ರಾಯಚೂರು

30ರಂದು ಬೆಂಗಳೂರಲ್ಲಿ ದಸಂಸ ಬೃಹತ್ ಸಮಾವೇಶ

Published On :

ಕ.ಪ್ರ. ವಾರ್ತೆ  ರಾಯಚೂರು  ಸೆ.11
ಐತಿಹಾಸಿಕ ಪೂನಾ ಒಪ್ಪಂದದ ಕರಾಳ ನೆನಪಿಗಾಗಿ ಬೆಂಗಳೂರಿನಲ್ಲಿ ಸೆ.30ರಂದು ಬೃಹತ್ ಜನಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ರಾಜ್ಯ ಸಂಚಾಲಕ ಆರ್.ಮೋಹನ್ ರಾಜ್ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1932ರಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಮಧ್ಯೆ ಮೀಸಲಾತಿ ನೀಡಿಕೆಗೆ ಸಂಬಂಧಿಸಿ ಮಾಡಿಕೊಂಡ ಪೂನಾ ಒಪ್ಪಂದವು ದಲಿತ ಸಮುದಾಯಕ್ಕೆ ಲಾಭಕ್ಕಿಂತ ನಷ್ಟವನ್ನೇ ಹೆಚ್ಚಿನ ಪ್ರಮಾಣದಲ್ಲಿ ತಂದಿದೆ ಎಂದು ಟೀಕಿಸಿದರು.
ಶೋಷಿತ ಸಮುದಾಯಕ್ಕೆ ಮತ್ತಷ್ಟು ಅನ್ಯಾಯ: ದೇಶಕ್ಕೆ ಸ್ವಾತಂತ್ರ್ಯ ದೊರೆತು 67 ವರ್ಷಗಳೇ ಕಳೆದರೂ ಎಸ್ಸಿ- ಎಸ್ಟಿ ಮತ್ತು ಹಿಂದುಳಿದ ವರ್ಗದವರ ಸಮಸ್ಯೆಗಳು ಪರಿಹಾರ ಕಂಡಿಲ್ಲ. 1992ರಲ್ಲಿ ಜಾರಿಗೆ ಬಂದ ಖಾಸಗೀಕರಣ, ಜಾಗತೀಕರಣ ನೀತಿಗಳಿಂದಾಗಿ ಶೋಷಿತ ಸಮುದಾಯಗಳಿಗೆ ಮತ್ತಷ್ಟು ಅನ್ಯಾಯವಾಗಿದೆ ಎಂದು ಆರೋಪಿಸಿದರು. ಖಾಸಗಿ ಕ್ಷೇತ್ರದಲ್ಲಿ ಎಸ್ಸಿ- ಎಸ್ಟಿ, ಹಿಂದುಳಿದವರಿಗೆ ಮೀಸಲಾತಿ ಜಾರಿಗೆ ತರಬೇಕೆಂಬ ಬಹುದಿನಗಳ ಬೇಡಿಕೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರ ನಿರ್ಲಕ್ಷ್ಯ ತೋರಿವೆ. ಪರಿಶಿಷ್ಟ ಜಾತಿ, ಪಂಗಡದವರ ಮೀಸಲಾತಿ ಸೌಲಭ್ಯ, ಅಭಿವೃದ್ಧಿಗೆ ಮೇಲ್ವರ್ಗದವರು ಕನ್ನ ಹಾಕಿದ್ದಾರೆ. ಮೀಸಲಾತಿ ವ್ಯಾಪ್ತಿಗೆ ಕೆಲ ಮೇಲ್ಜಾತಿಯವರೂ ಸೇರ್ಪಡೆಗೊಳ್ಳುವ ಮೂಲಕ ನಿಜವಾದ ಶೋಷಿತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಸುಳ್ಳು ಜಾತಿ ಪ್ರಮಾಣಪತ್ರ- ಸರ್ಕಾರವೇ ಬೆಂಬಲ: ಮೀಸಲಾತಿಯ ಲಾಭ ಪಡೆಯಲು ಅನೇಕ ಅನ್ಯ ಜಾತಿಯವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಕೆಲಸ ಪಡೆಯುತ್ತಿದ್ದಾರೆ. ಅಂಥ ಅನೇಕ ಪ್ರಕರಣಗಳಿಗೆ ಸ್ವತಃ ರಾಜ್ಯ ಸರ್ಕಾರವೇ ಬೆಂಬಲಕ್ಕೆ ನಿಂತಿರುವುದು ದುರದೃಷ್ಟಕರ ಸಂಗತಿ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಖೊಟ್ಟಿ ಪ್ರಮಾಣ ಪತ್ರ ಪಡೆದವರನ್ನೂ ಮಾನ್ಯ ಮಾಡುವ ಮೂಲಕ ತನ್ನ ಧೋರಣೆಯನ್ನು ಸ್ಪಷ್ಟಪಡಿಸಿದೆ ಎಂದು ಟೀಕಿಸಿದರು. ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಕೆಳವರ್ಗದ ಸಿಬ್ಬಂದಿ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಮೇಲಧಿಕಾರಿಗಳ ಮೇಲೆ ಇದುವರೆಗೆ ಕಠಿಣ ಕ್ರಮ ಜರುಗಿಲ್ಲ. ಪ್ರಮಾಣಪತ್ರ ನೀಡುವವರು ಮತ್ತು ಪಡೆಯುವವರ ವಿರುದ್ಧ ಕ್ರಮ ಕೈಗೊಂಡಲ್ಲಿ ಮಾತ್ರ ಈ ಸಮಸ್ಯೆಗೆ ಪರಿಹಾರ ದೊರೆಯಲು ಸಾಧ್ಯ ಎಂದರು.
