ಮರಳು ದಂಧೆ ತಡೆಗೆ ತಂತ್ರಜ್ಞಾನ
ಕನ್ನಡಪ್ರಭ ವಾರ್ತೆ , ರಾಯಚೂರು , ಸೆ.5
ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ತಡೆಗೆ ಜಿಲ್ಲಾಡಳಿತ ಕೊನೆಗೂ ಸಿದ್ಧತೆ ನಡೆಸಿದ್ದು, ಅದರಂತೆ ಸಿಸಿ ಟಿವಿ ಮತ್ತು ಜಿಪಿಎಸ್ ತಂತ್ರಜ್ಞಾನ ಅಳವಡಿಕೆ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕಲು ಚಿಂತನೆ ನಡೆದಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಕರೆದಿದ್ದ ಜಿಲ್ಲಾ ಕಾರ್ಯಪಡೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ವಿವಿಧೆಡೆಯಿಂದ ಅಕ್ರಮವಾಗಿ ಮರಳು ಸಾಗಣೆ ದಂಧೆಗೆ ಕಡಿವಾಣ ಹಾಕಲು ಈಗಾಗಲೇ ಜಿಲ್ಲಾಡಳಿತ ಅನೇಕ ಕ್ರಮ ಕೈಗೊಂಡಿದೆ. ಆದರೂ ಅಕ್ರಮಕ್ಕೆ ಪೂರ್ಣ ತಡೆಯೊಡ್ಡುವುದು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಆಧುನಿಕ ತಂತ್ರತ್ರಜ್ಞಾನ ಅಳವಡಿಕೆಗೆ ಆದ್ಯತೆ ನೀಡಲು ಚಿಂತಿಸಲಾಗುತ್ತಿದೆ ಎಂದು ಹೇಳಿದರು.
20 ತಪಾಸಣೆ ಕೇಂದ್ರಗಳಿದ್ದರೂ ಸಾಗಣೆ: ಜಿಲ್ಲೆಯ ವಿವಿಧೆಡೆ ಒಟ್ಟು 20 ತಪಾಸಣೆ ಕೇಂದ್ರಗಳಿವೆ. ಅದರಲ್ಲಿ ಅತೀ ಹೆಚ್ಚು ಕೇಂದ್ರಗಳು ದೇವದುರ್ಗ ತಾಲೂಕಿನಲ್ಲಿವೆ. ಇಂಥ ತಪಾಸಣೆ ಕೇಂದ್ರಗಳಿದ್ದರೂ ಅಕ್ರಮ ತಡೆ ಸಾಧ್ಯವಾಗುತ್ತಿಲ್ಲ. ಸದ್ಯ ಇಂಥ ಕೇಂದ್ರಗಳಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸುತ್ತಿದ್ದು, ಅದರಿಂದ ಅಕ್ರಮ ಮರಳು ಹೊತ್ತು ಸಾಗುವ ವಾಹನಗಳಿಗೆ ಮಟ್ಟ ಹಾಕುವುದು ಸಾಧ್ಯವಾಗುತ್ತಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಶಂಕ್ರಪ್ಪ ಮನವಿ ಮಾಡಿದರು.
ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಸೂಚನೆ: ಈ ಹಿನ್ನೆಲೆಯಲ್ಲಿ ತಪಾಸಣೆ ಕೇಂದ್ರಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಆ ಮೂಲಕ ಅಕ್ರಮವಾಗಿ ಮರಳು ಸಾಗಿಸುವ ವಾಹನಗಳನ್ನು ತಡೆಯಲು ಸಾಧ್ಯ. ಜತೆಗೆ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಎಸ್ಪಿ ಸೂಕ್ತ ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿ ನಾಗರಾಜು ಸಭೆಯಲ್ಲಿ ಸೂಚಿಸಿದರು.
ತಂತ್ರಜ್ಞಾನದ ಮೊರೆ: ಮರಳು ಸಾಗಣೆಗೆ ಪರವಾನಗಿ ಪಡೆದ ಗುತ್ತಿಗೆದಾರರ ಮರಳು ಸಂಗ್ರಹಣೆ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಸಂಗ್ರಹಿಸಲಾಗುವ ಮರಳಿನ ಪ್ರಮಾಣದ ಬಗ್ಗೆ ದಾಖಲೆಗಳಲ್ಲಿ ನಮೂದಿಸಬೇಕು ಎಂದ ಜಿಲ್ಲಾಧಿಕಾರಿಗಳು, ಜಿಪಿಎಸ್ ತಂತ್ರಜ್ಞಾನದ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಸಿಕಂದರ್ ಪಾಷಾ ಮಾತನಾಡಿ, ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿಯೇ ಅತೀ ಹೆಚ್ಚು ಮರಳು ಲಭ್ಯವಿದ್ದು, ದೇವದುರ್ಗ ತಾಲೂಕಿನಿಂದ ಯಾದಗಿರಿ ಮತ್ತು ಗುಲ್ಬರ್ಗ ಜಿಲ್ಲೆಗಳಿಗೆ ಅಕ್ರಮ ಮರಳು ಸಾಗಿಸಲಾಗುತ್ತಿದೆ. ದೇವದುರ್ಗ ತಾಲೂಕಿನ ವಿವಿಧ ಮರಳು ಲಭ್ಯವಿರುವ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಹಾಗೆಯೇ ಮರಳು ಸಾಗಣೆ ಮಾರ್ಗದಲ್ಲಿಯೂ ಇಂಥ ತಂತ್ರಜ್ಞಾನ ಅಳವಡಿಕೆಗೆ ಜಿಲ್ಲಾಡಳಿತ ಮುಂದಾಗಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಸಹಾಯಕ ಆಯುಕ್ತೆ ಮಂಜುಶ್ರೀ, ಹೆಚ್ಚುವರಿ ಎಸ್ಪಿ ಅಶೋಕ ಸದಲಗಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಶಂಕ್ರಪ್ಪ, ಸಾರಿಗೆ ಅಧಿಕಾರಿ ಸಿದ್ದಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

