ರಾಯಚೂರು

ತಿಪ್ಪೆಗುಂಡಿಯಾದ ಹೈಟೆಕ್ ತರಕಾರಿ ಮಾರ್ಕೆಟ್

Published On :

ಕನ್ನಡಪ್ರಭ ವಾರ್ತೆ, ಮುದಗಲ್, ಸೆ.20
ಸರ್ಕಾರ ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ಪ್ರತಿ ವರ್ಷ ಕೋಟ್ಯಂತರ ಹಣ ಬಿಡುಗಡೆ ಮಾಡುತ್ತಿದೆ. ಆಡಳಿತ ಮಂಡಳಿಗಳ ಕಾರ್ಯವೈಖರಿಗಳಿಂದ ಅನುದಾನ ಸದ್ಬಳಕೆ, ಗುಣಮಟ್ಟದ ಕೆಲಸಗಳಾಗದೆ ಸಾರ್ವಜನಿಕರ ಟೀಕೆಗೆ ಗುರಿಯಾಗುತ್ತಿವೆ ಎನ್ನುವುದಕ್ಕೆ ಪಟ್ಟಣದ ತರಕಾರಿ ಮಾರುಕಟ್ಟೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
2009- 10ನೇ ಸಾಲಿನಲ್ಲಿ ಎಸ್‌ಎಫ್‌ಸಿ ಯೋಜನೆಯಡಿ ಸರ್ಕಾರ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿ ಸುಮಾರು 30 ಲಕ್ಷ ವೆಚ್ಚದಲ್ಲಿ ಹೈಟೆಕ್ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಿತು. ಅದಕ್ಕೆ ಬೇಕಾಗುವ ಮೂಲ ಸೌಲಭ್ಯಗಳನ್ನು ನೀಡುವಲ್ಲಿ ಪಟ್ಟಣ ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ. ತರಕಾರಿ ಮಾರುಕಟ್ಟೆ ಉದ್ಘಾಟನೆಗೊಂಡು ಎರಡು ವರ್ಷ ಕಳೆದರೂ ಅಲ್ಲಿನ ವರ್ತಕರಿಗೆ, ಗ್ರಹಕರಿಗೆ ಶಾಪವಾಗಿ ಪರಿಣಮಿಸಿದೆ.
ತಿಪ್ಪೆಗುಂಡಿಯಾಗಿ ಪರಿವರ್ತನೆ: ಮಾರುಕಟ್ಟೆಯ ಪ್ರಾಂಗಣದಲ್ಲಿ ಮಳೆ ನೀರು ಸಂಗ್ರಹವಾಗಿ ಗಬ್ಬು ನಾರುತ್ತಿದೆ. ನಿತ್ಯ ಬೇರೆ ಪ್ರದೇಶಗಳಿಂದ ತರಕಾರಿ ತರುವ ವಾಹನಗಳು ಮಾರುಕಟ್ಟೆಯೊಳಗೆ ಪ್ರವೇಶಿಸಲು ಆಗದಷ್ಟು ಹದಗೆಟ್ಟಿದೆ. ಮಾರುಕಟ್ಟೆ ಅಕ್ಷರಶಃ ತಿಪ್ಪೆಗುಂಡಿಯಾಗಿ ಪರಿವರ್ತನೆಗೊಂಡಿದೆ. ಸ್ವಚ್ಛತೆ ಇಲ್ಲಿ ಮರೀಚಿಕೆಯಾಗಿದ್ದು ಎಲ್ಲಿ ನೋಡಿದರೂ ಕೊಳೆತ ತರಕಾರಿ ರಾಶಿರಾಶಿ ಬಿದ್ದು ತರಕಾರಿ ವ್ಯಾಪಾರಿಗಳು ಮೂಗು ಮುಚ್ಚಿಕೊಂಡು ಮಾರುಕಟ್ಟೆ ಪ್ರವೇಸಿಸಬೇಕು.
