ದೇವತೆಗಳ ಭಾವಚಿತ್ರ ದುರ್ಬಳಕೆ ತಡೆಯಿರಿ
ಕನ್ನಡಪ್ರಭ ವಾರ್ತೆ ರಾಯಚೂರು ಅ.28
ದೀಪಾವಳಿ ಸಂದರ್ಭ ಬಳಕೆ ಮಾಡುವ ಪಟಾಕಿಗಳ ಮೇಲೆ ಹಿಂದೂ ಧರ್ಮದ ದೇವತೆಗಳ ಭಾವಚಿತ್ರ ಬಳಕೆ ಮಾಡುತ್ತಿದ್ದು, ಪಟಾಕಿ ಸಿಡಿಸುವ ಮೂಲಕ ದೇವತೆಗಳಿಗೆ ಅಪಮಾನ ಮಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಹಿಂದೂ ದೇವತೆಗಳ ಭಾವಚಿತ್ರ ಬಳಕೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ.
ಈ ಕುರಿತು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖರಾದ ಕೃಷ್ಣವೇಣಿ ಅವರು, ಪಟಾಕಿಗಳ ಮೇಲೆ ದೇವತೆಗಳ ಭಾವಚಿತ್ರ ಮತ್ತು ರಾಷ್ಟ್ರದ ಮಹಾನ್ ವ್ಯಕ್ತಿಗಳ ಭಾವಚಿತ್ರ ಬಳಸಲಾಗುತ್ತಿದೆ. ಲಕ್ಷ್ಮೀ, ಕೃಷ್ಣ, ವಿಷ್ಣು ಮತ್ತಿತರೆ ದೇವತೆಗಳ ಭಾವಚಿತ್ರ ಬಳಕೆ ಸರಿಯಲ್ಲ ಎಂದು ಆರೋಪಿಸಿದರು.
ದೇವರಿಗೆ ಅಗೌರವ: ವಿವಿಧ ದೇವರುಗಳು ಹಾಗೂ ರಾಷ್ಟ್ರದ ನೇತಾರರ ಭಾವಚಿತ್ರವಿರುವ ಪಟಾಕಿಗಳನ್ನು ಸಿಡಿಸುವ ಮೂಲಕ ಅಪಚಾರ ಎಸಗಲಾಗುತ್ತಿದೆ. ಪಟಾಕಿ ಸಿಡಿಸಿದ ನಂತರ ಭಾವಚಿತ್ರಗಳು ವಿವಿಧೆಡೆ ತುಂಡುತುಂಡಾಗಿ ಚದುರಿ ಹೋಗುವ ಮೂಲಕ ರಸ್ತೆಯಲ್ಲಿ ಬೀಳುತ್ತವೆ. ಭಾವಚಿತ್ರದ ತುಂಡುಗಳು ಚರಂಡಿಯನ್ನೂ ಸೇರುತ್ತವೆ. ಇದರಿಂದಾಗಿ ಅಗೌರವ ತೋರಿದಂತಾಗುತ್ತಿದೆ ಎಂದು ದೂರಿದರು.
ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದರಿಂದ ಅನೇಕರಿಗೆ ಗಾಯಗಳಾದ ಹಾಗೂ ಆರ್ಥಿಕ ಹಾನಿಯಾದ ಪ್ರಸಂಗಗಳು ನಡೆದಿವೆ. ಹಿಂದೂ ಧರ್ಮೀಯರಿಗೆ ಮತ್ತು ಭಾರತೀಯ ಜನತೆಯ ಧಾರ್ಮಿಕ ಹಾಗೂ ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಕಾರ್ಯವನ್ನು ಪಟಾಕಿ ತಯಾರಕರು ಹಾಗೂ ಬಳಕೆದಾರರು ಮಾಡುತ್ತಿದ್ದಾರೆಂದು ಆರೋಪಿಸಿದರು.
