ರಾಯಚೂರು

ಲಂಬೋದರನ ಸ್ವಾಗತಕ್ಕೆ ಸಿದ್ಧತೆ ಜೋರು

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಆ.4
ಹೊರರಾಜ್ಯದಿಂದ ಆಗಮಿಸಿರುವ ಗಣೇಶನ ಮೂರ್ತಿ ತಯಾರಕರೀಗ ಫುಲ್ ಬ್ಯುಸಿ. ಸಮರ್ಪಕ ಮಳೆ, ಎಲ್ಲೆಡೆ ಹಸಿರಿನ ಖಳೆ. ರೈತಾಪಿ ವರ್ಗದಲ್ಲಿ ಸಂಭ್ರಮದ ಅಲೆ. ಪರಿಣಾಮ ಎಲ್ಲೆಲ್ಲೂ ಗಣೇಶನ ಸ್ವಾಗತಕ್ಕೆ ಜೋರಾಗಿ ನಡೆದಿರುವ ಸಿದ್ಧತೆಗಳು.
-ನಗರ ಸೇರಿ ಜಿಲ್ಲಾದ್ಯಂತ ಗಣೇಶೋತ್ಸವದ ಸಂಭ್ರಮಕ್ಕೆ ಸಜ್ಜಾಗುತ್ತಿರುವ ಪರಿಯಿದು.
ಕಳೆದ ಎರಡು ವರ್ಷದ ಭೀಕರ ಬರದಿಂದ ತತ್ತರಿಸಿದ್ದ ಜಿಲ್ಲೆಯ ರೈತರಿಗೆ ಸಮರ್ಪಕ ಮಳೆಯಾಗಿದ್ದು, ಎಲ್ಲೆಡೆ ಕೃಷಿ ಚಟುವಟಿಕೆಗಳು ನಿರಾತಂಕವಾಗಿ ಸಾಗಿವೆ. ಹೀಗಾಗಿ ಜಿಲ್ಲಾದ್ಯಂತ ಸಂಭ್ರಮ ಮನೆ ಮಾಡಿದೆ. ಅಂತೆಯೇ ಗಣೇಶೋತ್ಸವಕ್ಕೆ ಮೆರುಗು ಹೆಚ್ಚಿದೆ.
ಪಶ್ಚಿಮಬಂಗಾಳದ ಕಲಾವಿದರು: ಕಳೆದ ಅನೇಕ ಗಣೇಶೋತ್ಸವದಂತೆ ಈ ಬಾರಿಯೂ ಪಶ್ಚಿಮ ಬಂಗಾಳ ಮೂಲದ ಹತ್ತಾರು ಕಲಾವಿದರು ಕಳೆದ ಒಂದು ತಿಂಗಳಿನಿಂದ ನಗರದಲ್ಲಿ ಬಿಡಾರ ಹೂಡಿದ್ದು, ಬೃಹತ್ ಗಣೇಶನ ಮೂರ್ತಿಗಳ ತಯಾರಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಪರಿಸರ ಸ್ನೇಹಿ ಮಣ್ಣಿನಿಂದಲೂ ಗಣೇಶನ ಮೂರ್ತಿಗಳನ್ನು ತಯಾರಿಸುವುದು ರೂಢಿ.
ಹೈದರಾಬಾದ್‌ನಿಂದ ಮಣ್ಣು ತಂದು ಗಣೇಶನ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಸುಮಾರು 30ಕ್ಕೂ ಹೆಚ್ಚು ಪಶ್ಚಿಮಬಂಗಾಳ ಮೂಲಕ ಕಲಾವಿದರು ಗಣೇಶನ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. 5 ಸಾವಿರದಿಂದ 20 ಸಾವಿರವರೆಗಿನ ಬೆಲೆಯಲ್ಲಿ ಗಣೇಶನ ಮೂರ್ತಿಗಳು ಮಾರಾಟವಾಗುತ್ತಿವೆ.
ಈಗ ಫೈನಲ್ ಮಾತ್ರ ಬಾಕಿ: ನಗರದ ಒಟ್ಟು ನಾಲ್ಕೈದು ಸ್ಥಳಗಳಲ್ಲಿ ಗಣೇಶನ ಮೂರ್ತಿಗಳನ್ನು ತಯಾರಿಸಲಾಗುತ್ತಿದ್ದು, ಈಗಾಗಲೇ ಸುಮಾರು 300ರಿಂದ 500 ಮೂರ್ತಿಗಳು ಸಿದ್ಧವಾಗಿದ್ದು, ಅಂತಿಮರೂಪ ನೀಡುವ ಕಾರ್ಯಸಾಗಿದೆ. ಈ ಮಧ್ಯೆ ಗಣೇಶ ಮಂಡಳಿಗಳವರು ಮುಂಗಡವಾಗಿಯೇ ನಿರ್ಧರಿಸಿದಂತೆ ಗಣೇಶನನ್ನು ವಿವಿಧ ಆಕಾರ, ಬಣ್ಣಗಳಲ್ಲಿ ಕಲಾವಿದರು ಸಿದ್ಧಗೊಳಿಸಿ ಒದಗಿಸುತ್ತಿದ್ದಾರೆ.
ನೆರೆಯ ಆಂಧ್ರಪ್ರದೇಶದ ಆದೋನಿ, ಮಂತ್ರಾಲಯ ಸೇರಿ ಜಿಲ್ಲೆಯ ವಿವಿಧ ಪಟ್ಟಣಗಳಿಗೆ ನಗರದಲ್ಲಿಯೇ ಗಣೇಶನಮೂರ್ತಿ ತಯಾರಿಸಿ ಸಾಗಿಸಲಾಗುತ್ತದೆ. ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಪಶ್ಚಿಮ ಬಂಗಾಳ ಮೂಲಕ ಕಲಾವಿದರಾದ ಅಪುಲ್ ದಾಸ್, 'ಕಳೆದ ಸಾರಿಗಿಂತ ಈ ಬಾರಿ ಗಣೇಶನಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ 5 ಸಾವಿರದಿಂದ 20 ಸಾವಿರವರೆಗೆ ಮೂರ್ತಿಗಳು ಮಾರಾಟವಾಗುತ್ತಿವೆ' ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ಸಕಲ ಸಜ್ಜು: ಕಳೆದ ಎರಡು ವರ್ಷಗಳ ಬರದ ಛಾಯೆಯಿಂದ ಸಮೃದ್ಧಿಯೆಡೆಗೆ ಸಾಗಿರುವ ಜಿಲ್ಲೆಯಲ್ಲಿ ಗಣೇಶೋತ್ಸವಕ್ಕೆ ಜಿಲ್ಲಾಡಳಿತ ಸಕಲ ರೀತಿಯಿಂದ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಗಣೇಶ ಮಂಡಳಿಗಳ ಸಭೆ ಕರೆದು ಸಂಭ್ರಮದ ಹಬ್ಬ ಆಚರಣೆಗೆ ಪೂರಕ ಸಹಕಾರ ಕೋರಿದೆ. ಶಾಂತಿಯುತವಾಗಿ ಹಾಗೂ ಸಡಗರದ ಗಣೇಶೋತ್ಸವಕ್ಕೆ ಎಲ್ಲ ರೀತಿಯ ಸಿದ್ಧತೆ ಜಿಲ್ಲಾದ್ಯಂತ ಭರದ ಸಿದ್ಧತೆಗಳು ನಡೆದಿವೆ.
-ಜಗನ್ನಾಥ ಆರ್. ದೇಸಾಯಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.