ರಾಯಚೂರು

ರೇಲ್ವೆ ಮೇಲ್ಸೇತುವೆಯ ಅಗಲ ವಿಸ್ತರಣೆಗೆ ಒತ್ತಾಯ

Published On :

ಕನ್ನಡಪ್ರಭ ವಾರ್ತೆ , ರಾಯಚೂರು ,  ಅ.30
ನಗರದ ಬಸವೇಶ್ವರ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ರೇಲ್ವೆ ಮೇಲ್ಸೇತುವೆಯ ಅಗಲವನ್ನು ಹೆಚ್ಚಿಸುವಂತೆ ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ನಿಯೋಗ ತೆರಳಿ ರೇಲ್ವೆ ಸಚಿವರನ್ನು ಒತ್ತಾಯಿಸಲು ಜನಸಂಗ್ರಾಮ ಪರಿಷತ್ ಆಗ್ರಹಿಸಿದೆ.
ಜನಸಂಗ್ರಾಮ ಪರಿಷತ್ತಿನ ಮುಖಂಡ ರಾಘವೇಂದ್ರ ಕುಷ್ಟಗಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದ್ಯ ಗದ್ವಾಲ್ ರೇಲ್ವೆ ಮಾರ್ಗ ನಿರ್ಮಾಣ ಹಿನ್ನೆಲೆಯಲ್ಲಿ ಬಸವೇಶ್ವರ ವೃತ್ತದ ಬಳಿಯ ರೇಲ್ವೆ ಮೇಲ್ಸೇತುವೆಯನ್ನು ವಿಸ್ತರಿಸಿ ನಿರ್ಮಿಸುವ ಕಾರ್ಯ ಜಾರಿಯಲ್ಲಿದೆ. ಆದರೆ ಸೇತುವೆಯನ್ನು ಮುಖ್ಯರಸ್ತೆಯ ಅಗಲಕ್ಕಿಂತ ಕಿರಿದಾಗಿ ನಿರ್ಮಿಸುತ್ತಿದ್ದು ಅದರಿಂದ ಸೇತುವೆ ಮೇಲ್ಭಾಗದಲ್ಲಿ ಅಪಘಾತವಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಪಘಾತಗಳಿಗೆ ಅವಕಾಶ ಕೊಟ್ಟಂತೆ.: ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯು 80 ಅಡಿ ಅಗಲವಿದ್ದು ರೇಲ್ವೆ ಮೇಲ್ಸೇತುವೆಯ ಅಗಲವನ್ನು ಸದ್ಯ 40 ಅಡಿಗೆ ನಿರ್ಮಿಸಲು ಸಿದ್ಧತೆಗಳು ನಡೆದಿವೆ. ಇದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗಲಿದೆ. ಅಷ್ಟೇ ಅಲ್ಲ ಅಪಘಾತಗಳಿಗೆ ದಾರಿಯಾಗಲಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಕೂಡಲೇ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿಯೋಗದಲ್ಲಿ ಭೇಟಿ ಮಾಡಿ ಮೇಲ್ಸೇತುವೆ ಅಗಲ ಹೆಚ್ಚಳಕ್ಕೆ ಒತ್ತಾಯಿಸಬೇಕು. ಜಿಲ್ಲೆಯ ಎಲ್ಲ ಪಕ್ಷಗಳ ನಾಯಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿ, ರಾಜ್ಯ ಸರ್ಕಾರ ಕೇಂದ್ರಕ್ಕೆ ರೇಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಸಲ್ಲಿಸಿದ ಪ್ರಸ್ತಾವನೆಯಲ್ಲಿಯೇ ದೋಷವಿದೆ. ಅದರಿಂದಾಗಿ ಸೇತುವೆ ಈ ಮೊದಲಿನಂತೆಯೇ ಕಿರಿದಾಗಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದರು.
ಷರತ್ತುಗಳ ಉಲ್ಲಂಘನೆ: ಪರಿಷತ್ತಿನ ಮುಖಂಡ ಡಾ. ರಜಾಕ್ ಉಸ್ತಾದ್ ಮಾತನಾಡಿ, ಇಂಡಿಯನ್ ರೋಡ್ ಕಾಂಗ್ರೆಸ್ ಷರತ್ತಿನಂತೆ ಸೇತುವೆಯ ಮೇಲಿನ ರಸ್ತೆಯು ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯಷ್ಟೇ ವಿಶಾಲವಾಗಿರಬೇಕು. ಹಾಗೆಯೇ ಪಾದಚಾರಿಗಳ ಸಂಚಾರಕ್ಕೆ ಪ್ರತ್ಯೇಕ ಸವಲತ್ತಿರಬೇಕು ಎಂದಿದೆ. ಆದರೆ ಅಂಥ ಯಾವುದೇ ಷರತ್ತುಗಳನ್ನು ನಗರದಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯಲ್ಲಿ ಪಾಲಿಸುತ್ತಿಲ್ಲ ಎಂದು ದೂರಿದರು.
ಸದ್ಯದ ಸೇತುವೆಯನ್ನು ಕಳೆದ 20 ವರ್ಷಗಳ ಹಿಂದಿನ ವಾಹನಗಳ ಸಂಚಾರದ ಆಧಾರದ ಮೇಲೆ ನಿರ್ಮಿಸಲಾಗುತ್ತಿದೆ. ಆದರೆ ಆನಂತರದಲ್ಲಿ ಲಕ್ಷಾಂತರ ಸಂಖ್ಯೆಯ ವಾಹನಗಳು ಈ ಸೇತುವೆ ಮೇಲೆ ಸಂಚರಿಸುತ್ತವೆ. ಈ ಕಾರಣಕ್ಕೆ ರೇಲ್ವೆ ಮೇಲ್ಸೇತುವೆಯನ್ನು ಕನಿಷ್ಠ 100 ಅಡಿಗೆ ವಿಸ್ತರಿಸಿ ನಿರ್ಮಿಸಬೇಕೆಂದು ಒತ್ತಾಯಿಸಿದರು.
ವಿಶಾಲ ಸೇತುವೆಗೆ ಅವಕಾಶವಿದೆ: ಈಗಲೂ ತಂತ್ರಜ್ಞಾನ ಬಳಸಿ ವಿಶಾಲ ಸೇತುವೆ ನಿರ್ಮಾಣಕ್ಕೆ ಅವಕಾಶವಿದೆ. ಕೂಡಲೇ ಈ ಬಗ್ಗೆ ಗಮನಹರಿಸಿ ಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜನಸಂಗ್ರಾಮ ಪರಿಷತ್ತಿನ ಪದಾಧಿಕಾರಿಗಳು ರೇಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಪರಿಷತ್ತಿನ ಪ್ರಮುಖರಾದ ಡಾ.ವಿ.ಎ. ಮಾಲಿಪಾಟೀಲ್, ಮುಮ್ತಾಜುದ್ದೀನ್, ವೆಂಕಟೇಶ್, ಸಿರಾಜ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.