ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನಾ ರ್ಯಾಲಿ
ಕನ್ನಡಪ್ರಭ ವಾರ್ತೆ ರಾಯಚೂರು ಸೆ.16
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಹಳೆಯ ಕಾಲೇಜು ಕಟ್ಟಡದಲ್ಲಿ ಮೂಲ ಸೌಲಭ್ಯಗಳ ಕೊರತೆ ಪರಿಹರಿಸುವಂತೆ ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ನಗರದ ಪ್ರಮುಖ ರಸ್ತೆಯಲ್ಲಿ ಎಐಡಿಎಸ್ಒ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕಾಲೇಜು ಕಟ್ಟಡ ಹಳೆಯದಾಗಿದ್ದು, ಕಟ್ಟಡದಲ್ಲಿ ಶೌಚಾಲಯವಿದ್ದರೂ ಸ್ವಚ್ಛತೆ ಕಂಡಿಲ್ಲ ಎಂದು ಆರೋಪಿಸಿದರು.
ಮೂತ್ರ ವಿಸರ್ಜನೆಗೆ ತೊಂದರೆ: ಪದವಿ ಪೂರ್ವ ಕಾಲೇಜಿನಲ್ಲಿ 400ರಿಂದ 500ರಷ್ಟು ವಿದ್ಯಾರ್ಥಿಗಳಿದ್ದು, ಶೌಚಾಲಯ ಸ್ವಚ್ಛಗೊಳಿಸಲು ಹಣವಿಲ್ಲ ಎಂಬ ಕಾರಣ ಹೇಳಿ ಶೌಚಾಲಯಕ್ಕೆ ಬೀಗ ಹಾಕಲಾಗಿದೆ.
ಕಾಲೇಜು ನಗರದ ಮಧ್ಯಭಾಗದಲ್ಲಿದ್ದು, ಅದರಿಂದ ವಿದ್ಯಾರ್ಥಿಗಳಿಗೆ ಮೂತ್ರ ವಿಸರ್ಜನೆಗೆ ತೊಂದರೆಯಾಗಿದೆ ಎಂದು ದೂರಿದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಅದರಿಂದಾಗಿ ವಿದ್ಯಾರ್ಥಿಗಳು ನೀರಿಗಾಗಿ ಅಲೆದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಕಾರಣ ಜಿಲ್ಲಾಡಳಿತ ಕೂಡಲೇ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕೆಂದು ಆಡಳಿತವನ್ನು ಒತ್ತಾಯಿಸಿದರು.
ಮಳೆ ನೀರು ಸೋರಿಕೆ: ಕಾಲೇಜು ಕಟ್ಟಡ ತೀರಾ ಹಳೆಯದಾಗಿದ್ದು, ಪ್ರತಿ ಬಾರಿ ಮಳೆಯಾದಗಲೆಲ್ಲ ಚಾವಣಿಯು ಸೋರುತ್ತದೆ. ಅದರಿಂದಾಗಿ ವಿದ್ಯಾರ್ಥಿಗಳು ಆತಂಕದಲ್ಲಿಯೇ ವ್ಯಾಸಂಗ ಮಾಡುವಂತಾಗಿದೆ.
ಕಾಲೇಜಿನಲ್ಲಿ ಈಗಾಗಲೇ ನಾಲ್ಕು ನೂತನ ಕೊಠಡಿಗಳನ್ನು ನಿರ್ಮಿಸಿದ್ದರೂ ಅವುಗಳನ್ನು ಬಳಕೆ ಮಾಡಿಕೊಂಡಿಲ್ಲ ಎಂದು ಆರೋಪಿಸಿದರು.
ನೂತನ ಕಟ್ಟಡಗಳ ಬಳಕೆಗೆ ಜಿಲ್ಲಾಡಳಿತ ಅನುಮತಿ ನೀಡಬೇಕು.
ಹಾಗೆಯೇ ಈಗಾಗಲೇ ಹಳೆಯದಾಗಿರುವ ಕಟ್ಟಡಗಳನ್ನು ದುರಸ್ತಿಗೊಳಿಸಬೇಕು. ಈ ಹಿಂದೆ ಜಿಲ್ಲಾ ಪಂಚಾಯಿತಿಯ ಸಭೆಗಳಿಗೆ ಬಳಕೆಯಾಗುತ್ತಿದ್ದ ಇಲ್ಲಿನ ಕ್ರಾಫ್ಟ್ ಹಾಲ್ ಕಟ್ಟಡವೂ ಸರ್ಕಾರಿ ಕಾಲೇಜಿಗೆ ಸೇರಿದ್ದು, ಅದನ್ನು ಪುನಾ ಕಾಲೇಜಿಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿದರು.
ಕಾಲೇಜಿಗೆ ಕ್ರಾಫ್ಟ್ ಹಾಲ್ ಪ್ರದೇಶ ಹಸ್ತಾಂತರಿಸಿ: ಕ್ರಾಫ್ಟ್ ಹಾಲ್ ಪ್ರದೇಶವನ್ನು ಪದವಿ ಪೂರ್ವ ಕಾಲೇಜಿಗೆ ಹಸ್ತಾಂತರಿಸಿದಲ್ಲಿ ಪಠ್ಯೇತರ ಚಟುವಟಿಕೆ ನಡೆಸಲು ನೆರವಾಗಲಿದೆ. ಕಾರಣ ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು.
ಕಾಲೇಜಿನಲ್ಲಿರುವ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಕೋರಿ ಅನೇಕ ಬಾರಿ ಕಾಲೇಜಿನ ಪ್ರಾಚಾರ್ಯರು ಹಾಗೂ ಕಾಲೇಜಿಗೆ ಭೇಟಿ ನೀಡುವ ಎಲ್ಲ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಟೀಕಿಸಿದರು.
ಜಿಲ್ಲಾಡಳಿತ ಕೂಡಲೇ ಶೌಚಾಲಯಕ್ಕೆ ಹಾಕಿರುವ ಬೀಗ ತೆರವುಗೊಳಿಸಬೇಕು. ಸ್ವಚ್ಛತೆ ಕಾರ್ಯ ಕೈಗೊಳ್ಳಲು ಸಿಬ್ಬಂದಿ ನೇಮಿಸಿ ಸೂಕ್ತ ಹಣಕಾಸಿನ ಸೌಲಭ್ಯ ಒದಗಿಸಬೇಕು.
ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರೊದಗಿಸಬೇಕು. ನಿರ್ಮಾಣಗೊಂಡು ಬಳಕೆಯಾಗದೇ ಉಳಿದ ನೂತನ ನಾಲ್ಕು ಕೊಠಡಿಗಳ ಬಳಕೆಗೆ ಅನುಮತಿ ನೀಡಬೇಕು. ಹಳೆಯ ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಐಡಿಎಸ್ ಸಂಘಟನೆಯ ಜಿಲ್ಲಾಧ್ಯಕ್ಷ ಮಹೇಶ ಚೀಕಲಪರ್ವಿ, ಪ್ರಮೋದ್ ಕುಮಾರ್, ಆಂಜನೇಯ ಕಲ್ಲೂರು, ಪ್ರಸಾದ್, ಮಹೇಶ್ ಕುಮಾರ್, ರಾಜು, ಎಂ.ಆಂಜನೇಯ ಸೇರಿ ನೂರಾರು ವಿದ್ಯಾರ್ಥಿಗಳು ಅವ್ಯವಸ್ಥೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

