ಮಳೆಗೆ ತಾಯಿ-ಮಗ ಬಲಿ
ಕ.ಪ್ರ ವಾರ್ತೆ, ಬೀದರ್/ರಾಯಚೂರು/ಹಾಸನ, ಸೆ.19
ರಾಜ್ಯದ ಕೆಲವೆಡೆ ಸುರಿಯುತ್ತಿದ್ದ ವರ್ಷಧಾರೆ ತುಸು ತಣ್ಣಗಾದರೂ ಬೀದರ್ ಜಿಲ್ಲೆಯ ಹುಮನಾಬಾದ್ನಲ್ಲಿ ಸುರಿದ ಧಾರಾಕಾರ ಮಳೆಗೆ ತಾಯಿ-ಮಗ ಗುರುವಾರ ಮೃತಪಟ್ಟರೆ, ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ವಿತರಣಾ ಕಾಲುವೆಯು ಮಳೆಯ ನೀರಿನಿಂದ ಹಾನಿಗೀಡಾಗಿದೆ.
ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿ ನಿಂಗವಳ್ಳಿ ಹೆಮಲಾ ನಾಯಕ ತಾಂಡಾದ ಶಿಲಾಬಾಯಿ ಭಿಮಸಿಂಗ್ (35) ಹಾಗೂ ದಿನೇಶ ಭೀಮಸಿಂಗ್ (7) ಹುಮನಾಬಾದ್ ತಾಲೂಕಿನ ಕೊಡಂಬಲ್ ಗ್ರಾಮದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟವರು. ಇವರು ಆಟೋದಲ್ಲಿ ಕೆಲಸ ಮುಗಿಸಿಕೊಂಡು ಸ್ವಗ್ರಾಮಕ್ಕೆ ಆಗಮಿಸುತ್ತಿದ್ದರು. ನಾಲೆಗೆ ಹೆಚ್ಚಿನ ನೀರು ಬಂದರೂ, ಆಟೋವನ್ನು ಮುಂದೆ ಚಲಿಸಿದ್ದರಿಂದ ಈ ದುರಂತ ಸಂಭವಿಸಿದೆ. ಜತೆಯಲ್ಲಿದ್ದ ಮೃತಳ ಪತಿ ಭೀಮಸಿಂಗ್ ಜಾದವ್, ಸಂಬಂಧಿಕರಾದ ಶಿವರಾಮ ಜಾದವ್ ಹಾಗೂ ಮಾಲುಸಿಂಗ್ ಈಜಿ ದಡ ಸೇರಿದ್ದಾರೆ.
ರಾಯಚೂರು ನಗರ ಅಸ್ತವ್ಯಸ್ತ: ಮಳೆಯಿಂದ ರಾಯಚೂರಿನ ಚರಂಡಿಗಳು ಉಕ್ಕಿ ಹರಿದು ರಸ್ತೆಗೆ ನುಗ್ಗಿದ್ದರಿಂದ ರಸ್ತೆ ಸಂಚಾರಕ್ಕೆ ತೀವ್ರ ವ್ಯತ್ಯಯವಾಯಿತು. ಅದೇ ರೀತಿ ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಯಿತು. ರಸ್ತೆಗಳಲ್ಲಿರುವ ತಗ್ಗುಗಳಲ್ಲಿ ನೀರು ಸಂಗ್ರಹಗೊಂಡು ರಸ್ತೆ ಸಂಚಾರಕ್ಕೆ ಭಾರೀ ವ್ಯತ್ಯಯವಾಗಿ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು. ಈ ಮಧ್ಯೆ ನಗರದ ಬಸವೇಶ್ವರ ವೃತ್ತದ ಬಳಿಯ ರೇಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಜಾರಿಯಲ್ಲಿರುವುದರಿಂದ ಲಿಂಗಸ್ಗೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮನ್ಸಲಾಪುರ ರಸ್ತೆಯಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮನ್ಸಲಾಪುರ ರಸ್ತೆಯಲ್ಲಿ ಭಾರೀ ಆಳದ ತಗ್ಗುಗಳಾಗಿದ್ದು, ಈ ರಸ್ತೆಯಲ್ಲಿ ಕಳೆದ ತಡರಾತ್ರಿಯಿಂದಲೇ ನೂರಾರು ವಾಹನಗಳು ಮುಂದೆ ಚಲಿಸಲು ಸಾಧ್ಯವಾಗದೇ ಪರದಾಡಬೇಕಾಯಿತು. ನಗರದ ಸಂಚಾರ ಠಾಣೆಯ ಸಿಬ್ಬಂದಿ ಸಂಚಾರವನ್ನು ಸುವ್ಯವಸ್ಥೆಗೊಳಿಸಲು ಪ್ರಯಾಸಪಡಬೇಕಾಯಿತು.
ಎಡದಂಡೆ ವಿತರಣೆ ಕಾಲುವೆಗೆ ಹಾನಿ: ರಾಯಚೂರು ತಾಲೂಕಿನ ಆಶಾಪುರ ಗ್ರಾಮದ ಬಳಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ 131 ಮೈಲ್ನಲ್ಲಿ 102ನೇ ವಿತರಣೆ ಕಾಲುವೆಗೆ ಮಳೆ ನೀರು ಸಿಲುಕಿ ಒತ್ತಡದಿಂದ ಹಾಳಾಗಿದೆ. ಕಾಲುವೆಯ ನೀರು ಅಕ್ಕಪಕ್ಕದ ಗದ್ದೆಗಳಿಗೆ ನುಗ್ಗಿದ್ದು ಅದರಿಂದ ಅಪಾರ ಪ್ರಮಾಣದ ಹತ್ತಿ ಬೆಳೆ ಹಾನಿಯಾಗಿದೆ.
ಮರ ಬಿದ್ದು ನಷ್ಟ: ಭಾರಿ ಮಳೆ ಸುರಿದ ಪರಿಣಾಮ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದ ಚಂದ್ರಪ್ಪ ಹಾಗೂ ಸೋಮಣ್ಣ ಎಂಬುವರ ಮನೆ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

