ಸಾಹಿತಿಗಳಿಗೆ ಚಿಂತನೆ, ದೂರದೃಷ್ಟಿ ಅವಶ್ಯ
ಕನ್ನಡಪ್ರಭ ವಾರ್ತೆ, ರಾಯಚೂರು, ಸೆ.6
ಸಾಹಿತಿಗಳಿಗೆ ಪರಿಶ್ರಮ, ಜ್ಞಾನ, ಚಿಂತನೆಯಿರಬೇಕು. ಜತೆಗೆ ವರ್ತಮಾನ, ಭೂತ, ಭವಿಷತ್ ಕಾಲದ ದೂರದೃಷ್ಟಿಯೂ ಅವಶ್ಯ ಎಂದು ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರರಾವ್ ಹೇಳಿದರು.
ನಗರದ ಸರ್ಕಾರಿ ಕಾಲೇಜಿನಲ್ಲಿ ಶುಕ್ರವಾರ ಲೋಹಿಯಾ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಸಾಹಿತಿಗಳು ದೂರದೃಷ್ಟಿಯ ಸಾಹಿತ್ಯ ರಚಿಸಬೇಕಿದೆ. ಕವಿತೆ ಬರೆಯುವುದು ಕಠಿಣ ಸಾಹಿತ್ಯ ಕೃಷಿಯಾಗಿದೆ. ಕಥೆಯನ್ನು ಬರೆಯುವುದು ಸುಲಭ. ಆದರೆ ಕವಿತೆ ಬರೆಯುವುದು ಸರಳವಲ್ಲ ಎಂದರು.
ಶಬ್ದ ಹರಳುಗಟ್ಟಲಿ: ಕವಿತೆಗಳ ರಚನೆಗೆ ಕಾಯುವಿಕೆ ಅವಶ್ಯಕ. ನಮ್ಮೊಳಗಿನ ಶಬ್ದ ಹರಳುಗಟ್ಟಿ ಕಾವ್ಯದ ರೂಪದಲ್ಲಿ ಹೊರಬರುವವರೆಗೆ ಕಾಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸತತ ಪರಿಶ್ರಮ, ಜ್ಞಾನ, ಅಧ್ಯಯನ ಮಾಡುವುದು ಅವಶ್ಯ ಎಂದ ಅವರು, ಹಿಂದಿ ಭಾಷೆ ಮತ್ತು ಅನ್ಯ ಭಾಷೆಗಳ ಪ್ರಭಾವದ ಮಧ್ಯೆಯೂ ಅನೇಕ ಸಾಹಿತಿಗಳು ಹೋರಾಟಗಾರರು ಕನ್ನಡ ಭಾಷೆಯ ಬೆಳವಣಿಗೆಗೆ ತಮ್ಮದೇ ಆದ ರೀತಿಯಲ್ಲಿ ಬಹುದೊಡ್ಡ ಕೊಡುಗೆ ನೀಡಿದ್ದಾರೆಂದು ಹೇಳಿದರು.
ವಾರಕ್ಕೊಂದು ಕೃತಿಯನ್ನಾದರೂ ಓದಿ: ಕನ್ನಡಿಗರಾದವರು ಪ್ರತಿ ತಿಂಗಳು ಕನಿಷ್ಠ ಒಂದು ಕನ್ನಡ ಕೃತಿಯನ್ನಾದರೂ ಓದುವ ರೂಢಿ ಮಾಡಿಕೊಳ್ಳಬೇಕಿದೆ. ಆಗ ಮಾತ್ರ ಕನ್ನಡ ಕೃತಿಗಳಲ್ಲಿನ ವಿಚಾರ ಅರಿಯಲು ಸಾಧ್ಯ. ವಿದ್ಯಾರ್ಥಿಗಳೂ ದಿನವೂ ಸಮಯ ಹಾಳು ಮಾಡದೇ ಗ್ರಂಥಾಲಯಗಳಲ್ಲಿ ಕುಳಿತು ಕೃತಿಗಳನ್ನು ಓದುವ ಗುಣ ರೂಢಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಕನ್ನಡ ಭಾಷೆಯ ಸತ್ವ ಅರಿಯಲು ಕನ್ನಡದ ಕಥೆ, ಕಾದಂಬರಿ ಮತ್ತು ಕವನಗಳನ್ನು ಓದುವ ಕಾರ್ಯವನ್ನು ಎಲ್ಲರೂ ಮಾಡಬೇಕಿದೆ ಎಂದ ಅವರು, ಕನ್ನಡ ಭಾಷೆಯ ಉಳಿವಿಗೆ ಶ್ರಮಿಸಿದ ಲೋಹಿಯಾ ಮತ್ತಿತರರನ್ನು ಸ್ಮರಿಸುವುದನ್ನು ಕನ್ನಡಿಗರು ಎಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು.
ಸನ್ಮಾನ: ಈ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಆರೀಫ್ ರಾಜಾ ಅವರನ್ನು ಲೋಹಿಯಾ ಪ್ರತಿಷ್ಠಾನದಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷ ಭೀಮನಗೌಡ ಇಟಗಿ, ಉಪನ್ಯಾಸಕರಾದ ಜೆ.ಎಲ್. ಈರಣ್ಣ, ಡಾ. ದಸ್ತಗೀರ್ ಸಾಬ್ ದಿನ್ನಿ, ಪಾಂಡುರಂಗ, ಶ್ರೀಮಂತ ಹೋಳಕರ್ ಮತ್ತಿತರರಿದ್ದರು. ಸರ್ಕಾರಿ ಕಾಲೇಜಿನ ಅನೇಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

