ನವೋದಯ ಶಿಕ್ಷಣ ಸಂಸ್ಥೆಯಿಂದ ತೆರಿಗೆ ವಸೂಲಿ: ನಿರ್ಧಾರ
ಕನ್ನಡಪ್ರಭ ವಾರ್ತೆ, ರಾಯಚೂರು, ಅ.31
ನವೋದಯ ಶಿಕ್ಷಣ ಸಂಸ್ಥೆಯಿಂದ ತೆರಿಗೆ ವಸೂಲು ಮಾಡಲು ಅಗತ್ಯ ಕ್ರಮ. ಸಂಸ್ಥೆಯು ನ್ಯಾಯಾಲಯದಲ್ಲಿ ತೆರಿಗೆ ವಿನಾಯಿತಿಗೆ ಸಂಬಂಧಿಸಿ ಹೂಡಿರುವ ದಾವೆಗೆ ನಗರಸಭೆಯಿಂದ ಸಮರ್ಥವಾಗಿ ವಾದ ಮಂಡಿಸಲು ಹಿರಿಯ ನ್ಯಾಯವಾದಿಯೊಬ್ಬರನ್ನು ನೇಮಿಸಲು ನಗರದಲ್ಲಿ ಗುರುವಾರ ನಡೆದ ಸಾಮಾನ್ಯ ಮಹಾಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಇಲ್ಲಿನ ನಗರಸಭೆಯ ನೂತನ ಕಟ್ಟಡದ ಸಭಾಂಗಣದಲ್ಲಿ ಅಧ್ಯಕ್ಷೆ ಮಹಾದೇವಮ್ಮ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಾಮಾನ್ಯ ಮಹಾಸಭೆಯಲ್ಲಿ ಸದಸ್ಯ ಪವನಕುಮಾರ್ ಅವರು, ನವೋದಯ ಶಿಕ್ಷಣ ಸಂಸ್ಥೆಯಿಂದ ತೆರಿಗೆ ವಸೂಲಿ ಬಗ್ಗೆ ವಿಷಯ ಪ್ರಸ್ತಾಪಿಸಿದಾಗ ಎಲ್ಲ ಸದಸ್ಯರು ಒಕ್ಕೊರಳ ಸಮ್ಮತಿ ಸೂಚಿಸಿದರು.
ನವೋದಯ ಶಿಕ್ಷಣ ಸಂಸ್ಥೆಯು ನಗರಸಭೆಗೆ ಒಟ್ಟು ರು. 97 ಲಕ್ಷ ಆಸ್ತಿ ತೆರಿಗೆ ಪಾವತಿಸಬೇಕಿದೆ. ತೆರಿಗೆ ವಸೂಲು ಮಾಡಲು ಸಂಬಂಧಿಸಿ ನಗರಸಭೆ ಅಧಿಕಾರಿಗಳು ನೀಡಿದ ನೊಟೀಸ್ ಗೆ ಪ್ರತಿಯಾಗಿ ಸಂಸ್ಥೆಯು ಹೈಕೋರ್ ನಿಂದ ತಡೆಯಾಜ್ಞೆ ತಂದಿದೆ. ತೆರಿಗೆ ವಿನಾಯಿತಿ ಬಗ್ಗೆ ಸಂಸ್ಥೆಯಿಂದ ಸಲ್ಲಿಸಿದ ಪ್ರಮಾಣ ಪತ್ರಗಳು ಖೊಟ್ಟಿಯಾಗಿವೆ ಎಂಬ ಆರೋಪದ ಹಿನ್ನೆಲೆ ಸಮಗ್ರ ಪರಿಶೀಲಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಪೌರಾಯುಕ್ತ ಬಸ್ಸಪ್ಪ ಮಧ್ಯಪ್ರವೇಶಿಸಿ ಮಾತನಾಡಿ, ಹೈಕೋರ್ಟ್ನಿಂದ ತಡೆಯಾಜ್ಞೆ ನೀಡಿರುವುದರಿಂದ ಸದ್ಯ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ನಗರಸಭೆ ಪರವಾಗಿ ಹೈಕೋರ್ಟ್ನಲ್ಲಿ ವಾದ ಮಂಡಿಸಲು ನ್ಯಾಯವಾದಿಯೊಬ್ಬರ ನೇಮಕಕ್ಕೆ ಒಪ್ಪಿಗೆ ಸೂಚಿಸುವಂತೆ ಮನವಿ ಮಾಡಿದರು.
ಅದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು. ಅಷ್ಟೇ ಅಲ್ಲ ನವೋದಯ ಶಿಕ್ಷಣ ಸಂಸ್ಥೆಯವರು ನಗರಸಭೆಗೆ ತೆರಿಗೆ ಪಾವತಿಸುವವರೆಗೆ ಮುಂದಿನ ದಿನಗಳಲ್ಲಿ ಸಂಸ್ಥೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡದಂತೆ ಸದಸ್ಯರು ಒತ್ತಾಯಿಸಿದರು.
ತೆರಿಗೆ ಬಾಕಿ: ನಗರದ ಅನೇಕ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರು. ತೆರಿಗೆ ಬಾಕಿ ಉಳಿಸಿವೆ. ಡೋನೆಷನ್ ಪಡೆದು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸದಸ್ಯರಿಗೆ ಈ ಸಂಸ್ಥೆಗಳ ತೆರಿಗೆ ಬಾಕಿಯ ಮಾಹಿತಿ ಒದಗಿಸಿ ವಸೂಲಾತಿಗೆ ಕ್ರಮ ಕೈಗೊಳ್ಳುವಂತೆ ಸದಸ್ಯ ಈಶಪ್ಪ ಆಗ್ರಹಿಸಿದರು.
