ಆಡಳಿತ ವಿಫಲ
ಕನ್ನಡಪ್ರಭ ವಾರ್ತೆ ರಾಯಚೂರು ಸೆ.15
ತ್ಯಾಜ್ಯ ವಿಲೇವಾರಿಯಲ್ಲಿ ನಗರಸಭೆಯ ಅಸಮರ್ಪಕ ಕಾರ್ಯನಿರ್ವಹಣೆ. ರಾಜಕೀಯ ಪ್ರಭಾವದ ಹಿನ್ನೆಲೆ ರಾಜಾ ಕಾಲುವೆ, ಬೃಹತ್ ಚರಂಡಿಗಳ ಮೇಲೆಯೇ ಕಟ್ಟಡಗಳ ನಿರ್ಮಾಣ. ಅನಾಹುತ ಸಂಭವಿಸಿದ ನಂತರವೇ ಎಚ್ಚೆತ್ತುಕೊಳ್ಳುವ ನಗರಸಭೆಯ ಕಾರ್ಯವೈಖರಿಗೆ ನಗರದ ನಿವಾಸಿಗಳು ಹಿಡಿಶಾಪ ಹಾಕುತ್ತಲೇ ಬದುಕು ಕಳೆಯುವಂಥ ಸ್ಥಿತಿ.
ನಗರದಲ್ಲಿ ಕಳೆದ ಅನೇಕ ವರ್ಷಗಳಿಂದ ಅಲ್ಪ ಮಳೆ ಸುರಿದರೂ ಉಕ್ಕಿ ಹರಿಯುವ ಚರಂಡಿಗಳು, ರಸ್ತೆ ಸಂಚಾರಕ್ಕೆ ಆತಂಕ. ತಗ್ಗು ಪ್ರದೇಶದ ನಿವಾಸಿಗಳದ್ದು ನಿರಂತರ ಸಂಕಷ್ಟದ ಬದುಕು. ಕೊಳಚೆ ನೀರು ಮನೆ ಹೊಕ್ಕರೂ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸುವುದು ವಿಳಂಬವಾಗಿಯೇ ಎಂಬುದು ಸದ್ಯದ ಸ್ಥಿತಿ.
ರಾಯಚೂರು ಜಿಲ್ಲಾ ಕೇಂದ್ರ ಎಂದು ಗುರುತಿಸಿಕೊಂಡಿದ್ದರೂ ಜಿಲ್ಲಾ ಕೇಂದ್ರ ಮಾತ್ರ ಯಾವುದೇ ಹಳ್ಳಿಗಳಿಗಿಂತ ಭಿನ್ನವಾಗಿಲ್ಲ. ಕೆಲವೇ ತಿಂಗಳಿನ ಹಿಂದೆ ದುರಸ್ತಿಗೊಳಿಸಿದ್ದ ರಸ್ತೆಗಳು ಈಚೆಗೆ ಸುರಿದ ಮಳೆಗೆ ಹಾಳಾಗಿವೆ. ಜನತೆ ಸರ್ಕಸ್ ಮಾಡುತ್ತಲೇ ಸಾಗುವುದು ಅನಿವಾರ್ಯ ಎಂಬಂತಾಗಿದೆ.
ರಸ್ತೆ ಅವ್ಯವಸ್ಥೆ: ಅನೇಕ ಸಂಘಟನೆಗಳು ಸುರಿಯುವ ಮಳೆಯನ್ನೂ ಲೆಕ್ಕಿಸದೇ ರಸ್ತೆಯಲ್ಲಿಯೇ ಸಸಿ ನೆಟ್ಟು ಪ್ರತಿಭಟಿಸಿದರೂ, ಜನತೆ ಪ್ರಯಾಸಪಡುತ್ತಲೇ ಎದ್ದು ಬಿದ್ದೂ ರಸ್ತೆಯಲ್ಲಿ ಸಾಗಿದರೂ ಆಡಳಿತದ್ದು ಮಾತ್ರ ಜಾಣ ಕುರುಡುತನ. ಹಾಗೆಯೇ ಮಳೆಗಾಲ ಮುಗಿದ ನಂತರವೇ ರಸ್ತೆ ದುರಸ್ತಿ ಕೈಗೊಳ್ಳುವ ಭರವಸೆಯ ಹೇಳಿಕೆಗಳು ಜನತೆಗೆ ಬೇಸರ ತಂದಿವೆ.
ನಗರದಲ್ಲಿ ಅಲ್ಪ ಮಳೆಯಾದರೂ ಸರಿ ಕೈಕೊಡುವ ವಿದ್ಯುತ್, ರಸ್ತೆಗಳಿಗೆ ನುಗ್ಗುವ ಚರಂಡಿಯಲ್ಲಿನ ಕೊಳಚೆ ನೀರು ನಾಗರಿಕರ ಬದುಕು ಅಸಹನೀಯವಾಗಿಸುತ್ತವೆ. ಕಳೆದ ಅನೇಕ ವರ್ಷಗಳಿಂದ ಇಂಥದ್ದೇ ದುಸ್ಥಿತಿಯಿದೆ. ನಗರಸಭೆಯು ನಗರದಲ್ಲಿ ದಿನವೂ ಸಂಗ್ರಹವಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿರುವುದು ಚರಂಡಿಗೆ ತ್ಯಾಜ್ಯ ಸೇರಿ ಮಳೆಯಾದಾಗ ನೀರು ಸರಾಗ ಸಾಗದೇ ರಸ್ತೆಗೆ ನುಗ್ಗುತ್ತದೆ.
