ರಾಯಚೂರು

'ದಿನಕರ ದೇಸಾಯಿ ಮಹಾನ್ ಮೇಧಾವಿ'

Published On :

ಸಿಂಧನೂರು: ಚುಟುಕುಬ್ರಹ್ಮ ದಿನಕರ ದೇಸಾಯಿ ಅವರು ನಮ್ಮಿಂದ ದೂರಾಗಿದ್ದರೂ ಅವರು ರಚಿಸಿರುವ ಚುಟುಕುಗಳು, ಸಾಹಿತ್ಯ ಅಮರವಾಗಿರುವುದರಿಂದ ಅವರ ಆದರ್ಶಗಳನ್ನು ಮರೆಯಲು ಸಾಧ್ಯವಿಲ್ಲ. ಎಲ್ಲ ಕ್ಷೇತ್ರದ ವಿಷಯ ವಸ್ತುಗಳ ಮೇಲೆ ಚುಟುಕುಗಳನ್ನು ಬರೆದು ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ ದೇಸಾಯಿಯವರು ಒಬ್ಬ ಮಹಾನ್ ಮೇಧಾವಿಯಾಗಿದ್ದರು ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬೀರಪ್ಪ ಶಂಭೋಜಿ ಹೇಳಿದರು.
ನಗರದ ಸುಕಾಲಪೇಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಚುಟುಕು ಬ್ರಹ್ಮ ದಿನಕರ ದೇಸಾಯಿಯವರ 104ನೇ ಜನ್ಮದಿನೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ದಿನಕರ ದೇಸಾಯಿಯವರ ಬದುಕು- ಬರೆಹ ಕುರಿತು ಉಪನ್ಯಾಸ ನೀಡಿದರು.
ದೇಸಾಯಿ ಸಮಾಜ ಸೇವಕರಾಗಿ, ಪತ್ರಕರ್ತರಾಗಿ ಹಾಗೂ ಲೋಕಸಭೆಯ ಸದಸ್ಯರಾಗಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿ ದಿನಕರ ದೇಸಾಯಿಯವರ ಹಲವಾರು ಚುಟುಕುಗಳನ್ನು ವಾಚಿಸಿ ಮಕ್ಕಳ ಗಮನ ಸೆಳೆದರು.
ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ, ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ದಿನಕರ ದೇಸಾಯಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಹಿತ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಹೇಳಿದರು.
ಹಿರಿಯ ಶಿಕ್ಷಕ ಹೊಳಿಯಪ್ಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳನ್ನು ಓದುವುದರ ಜೊತೆಗೆ ಸಾಹಿತ್ಯದ ಕೃತಿಗಳನ್ನು ಓದಲು ಆಸಕ್ತಿವಹಿಸಬೇಕೆಂದು ಸಲಹೆ ನೀಡಿದರು.
ಚುಟುಕು ವಾಚನ: ತಿಮ್ಮಾಪುರದ ಉಮಾದೇವಿ ಹಿರೇಮಠ, ಶಿಕ್ಷಕಿ ಬಸವರಾಜೇಶ್ವರಿ, ಹೊಳಿಯಪ್ಪ, ಕೃಷ್ಣಮೂರ್ತಿ ಕುಲಕರ್ಣಿ ತಮ್ಮ ಸ್ವರಚಿತ ಚುಟುಕುಗಳನ್ನು ವಾಚಿಸಿದರು. ನಾಗಮ್ಮ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಹಶಿಕ್ಷಕಿ ಮಂಜುಳಾ ಸ್ವಾಗತಿಸಿದರು. ನೀಲಮ್ಮ ವಂದಿಸಿದರು. ಬಸವಂತಪ್ಪ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.