ರಾಯಚೂರು

ಬೇಡಿಕೆ ಈಡೇರಿಕೆಗಾಗಿ ನಾಳೆಯಿಂದ ರೈತರ ಪಾದಯಾತ್ರೆ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಅ.31
ಬತ್ತ ಹಾಗೂ ತೊಗರಿಗೆ ವೈಜ್ಞಾನಿಕ  ಬೆಲೆ ನೀಡಬೇಕು. ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ರೈತರಿಗೆ ಸಮರ್ಪಕ ನೀರೊದಗಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ. 2ರಿಂದ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಬಣ)ದ ರಾಜ್ಯ ಕಾರ್ಯದರ್ಶಿ ಅಮೀನಪಾಷಾ ದಿದಗಿ ಹೇಳಿದರು.
ಅವರು ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಂಧನೂರು ತಾಲೂಕಿನ ಧಡೇಸೂಗೂರು ಗ್ರಾಮದಿಂದ ಪಾದಯಾತ್ರೆ ನಡೆಸಲಾಗುತ್ತಿದೆ. ರೈತರು ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ನೀರು ಹರಿಸಿ: ತುಂಗಭದ್ರಾ ಎಡದಂಡೆ ಕಾಲುವೆಯ ಕಡೆಯ ಭಾಗದ ರೈತರಿಗೆ ಸಮರ್ಪಕವಾಗಿ ಎರಡೂ ಹಂಗಾಮಿಗೆ ನೀರೊದಗಿಸಬೇಕು. ಏ. 15ರವರೆಗೆ 3600 ಕ್ಯುಸೆಕ್ ನೀರು ಕಾಲುವೆಗೆ ಹರಿಸಬೇಕೆಂದು ಒತ್ತಾಯಿಸಿದರು.
ಬತ್ತ ಬೆಳೆಗಾರರಿಗೆ ಅವರು ಮಾಡುವ ವೆಚ್ಚದ ಆಧಾರದಲ್ಲಿ ರು. 3 ಸಾವಿರ ಬೆಲೆ ನಿಗದಿ ಮಾಡಬೇಕು. ಕೃಷ್ಣಾ ನೀರಾವರಿ ಯೋಜನೆ ಅಡಿ ರೈತರ ಎರಡನೇ ಹಂಗಾಮಿನ ಬೆಳೆಗೆ ಸಮರ್ಪಕ ನೀರೊದಗಿಸಬೇಕು. ಎಲ್ಲ ತಾಲೂಕುಗಳಲ್ಲಿ ಬತ್ತ, ತೊಗರಿ, ಜೋಳ ಖರೀದಿ ಕೇಂದ್ರ ಸ್ಥಾಪಿಸಿ ರೈತರಿಂದ ಖರೀದಿಸಬೇಕು ಎಂದು ಪಾದಯಾತ್ರೆಯ ಮೂಲಕ ಒತ್ತಾಯಿಸುವುದಾಗಿ ತಿಳಿಸಿದರು.
ಸಾಲ ಮನ್ನಾ ಮಾಡಿ: ರೈತರ ನೀರೆತ್ತುವ ಮೋಟಾರ್‌ಗಳಿಗೆ ಸತತ ವಿದ್ಯುತ್ ಒದಗಿಸಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದುವರೆಗೆ ರೈತರಿಗೆ ನಾನಾ ರೀತಿಯ ಭರವಸೆ ನೀಡಿ ಈಡೇರಿಸದೇ ವಂಚಿಸಿವೆ ಎಂದು ದೂರಿದರು.
ರೈತರಿಗೆ ಸೂಕ್ತ ಬೆಲೆ ದೊರೆಯದ್ದರಿಂದ ರೈತರು ಕೃಷಿಯಲ್ಲಿ ಆರ್ಥಿಕವಾಗಿ ಹಿನ್ನಡೆ ಅನುಭವಿಸುವಂತಾಗಿದೆ. ತುಂಗಭದ್ರಾ ಮತ್ತು ಕೃಷ್ಣಾ ನದಿ ನೀರಾವರಿ ಯೋಜನೆಗಳಡಿ ಸಮರ್ಪಕ ನೀರು ದೊರೆಯದೇ ರೈತರು ಬೆಳೆ ಹಾನಿ ಎದುರಿಸುವಂತಾಗಿದೆ ಎಂದು ಟೀಕಿಸಿದರು. ಈ ಹಿನ್ನೆಲೆಯಲ್ಲಿ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ. 2ರಿಂದ ಸಿಂಧನೂರು ತಾಲೂಕಿನ ಧಡೇಸೂಗೂರು ಗ್ರಾಮದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಮೂಲಕ ಹೋರಾಟ ಆರಂಭಿಸಲಾಗುತ್ತದೆ. ನ. 7ರಂದು ರಾಯಚೂರು ತಲುಪಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.