ಬಡವರ ಮೇಲೆ ದೌರ್ಜನ್ಯ: ಸರ್ಕಾರಿ ಜಮೀನಿನಲ್ಲಿ ಕೃಷಿ ಕೈಗೊಳ್ಳುತ್ತಿರುವ ಬಡ ಮತ್ತು ಭೂಹೀನರನ್ನು ಸರ್ಕಾರ ಒಕ್ಕಲೆಬ್ಬಿಸುವ ಕಾರ್ಯ ಮಾಡುತ್ತಿದೆ. ಅಂಥ ಜಮೀನನ್ನು ಬಂಡವಾಳಶಾಹಿಗಳಿಗೆ ನೀಡಲು ಮುಂದಾಗುತ್ತಿರುವುದು ಸರಿಯಲ್ಲ. ಭೂಬ್ಯಾಂಕ್ ಹೆಸರಿನಲ್ಲಿ ಬಡವರ ಮೇಲೆ ದೌರ್ಜನ್ಯ ನಡೆಸುವುದನ್ನು ಸಹಿಸಲಾಗದು ಎಂದು ಎಚ್ಚರಿಸಿದರು.
ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸದೇ ಪಟ್ಟಾ ನೀಡಬೇಕು. ಸರ್ಕಾರಿ ಜಾಗದಲ್ಲಿ ವಾಸವಾಗಿರುವ ಬಡವರಿಗೆ ನಿವೇಶನದ ಹಕ್ಕುಪತ್ರ ಒದಗಿಸಬೇಕೆಂದು ಆಗ್ರಹಿಸಿದರು.
ಸಿಎಂ ಜನಪರ ನಿಲುವು ತಳೆಯಲಿ: ಶೋಷಿತ ವರ್ಗದ ಸಮಗ್ರ ಅಭಿವೃದ್ಧಿಗೆ ಕಾರ್ಯನಿರ್ವಹಿಸುವ ಸಮಾಜ ಕಲ್ಯಾಣ ಇಲಾಖೆಯನ್ನು ಪುನಾ ಸಂಘಟಿಸುವತ್ತ ಸರ್ಕಾರ ಮುಂದಾಗಬೇಕಿದೆ. ಸಿಎಂ ಸಿದ್ದರಾಮಯ್ಯ ಅವರು, ಅಹಿಂದ ವರ್ಗಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ಸಮಾಜವಾದದ ಹಿನ್ನೆಲೆಯ ಸಿಎಂ ಎಂದು ಹೆಸರು ಗಳಿಸಿರುವ ಅವರು ಪರಿಶಿಷ್ಟ ಜಾತಿ ವರ್ಗಗಳ ಜನರ ಪರ ನಿಲುವು ತಳೆಯಬೇಕಿದೆ ಎಂದು ಒತ್ತಾಯಿಸಿದರು.
30ರಂದು ಸಮಾವೇಶ: ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿ ಜಾರಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್ಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕೆಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆ.30ರಂದು ಮ.12ಕ್ಕೆ ಬೆಂಗಳೂರಿನ ಟೌನ್ಹಾಲ್ನಲ್ಲಿ ಬೃಹತ್ ಜನಜಾಗೃತಿ ಸಮಾವೇಶ ಆಯೋಜಿಸಲಾಗಿದೆ. ಅದೇ ರೀತಿ ಅ.25ರಿಂದ 27ರವರೆಗೆ ಜಿಲ್ಲೆಯಲ್ಲಿ ರಾಜ್ಯಮಟ್ಟದ ಅಧ್ಯಯನ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು. ಈ ವೇಳೆ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ರವೀಂದ್ರನಾಥ ಪಟ್ಟಿ, ಮುಖಂಡರಾದ ಎಂ.ಆರ್.ಭೇರಿ, ಎಂ.ಈರಣ್ಣ, ಹುಲಿಗೆಪ್ಪ ಕೆಸರಟ್ಟಿ, ಮಾರೆಪ್ಪ ರೇಲ್ವೆ, ಮಹ್ಮದ್ ಅಲಿ, ಎನ್.ಕೆ.ನೆಲಹಾಳ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.