ಭಾನುವಾರ ಸುರಿದ ಕುಂಭದ್ರೋಣ ಮಳೆಯ ವೇಳೆ ಚರಂಡಿ ನೀರು ನಿವಾಸಿಗಳ ಮನೆಗೆ ನುಗ್ಗಿದೆ. ರಾತ್ರಿಯಿಡೀ ಜನತೆಯ ನೆಮ್ಮದಿ ಹಾಳಾಗಿದೆ. ಆಡಳಿತಕ್ಕೆ ಹಿಡಿಶಾಪ ಹಾಕುತ್ತಲೇ ಕಾಲ ಕಳೆದಿದ್ದಾರೆ. ಅನೇಕರು ಮನೆಯಲ್ಲಿ ಸಂಗ್ರಹಿಸಿದ್ದ ಆಹಾರ ಧಾನ್ಯ ಕೊಳಚೆ ನೀರಿಗೆ ಸಿಲುಕಿ ನಾಶವಾದರೆ, ಬಸವನಬಾವಿ ವೃತ್ತದಿಂದ ರಾಜೇಂದ್ರ ಗಂಜ್ ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಸಂಗ್ರಹಿಸಿದ್ದ ಅಕ್ಕಿ, ಸಿಮೆಂಟ್ ದಾಸ್ತಾನು ನೀರು ಪಾಲಾಗಿದೆ. ಪರಿಣಾಮ ವರ್ತಕರು ಲಕ್ಷಾಂತರ ರು. ಹಾನಿ ಭೀತಿಗೆ ಸಿಲುಕಿದ್ದಾರೆ.
ಗ್ರಾಮೀಣ ಭಾಗದಲ್ಲಿ ನಿರ್ಲಕ್ಷ್ಯ: ತಾಲೂಕಿನ ಹೆಗ್ಗಸನಹಳ್ಳಿ ಗ್ರಾಮದಲ್ಲಿ ಗ್ರಾಮದ ಪಕ್ಕದಲ್ಲಿರುವ ಹಳ್ಳದಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದರಿಂದ ಹಳ್ಳದ ನೀರು ಮನೆಗಳಿಗೆ ನುಗ್ಗಿದೆ. ಕಳೆದ 2009ರಲ್ಲಿಯೂ ಇಂಥದ್ದೇ ಪ್ರವಾಹವನ್ನು ಗ್ರಾಮಸ್ಥರು ಎದುರಿಸಿದ್ದರು. ಆನಂತರದಲ್ಲಿ ತಾಲೂಕು ಆಡಳಿತ ಮತ್ತು ಗ್ರಾಪಂ ಎಚ್ಚೆತ್ತುಕೊಳ್ಳದ್ದರಿಂದ ಮತ್ತೆ ಅಂಥದ್ದೆ ಆತಂಕದಲ್ಲಿ ಗ್ರಾಮಸ್ಥರು ಸಿಲುಕಿ ಸಂಕಷ್ಟ ಅನುಭವಿಸಿದ್ದಾರೆ. ಹೆಗ್ಗಸನಹಳ್ಳಿ ಗ್ರಾಮದ ಸ್ಥಳಾಂತರಕ್ಕೆ ಆಸರೆ ಮನೆ ನಿರ್ಮಿಸಿದ್ದರೂ ಮೂಲಸೌಲಭ್ಯ ಒದಗಿ ಸುವಲ್ಲಿ ಅಧಿಕಾರಿಗಳು ತೋರಿದ ಅಸಡ್ಡೆಗೆ ಸದ್ಯ ಗ್ರಾಮಸ್ಥರು ಹಳ್ಳದ ಪ್ರವಾಹ ಸಮಸ್ಯೆಗೆ ಮತ್ತೆ ಸಿಲುಕುವಂತಾಗಿದೆ.
ಮಳೆ ನೀರು ಮನೆ ಹೊಕ್ಕ ಸುದ್ದಿ ತಿಳಿದ ನಂತರವೇ ತ್ಯಾಜ್ಯ ತೆರವು ಕಾರ್ಯಕ್ಕೆ ಚಾಲನೆ, ಪ್ರವಾಹ ಬಂದಾಗಲೇ ಗ್ರಾಮದ ಸುರಕ್ಷತೆಗೆ ತಡೆಗೋಡೆ ನಿರ್ಮಿಸುವ ಆಲೋಚನೆ ವೇಗ ಪಡೆಯುವುದು ಸಾರ್ವಜನಿಕರಲ್ಲಿ ಜನಪ್ರತಿನಿಧಿಗಳು ಹಾಗೂ ಆಡಳಿತದ ಅವ್ಯವಸ್ಥೆಗೆ ಬೇಸರ ಮೂಡಿಸಿದೆ. 'ಕನ್ನಡಪ್ರಭ'ಕ್ಕೆ ಮಾತನಾಡಿದ ಹೆಸರು ಹೇಳಲಿಚ್ಛಿಸದ ನಗರದ ನಿವಾಸಿಯೊಬ್ಬರು, ಅಪಾಯ ಎದುರಾದಾಗಲೇ ಎಚ್ಚೆತ್ತುಕೊಳ್ಳುವ ಆಡಳಿತದಿಂದ ಹೆಚ್ಚಿನದನ್ನೂ ನಿರೀಕ್ಷಿಸಲಾಗದು. ಆಸ್ತಿ ರಕ್ಷಣೆ ನಮ್ಮದೇ ಹೊಣೆ ಎಂಬುದು ನಗರಸಭೆಯ ಕಾರ್ಯವೈಖರಿಯಿಂದ ಸ್ಪಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದು ವ್ಯವಸ್ಥೆಗೆ ಹಿಡಿದ ಕನ್ನಡಿಯೇ ಸರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

