂರ್ಣ ಹಾಡುವ ಮೂಲಕ ನೆರೆದಿದ್ದವರ ಮೆಚ್ಚುಗೆಗೆ ಪಾತ್ರರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.