ರಾಯಚೂರು

ನಿರ್ವಿಘ್ನ ಗಣೇಶೋತ್ಸವಕ್ಕೆ ಕ್ರಮ ಕೈಗೊಳ್ಳಿ

Published On :

ಕನ್ನಡಪ್ರಭ ವಾರ್ತೆ ,  ರಾಯಚೂರು ,  ಆ.3
ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಶಾಂತಿಯಿಂದ ಮತ್ತು ವ್ಯವಸ್ಥಿತ ರೀತಿಯಲ್ಲಿ ಆಚರಿಸಲು ಅಗತ್ಯ ವ್ಯವಸ್ಥೆ ಕೈಗೊಳ್ಳಲು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಗಣೇಶೋತ್ಸವ ಪೂರ್ವಭಾವಿ ಸಿದ್ಧತೆ ಮತ್ತು ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿ, ಗಣೇಶನ ಮೂರ್ತಿಗಳ ಸ್ಥಾಪನೆಯ ಬಗ್ಗೆ ಎಲ್ಲ ರೀತಿಯ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಗಣೇಶ ಮೂರ್ತಿ ಸ್ಥಾಪಿಸುವವರು ಈ ಮಾಹಿತಿ ಒದಗಿಸಬೇಕಿದೆ ಎಂದು ಹೇಳಿದರು.
ಅನುಮತಿ ಕಡ್ಡಾಯ: ಗಣೇಶಮೂರ್ತಿ ಸ್ಥಾಪಿಸಲು ಅನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಗಣೇಶ ಮೂರ್ತಿಗಳ ಬಳಿ ಸ್ವಚ್ಛತೆ ಕಾಪಾಡುವುದು, ತ್ಯಾಜ್ಯ ವಿಲೇವಾರಿಯಂಥ ಕಾರ್ಯ ಮಂಡಳಿಗಳು ಕೈಗೊಳ್ಳಬೇಕು. ಗಣೇಶ ವಿಸರ್ಜನೆ ವೇಳೆ ಅಗತ್ಯ ಕುಡಿಯುವ ನೀರು, ವಿದ್ಯುತ್ ಪೂರೈಕೆಯಂಥ ಸೌಲಭ್ಯ ಒದಗಿಸಲು ನಗರಸಭೆ ಅಧಿಕಾರಿಗಳು ಗಮನಹರಿಸಬೇಕು ಎಂದರು.
ಎಸ್ಪಿ ಎಂ.ಎನ್. ನಾಗರಾಜ್ ಮಾತನಾಡಿ, ಗಣೇಶ ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಗಣೇಶ ಮೂರ್ತಿಗಳನ್ನು ಸ್ಥಾಪಿಸುವ ಮಂಡಳಿಗಳು ಹೆಚ್ಚಿನ ನಿಗಾಯಿರಿಸಲು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಕ್ಕೆ ಒತ್ತು ನೀಡಬೇಕು. ಗಣೇಶನ ಮೂರ್ತಿ ಸ್ಥಾಪಿಸುವವರು ಪೊಲೀಸ್ ಇಲಾಖೆಗೆ ಲಿಖಿತ ಮನವಿ ಸಲ್ಲಿಸಿ ಪರವಾನಗಿ ಪಡೆಯಬೇಕೆಂದು ಹೇಳಿದರು.
ರಾತ್ರಿ 10ರ ನಂತರ ಧ್ವನಿವರ್ಧಕ ನಿಷೇಧ: ಗಣೇಶನ ಹಬ್ಬದ ಸಂದರ್ಭ ಧ್ವನಿವರ್ಧಕಗಳ ಬಳಕೆಯನ್ನು ರಾತ್ರಿ 10ರ ನಂತರದಲ್ಲಿ ನಿಷೇಧಿಸಲಾಗುತ್ತದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸಾಲುಗಳನ್ನು ನಿರ್ಮಿಸಬೇಕು. ಗಣೇಶ ವಿಗ್ರಹಗಳ ಸ್ಥಾಪನೆಗೆ ಸಾರ್ವಜನಿಕರಿಂದ ಒತ್ತಾಯ ಪೂರ್ವಕವಾಗಿ ಹಣ ವಸೂಲು ಮಾಡುವಂತಿಲ್ಲ. ಅಂಥ ದೂರುಗಳು ಕೇಳಿಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಗಣೇಶೋತ್ಸವ ವೇಳೆ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಮಂಟಪಗಳನ್ನು ಸ್ಥಾಪಿಸಬೇಕು. ವಾಹನಗಳ ದಟ್ಟಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಲಾಟರಿ ಹೆಸರಿನಲ್ಲಿ ಜನತೆ ಮೇಲೆ ಯಾವುದೇ ರೀತಿಯ ಒತ್ತಡ ಹೇರದಂತೆ ಎಚ್ಚರಿಸಿದರು.
