ಗ್ರಾಮೀಣ ಜನರದ್ದೇ ಅನ್ಯೋನ್ಯತೆಯ ಜೀವನ: ಈರಮ್ಮ
ಕನ್ನಡಪ್ರಭ ವಾರ್ತೆ , ಸಿಂಧನೂರು , ಅ.30
ಮಾನವೀಯ ಮೌಲ್ಯಗಳು, ಬದುಕಿನ ವಿಶ್ವಾಸ, ಆತ್ಮಸ್ಥೈರ್ಯ, ನೆಮ್ಮದಿ, ಅನ್ಯೋನ್ಯತೆಯ ಜೀವನವನ್ನು ಗ್ರಾಮೀಣ ಪ್ರದೇಶದಲ್ಲಿ ನೋಡಲು ಸಾಧ್ಯ ಎಂದು ಮಸ್ಕಿಯ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕಿ ಈರಮ್ಮ ಹಿರೇಮಠ ಹೇಳಿದರು.
ಅವರು ತಾಲೂಕಿನ ಅರಳಹಳ್ಳಿ ಗ್ರಾಮದ ರಾಮಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಅರಳಹಳ್ಳಿಯ ನಿವೇದಿತಾ ಸಮಗ್ರ ಗ್ರಾಮೀಮಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಸಾಹಿತ್ಯ ಸಿಂಚನ, ಹಿರಿಯ ಸಾಹಿತಿ ದೇವೇಂದ್ರಕುಮಾರ ಹಕಾರಿಯವರ ನೆನಹು ಹಾಗೂ ಜಾನಪದ ಸಂಜೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಹಳ್ಳಿಗಳಲ್ಲಿ ಬಾಂಧವ್ಯ, ಅನ್ಯೋನ್ಯತೆ: ಡಾ. ದೇವೆಂದ್ರಕುಮಾರ ಹಕಾರಿಯವರು ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಮಹಾನುಭಾವರು. ನಶಿಸಿ ಹೋಗುತ್ತಿರುವ ಜನಪದ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಅವರು ಜನಪದ ಸಾಹಿತ್ಯದ ಹಲವಾರು ತ್ರಿಪದಿಗಳನ್ನು ವಿಶ್ಲೇಷಿಸುತ್ತ ಮಧುರವಾದ ಬಾಂಧವ್ಯ, ಅನ್ಯೋನ್ಯತೆ ಇರುವುದು ಹಳ್ಳಿಗಳಲ್ಲಿ. ಅದನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದರು.
ದೇಶದ ಕಲೆ, ಸಂಸ್ಕೃತಿ ಸಂರಕ್ಷಿಸಿ: ಡೊಳ್ಳು ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಶ್ರೀಕೃಷ್ಣದೇವರಾಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ವೈ.ನರೇಂದ್ರನಾಥ, ದೇಶಿ ಸಂಸ್ಕೃತಿ ಜೀವಾಳವಾಗಿರುವ ಜಾನಪದ ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿ ಜೀವಂತವಾಗಿರುವುದು ಹಳ್ಳಿಗಳಲ್ಲಿ. ಸಂಸ್ಕೃತಿಯ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ, ಕನ್ನಡ ಸಾಹಿತ್ಯ ಪರಿಷತ್ತಿನ ರಚನಾತ್ಮಕ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ತಾಲೂಕಿನ ಬೇರೆ ಬೇರೆ ಗ್ರಾಮಗಳಲ್ಲಿ ಪರಿಷತ್ತಿನ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವು ಎಂದರು.
ಪತ್ರಕರ್ತರಾದ ಪಂಪಾರೆಡ್ಡಿ ಅರಳಹಳ್ಳಿ ಹಾಗೂ ಬಸವರಾಜ ಹಳ್ಳಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಅರಳಹಳ್ಳಿಯ ಪಂಪಾಪತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅರಳಹಳ್ಳಿಯ ನಿವೇದಿತಾ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಿವಪುತ್ರಪ್ಪ, ಉಪಾಧ್ಯಕ್ಷೆ ಹೇಮಲತಾ, ಜವಳಗೇರಿಯ ನಿರಂತರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಇಬ್ರಾಹಿಂ ಪಾಟೀಲ, ಕಲಮಂಗಿ ಸಿಆರ್ಪಿ ತಿಪ್ಪಣ್ಣ ನೈನಾಪೂರ ಉಪಸ್ಥಿತರಿದ್ದರು.
ವೀರೇಶ ಸಾಲಿಮಠ ಪ್ರಾರ್ಥಿಸಿದರು. ಬಸವರಾಜ್ ಕುಂಬಾರ ಸ್ವಾಗತಿಸಿದರು. ಬೀರಪ್ಪ ಶಂಭೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಮೌಳೇಶ್ವರ ಹಿರೇಮಠ ನಿರೂಪಿಸಿದರು. ವೀರೇಶ ಗೋನವಾರ ವಂದಿಸಿದರು.
ಮನರಂಜಿಸಿದ ಜಾನಪದ ಸಂಜೆ: ಆಕಾಶವಾಣಿ ದೂರದರ್ಶನ ಕಲಾವಿದ ವೀರೇಶ ಸಾಲಿಮಠ, ಸಂಗೀತ ಶಿಕ್ಷಕಿ ಎಚ್.ಭಾರತಿದೇವಿ, ಶಿಕ್ಷಕ ಮಂಜುನಾಥ ಹಾಲಾಪೂರ, ಕಲಾವಿದೆ ರಾಧಾಬಾಯಿ ಮುಬ್ರುಮಕರ್ ಜಾನಪದ ಹಾಡುಗಳನ್ನು ಹಾಡಿದರೆ, ನಾರಾಯಣಪ್ಪ ಮಾಡಶಿರವಾರ್ ತತ್ವಪದಗಳನ್ನು, ಘನಮಠದಯ್ಯ ಸ್ವಾಮಿ ಹಾಗೂ ಸಂಗಡಿಗರು ಭಜನಾ ಪದಗಳನ್ನು, ಯಂಕಪ್ಪ ಹಾಗೂ ಸಂಗಡಿಗರು ಡೊಳ್ಳಿನ ಪದಗಳನ್ನು ಹಾಡಿದರು.
ಚಿದಾನಂದಪ್ಪ ಗೋರೆಬಾಳ ಹಾರ್ಮೋನಿಯಂ ಸಾಥ್ ನೀಡಿದರೆ ಬಸವರಾಜ್ ಮೋತಿ ತಬಲಾ ಸಾಥ್ ನೀಡಿದರು. ಕುಷ್ಟಗಿ ತಾಲೂಕಿನ ಬಿಳೇಕಲ್ ಗ್ರಾಮದ ಭೀಮಾಂಬಿಕಾ ರಿವಾಯತ್ ತಂಡದವರಿಂದ ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು ಹೆಜ್ಜೆಗಳನ್ನು ಹಾಕುತ್ತ ರಿವಾಯತ್ ಪದಗಳನ್ನು ಹಾಡಿ ಜನರನ್ನು ರಂಜಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