ನಗರದ ವಿವಿಧೆಡೆಯಿರುವ ನಗರಸಭೆಗಳ ಮಳಿಗೆಗಳಲ್ಲಿ ಬಾಡಿಗೆ ಪಾವತಿಸದ ಉಳಿದಿರುವ ವರ್ತಕರನ್ನು ಕೂಡಲೇ ತೆರವುಗೊಳಿಸಬೇಕು. ಮಳಿಗೆಯ ಟೆಂಡರ್ ಅವಧಿ ಪೂರ್ಣಗೊಂಡವರನ್ನು ಹೊರಹಾಕಿ ಹೊಸದಾಗಿ ಟೆಂಡರ್ ಕರೆದು ಮಳಿಗೆ ಗಳನ್ನು ಬಾಡಿಗೆಗೆ ನೀಡಲು ಸದಸ್ಯರು ಒತ್ತಾಯಿಸಿದರು.
ಪೌರಾಯುಕ್ತ ಬಸ್ಸಪ್ಪ ಉತ್ತರಿಸಿ, ನಗರಸಭೆಯ 206 ಮಳಿಗೆಗಳು ನಗರದಲ್ಲಿದ್ದು, 720 ರಿಂದ 1200 ರು. ವರೆಗೆ ಬಾಡಿಗೆ ದೊರೆಯುತ್ತಿದೆ. ಕೆಲ ವರ್ತಕರು ಬಾಡಿಗೆ ಪಾವಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಬಾಡಿಗೆ ನೀಡದವರನ್ನು ಮುಲಾಜಿಲ್ಲದೇ ಹೊರಹಾಕಲು ಸದಸ್ಯರ ಸಹಕಾರ ಅವಶ್ಯಕ ಎಂದರು.
ಪ್ರಸ್ತುತ ಸಾಲಿನಲ್ಲಿ ಬಿಡುಗಡೆಯಾಗಿರುವ 5.26 ಕೋಟಿ ರು. ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷರ ವಾರ್ಡ್ಗಳಿಗೆ ಹೆಚ್ಚಿನ ಅನುದಾನ ಹಾಗೂ ವಾರ್ಡ್ಗಳ ನಡುವೆ ಅನುದಾನ ಹಂಚಿಕೆಯ ತಾರತಮ್ಯ ಮಾಡುವಂತಿಲ್ಲ ಎಂದು ಸದಸ್ಯ ಜಯಣ್ಣ ಒತ್ತಾಯಿಸಿದರು.
ವಾರ್ಡ್ವಾರು ಹಣ ಹಂಚಿಕೆಗೆ ಸಂಬಂಧಿಸಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಸದಸ್ಯರ ಸಮನ್ವಯ ಸಮಿತಿ ರಚಿಸಿ ಎಲ್ಲ ಸದಸ್ಯರಿಂದ ಪ್ರಸ್ತಾವನೆ ಪಡೆದು ಕ್ರಿಯಾ ಯೋಜನೆ ತಯಾರಿಸಲು ಸಭೆ ಸಮ್ಮತಿಸಿತು.
ಕಲುಷಿತ: ನಗರಕ್ಕೆ ಕಲುಷಿತ ನೀರು ಪೂರೈಸಲಾಗುತ್ತಿದೆ. ಜನರು ನಗರಸಭೆ ಸದಸ್ಯರಿಗೆ :ೇಮಾರಿ ಹಾಕುತ್ತಿದ್ದಾರೆಂದು ಸದಸ್ಯ ಹರೀಶ್ ನೀರಿನ ಬಾಟಲಿ ಸಭೆಯಲ್ಲಿ ಹಿಡಿದು ಪ್ರದರ್ಶಿಸಿ, ಜನರಿಗೆ ಶುದ್ಧ ಕುಡಿಯುವ ನೀರು, ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸು ವುದಾಗಿ ಹೇಳಿ ಗೆದ್ದುಬಂದ ಸದಸ್ಯರು ನಾಗರಿಕರಿಗೆ ಸಮಜಾಯಿಷಿ ನೀಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಹಾಜರಿದ್ದ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ನೀರು ಶುದ್ಧೀಕರಣ ಘಟಕದ ಬಗ್ಗೆ ನಗರಸಭೆಯ ಅಧಿಕಾರಿಗಳು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಕಳೆದ ಆರು ತಿಂಗಳಿನಿಂದ ಸಲ್ಲದ ಕಾರಣಮೊಡ್ಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿದ್ದ ನೀರು ಪೂರೈಕೆ ವಿಭಾಗದ ಅಧಿಕಾರಿಗಳು ನೀರು ಶುದ್ಧೀಕರಣ ಘಟಕದ ದುರಸ್ತಿ ಕಾರ್ಯ ನಡೆಯುತ್ತಿದೆ. ಮುಂದಿನ 15 ದಿನದಲ್ಲಿ ನೀರು ಶುದ್ಧೀಕರಿಸಿ ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು.
ಕೊನೆಯಲ್ಲಿ ಅಧ್ಯಕ್ಷೆ ಮಹಾದೇವಮ್ಮ ಮಾತನಾಡಿ, ಪಕ್ಷೇತರ ಸದಸ್ಯರಾಗಿರುವ ತಾವು ಅಧ್ಯಕ್ಷರಾಗಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರು ಕಾರ್ಯನಿರ್ವಹಿಸಲು ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಪದ್ಮಾವತಿ ಸೇರಿದಂತೆ ನಗರಸಭೆಯ ಸದಸ್ಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