ಪರಿಸರಸ್ನೇಹಿ ಮೂರ್ತಿ ಪ್ರತಿಷ್ಠಾಪಿಸಿ: ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ನಾಗರಾಜು, ಪರಿಸರ ಸ್ನೇಹಿ ಗಣೇಶಮೂರ್ತಿಗಳನ್ನು ಸ್ಥಾಪಿಸಲು ಹೆಚ್ಚಿನ ಒತ್ತು ನೀಡಬೇಕು. ಗಣೇಶನ ಮೂರ್ತಿಗಳ ವಿಸರ್ಜನೆ ಬಗ್ಗೆ ಮುಂಚಿತವಾಗಿಯೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಆ ಮೂಲಕ ನೂಕುನುಗ್ಗಲು ತಡೆಗೆ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದರು.
ಪರಿಸರ ಸ್ನೇಹಿ ವಿಷಯಗಳ ಬಗ್ಗೆ ಪರಿಸರ ಇಲಾಖೆಗೆ ಗಣೇಶೋತ್ಸವದ ಸಂದರ್ಭ ಮಾತ್ರ ನೆನಪಾಗುತ್ತದೆ. ನಗರದಾದ್ಯಂತ ಪರಿಸರ ಹಾಳಾಗುತ್ತಿದ್ದರೂ ಅದರ ಕಡೆಗೆ ಗಮನ ಕೊಡದ ಇಲಾಖೆಯು ಸದ್ಯ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳ ಸ್ಥಾಪನೆಗೆ ಮನವಿ ಮಾಡುತ್ತಿರುವುದು ಸಮಂಜಸವಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ದಶರಥ ಕಲ್ಯಾಣಕಾರಿ ಮತ್ತಿತರರು ಆಕ್ಷೇಪಿಸಿದರು.
ಮಣ್ಣಿನಿಂದ ನಿರ್ಮಿಸುವುದು ಅಸಾಧ್ಯ: ಅದೇ ರೀತಿ ವಿಹಿಂಪನ ಎಚ್.ಆರ್. ಬಲ್ಲಾಳ್ ಮಾತನಾಡಿ, ಬೃಹತ್ ಗಣೇಶನ ಮೂರ್ತಿಗಳನ್ನು ಮಣ್ಣಿನಿಂದ ನಿರ್ಮಿಸುವುದು ಅಸಾಧ್ಯ. ಮಾರುಕಟ್ಟೆಯಲ್ಲಿ ಈಗಾಗಲೇ ಗಣೇಶನ ಮೂರ್ತಿಗಳ ಮಾರಾಟ ಆರಂಭವಾದ ನಂತರ ಪರಿಸರ ಇಲಾಖೆಯು ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ದಿಢೀರ್ ಮುಂದಾಗಿರುವುದು ಹಾಸ್ಯಾಸ್ಪದ ಎಂದರು.
ಸಭೆಯಲ್ಲಿ ಮಾತನಾಡಿದ ಗಣೇಶ ಮಂಡಳಿಯ ವೀರೇಶಗೌಡ, ನಗರದ ಖಾಸಬಾವಿಯಲ್ಲಿ ಗಣೇಶಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ಅಂಥ ಬಾವಿಯ ಜೀರ್ಣೋದ್ಧಾರಕ್ಕೆ ಕೋಟಿ ರು. ಸುರಿಯಲಾಗಿದೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಬಾವಿಗೆ ಸುತ್ತಲಿನ ಪ್ರದೇಶದ ಚರಂಡಿ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ನಾಗರಾಜು ಅವರು ಖಾಸಬಾವಿಯ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಸಭೆಯಲ್ಲಿ ಹೆಚ್ಚುವರಿ ಎಸ್ಪಿ ಅಶೋಕ ಸದಲಗಿ, ಅಪರ ಜಿಲ್ಲಾಧಿಕಾರಿ ತಿಮ್ಮಪ್ಪ, ಸಹಾಯಕ ಆಯುಕ್ತೆ ಮಂಜುಶ್ರೀ, ನಗರಸಭೆ ಪೌರಾಯುಕ್ತ ಬಸಣ್ಣ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣೇಶ ಮಂಡಳಿಗಳ ಪ್ರಮುಖರು ಪಾಲ್ಗೊಂಡಿದ್ದರು.
ಸಭೆ ಹೈಲೈಟ್ಸ್...
ಟಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಗಣೇಶೋತ್ಸವ ಪೂರ್ವಭಾವಿ ಸಿದ್ಧತೆ ಮತ್ತು ಶಾಂತಿಪಾಲನಾ ಸಭೆ
ಟಿ ಸ್ವಚ್ಛತೆ ಕಾಪಾಡುವುದು, ತ್ಯಾಜ್ಯ ವಿಲೇವಾರಿಯಂಥ ಕಾರ್ಯ ಮಂಡಳಿ ಕೈಗೊಳ್ಳಬೇಕು
ಟಿ ಮಂಡಳಿಗಳು ಸಿಸಿ ಟಿವಿ ಕ್ಯಾಮೆರಾಅಳವಡಿಸುವುದಕ್ಕೆ ಒತ್ತು ನೀಡಬೇಕು
ಟಿ ಪೊಲೀಸ್ ಇಲಾಖೆಗೆ ಲಿಖಿತ ಮನವಿ ಸಲ್ಲಿಸಿ ಪರವಾನಗಿ ಪಡೆಯಬೇಕು.
ಟಿ ಧ್ವನಿವರ್ಧಕ ಬಳಕೆ ರಾತ್ರಿ 10ರ ನಂತರದಲ್ಲಿ ನಿಷೇಧಿಸಬೇಕು.
ಟಿ ಪರಿಸರ ಸ್ನೇಹಿ ಮೂರ್ತಿಗಳ ಸ್ಥಾಪನೆಗೆ ಒತ್ತು ನೀಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.