ವಿವಿಧ ಕಂಪನಿಗಳಿಂದ ಕಾನೂನು ಉಲ್ಲಂಘನೆ: ದೇಶದ ಕಾನೂನಿನಂತೆ ವ್ಯಾಪಾರೀ ಉತ್ಪಾದನೆಗಳ ಮೇಲೆ ಧಾರ್ಮಿಕ ಚಿಹ್ನೆ ಮತ್ತು ಚಿತ್ರಗಳನ್ನು ಮುದ್ರಿಸುವಂತಿಲ್ಲ. ಇದು ಅಪರಾಧ. ಆದರೆ ವಿವಿಧ ಕಂಪನಿಗಳು ಕಾನೂನು ಉಲ್ಲಂಘಿಸುತ್ತಿವೆ. ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಧಾರ್ಮಿಕ ಸ್ವಾತಂತ್ರ್ಯವಿದ್ದು ಅದರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು. ಸರ್ಕಾರ ಪಟಾಕಿ ತಯಾರಕರಿಗೆ ಎಚ್ಚರಿಕೆ ನೀಡಿ ದೇವತೆಗಳು ಮತ್ತು ರಾಷ್ಟ್ರದ ಮಹಾನ್ ನಾಯಕರ ಭಾವಚಿತ್ರ ಬಳಸದಂತೆ ಎಚ್ಚರಿಸುವಂತೆ ಒತ್ತಾಯಿಸಿದರು.
ಕೂಡಲೇ ಕೇಂದ್ರ ಸರ್ಕಾರ ಪಟಾಕಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದನ್ನು ಹಾಗೂ ಹಿಂದೂ ಧರ್ಮದ ದೇವತೆಗಳ ಭಾವಚಿತ್ರ ಬಳಕೆ ಮಾಡುವುದನ್ನು ನಿಷೇಧಿಸುವಂತೆ ಆಗ್ರಹಿಸಿದರು.
ಕಲ್ಲು ಒಡೆಯಲು ಪರವಾನಗಿಗೆ ಒತ್ತಾಯಿಸಿ ಪ್ರತಿಭಟನೆ
ರಾಯಚೂರು: ನಗರದ ಸಮೀಪದ ಆಶಾಪುರದ ಗುಡ್ಡದಲ್ಲಿ ಕಲ್ಲು ಒಡೆದು ಜೀವನ ನಡೆಸಲು ಪರವಾನಗಿ ನೀಡುವಂತೆ ರಾಜ್ಯ ಬೋವಿ (ವಡ್ಡರ) ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ತಮ್ಮ ಪೂರ್ವಜರ ಕಾಲದಿಂದಲೂ ಕಲ್ಲು ಒಡೆದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದು, ಹಿರಿಯರು ಕೈಗೊಂಡ ಕಸುಬಿನಲ್ಲಿಯೇ ನೂರಾರು ಕುಟುಂಬಗಳು ಈಗ ಬದುಕು ಕಂಡುಕೊಂಡಿವೆ ಎಂದರು.
ಆರ್ಥಿಕವಾಗಿ ತೀರಾ ಹಿಂದುಳಿದಿರುವ ಜನಾಂಗದವರಿಗೆ ಕಲ್ಲು ಒಡೆಯುವ ಮೂಲಕ ಜೀವನ ನಡೆಸುವ ನಿಟ್ಟಿನಲ್ಲಿ ಆಶಾಪೂರ ಗುಡ್ಡದಲ್ಲಿನ ಕಲ್ಲು ಒಡೆಯಲು ಜಿಲ್ಲಾಡಳಿತ ಕೂಡಲೇ ಪರವಾನಗಿ ನೀಡಬೇಕು. ಸದ್ಯ ಅಧಿಕಾರಿಗಳು ಕಲ್ಲು ಒಡೆಯಲು ಅವಕಾಶ ನೀಡುತ್ತಿಲ್ಲ. ಅದರಿಂದ ಜೀವನ ನಿರ್ವಹಣೆಗೆ ಅಡಚಣೆಯಾಗಿದೆ ಎಂದು ಆರೋಪಿಸಿದರು.
ಕಾರಣ ಕೂಡಲೇ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಆಶಾಪುರ ಗುಡ್ಡದಲ್ಲಿ ಕಲ್ಲು ಒಡೆಯಲು ಪರವಾನಗಿ ನೀಡುವಂತೆ ಹೋರಾಟಗಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ನರಸಿಂಹಲು, ಹನುಮಂತ, ಬಡೆಪ್ಪ, ಬಸವರಾಜ, ಮಾರೆಪ್ಪ, ನಾಗಪ್ಪ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

