ರಾಯಚೂರು

ಜೆಡಿಎಸ್, ಕಾಂಗ್ರೆಸ್ ನಡುವೆ ಜಿದ್ದಾ ಜಿದ್ದಿ

Published On :

ಕ.ಪ್ರ. ವಾರ್ತೆ  ಮುದಗಲ್  ಸೆ.10
ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲಿ ಜಿದ್ದಾಜಿದ್ದಿ ನಡೆದಿದೆ.
 ಢಚುನಾವಣೆಗೆ ಈಗಾಗಲೇ ಸೆ.12ರಂದು ದಿನಾಂಕ ನಿಗದಿಯಾಗಿದ್ದು ಚುನಾವಣಾಧಿಕಾರಿ ತಹಸೀಲ್ದಾರರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಜೆಡಿಎಸ್ ಸದಸ್ಯರಲ್ಲೇ ಪೈಪೋಟಿ: ಜೆಡಿಎಸ್ 9 ಸದಸ್ಯರು, ಕಾಂಗ್ರೆಸ್ 7, ಬಿಎಸ್ಸಾರ್ ಕಾಂಗ್ರೆಸ್‌ನ 2, ಪಕ್ಷೇತರ ಒಬ್ಬರು ಸೇರಿದಂತೆ ಒಟ್ಟು 19 ಸದಸ್ಯರಿದ್ದು ಜೆಡಿಎಸ್ ಸಂಪೂರ್ಣ ಬಹುಮತ ಇದ್ದರೂ ಪಕ್ಷೇತರ ಅಭ್ಯರ್ಥಿ ವೀರಭದ್ರಪ್ಪ ಕೊಳ್ಳಿ, ಬಿಎಸ್ಸಾರ್ ಕಾಂಗ್ರೆಸ್‌ನ ಹೇಮಂತಕುಮಾರ ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದರಿಂದ 11 ಸದಸ್ಯರಿದ್ದಾರೆ. ಆದರೆ ಜೆಡಿಎಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಹೀರಾಬಾನು ಎಸ್.ಆರ್, ಬಂದೇನವಾಜ್, ಅಬ್ದುಲ್ ರೌಫ್, ರಜ್ಜಬ್ ಹಳೇಪೇಟೆ, ವೀರೇಶ ವಡ್ಡರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಶಾಸಕ ಮಾನಪ್ಪ ವಜ್ಜಲ್ ನಿರ್ಧಾರವೇ ಅಂತಿಮ ಎಂದು ಹೇಳಲಾಗುತ್ತಿದೆ.
ಭಿನ್ನಾಭಿಪ್ರಾಯಕ್ಕೇನು ಕಾರಣ?: ಇದರ ನಡುವೆಯೂ ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ್ ತಮ್ಮ ಪತ್ನಿಯನ್ನು ಅಧ್ಯಕ್ಷ ಸ್ಥಾನಕ್ಕೆ ಕೂಡಿಸಲು ಶತಪ್ರಯತ್ನ ನಡೆಸಿದ್ದು ಜೆಡಿಎಸ್‌ನಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಎಸ್.ಆರ್. ರಸೂಲ್ ಪತ್ನಿಯನ್ನು ಅಧ್ಯಕ್ಷರನ್ನಾಗಿ ಮಾಡಲು ಸದಸ್ಯರಾದ ಬಂದೇನವಾಜ, ಖಾಜಾಪಾಷಾ ಗಾಡಿವಾನ್, ವೀರಭದ್ರಪ್ಪ ಕೊಳ್ಳಿಯವರು ಪ್ರತ್ಯೇಕ ಗುಂಪು ರಚನೆ ಮಾಡಿಕೊಳ್ಳುವ ಮೂಲಕ ಜೆಡಿಎಸ್‌ನಿಂದ ದೂರ ಉಳಿದಿದ್ದಾರೆ.
ಶಾಸಕ ವಜ್ಜಲ್ ತಂತ್ರ: ಇತ್ತ ಜೆಡಿಎಸ್ ಬಲ ಕುಸಿಯಬಹುದು ಎನ್ನುವ ಲೆಕ್ಕಾಚಾರದಲ್ಲಿರುವ ಶಾಸಕ ಮಾನಪ್ಪ ವಜ್ಜಲ್ ಕಾಂಗ್ರೆಸ್‌ನ ನಾಲ್ಕು ಸದಸ್ಯರನ್ನು ಖರೀದಿ ಮಾಡಿ ಅಧಿಕಾರ ಹಿಡಿಯಲು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್ ಶತಪ್ರಯತ್ನ: ಜೆಡಿಎಸ್‌ನ ಒಡಕಿನ ಲಾಭ ಪಡೆಯಲು ಹವಣಿಸುತ್ತಿದ್ದ ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ನಾಲ್ಕು ಸದಸ್ಯರು ಜೆಡಿಎಸ್‌ನತ್ತ ಸಾಗಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆ ಸದಸ್ಯರನ್ನು ಮರಳಿ ಕರೆತರಲು ಪ್ರಯತ್ನ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಎಸ್.ಆರ್.ರಸೂಲ್ ಪತ್ನಿಯನ್ನು ಅಧ್ಯಕ್ಷರನ್ನಾಗಿ ಮಾಡಲು ಜೆಡಿಎಸ್‌ನ ಕೆಲ ಸದಸ್ಯರು ವಿರೋಧ ವ್ಯಕ್ತ ಪಡಿಸಿದ್ದರಿಂದ ಜೆಡಿಎಸ್‌ನಿಂದ ಹೊರಬಂದು ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆಯಲು ಪ್ರಯತ್ನ ನಡೆಸಿದ್ದರು. ಆದರೆ ಕಾಂಗ್ರೆಸ್‌ನ ಕೆಲ ಮುಖಂಡರಿಂದ ವಿರೋಧ ವ್ಯಕ್ತವಾಗಿದ್ದು, ಕಾಂಗ್ರೆಸ್ ಸದಸ್ಯರು ಜೆಡಿಎಸ್‌ಗೆ ಬೆಂಬಲ ಸೂಚಿಸಲು ಮುಂದಾಗಿರುವುದು ಚರ್ಚೆಗೆ ಕಾರಣವಾಗಿದೆ.
ಚುನಾವಣೆ ತಡೆಗೆ ಯತ್ನ: ಕೆಲ ಸದಸ್ಯರು ಗುಲ್ಬರ್ಗ ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಿ ತಡೆಗೊಳಿಸಲು ಪ್ರಯತ್ನ ನಡೆದಿದ್ದು ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎನ್ನುವುದು ನಿಗೂಢ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.