ವಿದ್ಯುತ್ ಇಲ್ಲ: ತರಕಾರಿ ಮಾರುಕಟ್ಟೆಯಲ್ಲಿ 72 ಮಾರುವ ಕಟ್ಟೆಗಳನ್ನು ನಿರ್ಮಿಸಿ ಚಾವಣಿ ಹಾಕಿದ್ದು, ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ತರಕಾರಿ ಸಂಗ್ರಹಕ್ಕೆ ನೆಲಮಳಿಗೆಗಳನ್ನು ನಿರ್ಮಿಸಲಾಗಿದೆ. ಅದಕ್ಕೂ ವಿದ್ಯುತ್ ಸಂಪರ್ಕವಿಲ್ಲ, ಕೇವಲ ಮಾರುಕಟ್ಟೆ ಪ್ರಾಂಗಣದಲ್ಲಿ ಎರಡು ಟೂಬ್‌ಲೈಟ್ ಬಿಟ್ಟರೆ ಉಳಿದಂತೆಲ್ಲ ಕತ್ತಲೆಯಲ್ಲೇ ವ್ಯಾಪಾರ ಮಾಡಬೇಕು, ಸಂಜೆ 7 ಗಂಟೆಗೆ ತರಕಾರಿ ಮಾರುಕಟ್ಟೆಗೆ ಹೋಗುವಂತಿಲ್ಲ.
ಮಾರುಕಟ್ಟೆಯಲ್ಲಿ 22 ವರ್ತಕರು ವ್ಯಾಪಾರ ಮಾಡುತ್ತಿದ್ದಾರೆ. ಪಪಂ ಪ್ರತಿ ಅಂಗಡಿಗಳ ಮಾಲೀಕರಿಗೆ ತಿಂಗಳಿಗೆ 250 ಬಾಡಿಗೆ ನೀಡುವಂತೆ ಸೂಚಿಸಿದೆ. ಆದರೆ ವ್ಯಾಪಾರಿಗಳು ಅದನ್ನು ತಿಪ್ಪುತ್ತಿಲ್ಲ.
ಹಂದಿ, ಜಾನುವಾರು ಕಾಟ: ಮಾರುಕಟ್ಟೆ ಹಿಂಭಾಗ ಮತ್ತು ಮುಂಭಾಗದಲ್ಲಿ ಸಾರ್ವಜನಿಕರು ರಾತ್ರಿ ಮಲ- ಮೂತ್ರ ವಿಸರ್ಜನೆ ಮಾಡುತ್ತಿದ್ದರಿಂದ ತರಕಾರಿ ವ್ಯಾಪಾರಿಗಳು ದುರ್ವಾಸನೆಯಿಂದ ನರಕಯಾತೆನೆ ಅನುಭವಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಕೊಳೆತ ತರಕಾರಿ ಬಿದ್ದಿದ್ದರಿಂದ 50ಕ್ಕೂ ಹೆಚ್ಚು ಹಂದಿಗಳು, ಜಾನುವಾರುಗಳು ಇಲ್ಲಿ ವಾಸಿಸುತ್ತಿವೆ. ತರಕಾರಿ ವ್ಯಾಪಾರಿಗಳು ಖರೀದಿಸಿದ ತರಕಾರಿಯನ್ನು ಕಸಿಯುತ್ತಿವೆ ಎಂದು ಸಾರ್ವಜನಿಕರು ತಿಳಿಸಿದರು.
ಚಿಕ್‌ನ ಸೆಂಟರ್: ಮಾರುಕಟ್ಟೆಗೆ ತರಕಾರಿ ತರಲು ಹೋಗುವವರಿಗೆ ಮೊದಲು ಮಾಂಸದ ಅಂಗಡಿಗಳು ಸ್ವಾಗತ ಕೋರುತ್ತವೆ. ತರಕಾರಿ ಮಾರುಕಟ್ಟೆ ಮುಂಭಾಗದ ಕಾಂಪೌಂಡ್‌ಗೆ ಹೊಂದಿಕೊಂಡು 10ಕ್ಕೂ ಅಧಿಕ ಚಿಕನ್ ಮತ್ತು ಮಟನ್ ಅಂಗಡಿಗಳಿವೆ. ಇಲ್ಲಿ ತರಕಾರಿ ವ್ಯಾಪಾರಕ್ಕೆ ಬರುವವರು ತಗಲಾಕಿರುವ ಮಾಂಸದ ಮುದ್ದೆಗಳನ್ನು ಕಾಣಲೇಬೇಕಾದ ದುಸ್ಥಿತಿ ಬಂದೊದಗಿದೆ. ಸಾಲದ್ದಕ್ಕೆ ಮಾಂಸದ ಅಂಗಡಿಗಳ ಮುಂದೆ ಬೀದಿ ನಾಯಿಗಳ ಹಾವಳಿ, ದಾರಿಹೋಕರನ್ನು ಕಚ್ಚುವ ಭೀತಿಯಲ್ಲಿ ಜನರು ಸಂಚರಿಸುತ್ತಿದ್ದಾರೆ.
ಖಾಸಗಿ ವಾಹನಗಳ ಭರಾಟೆ: ಅದೇ ರಸ್ತೆಯಲ್ಲಿ ಖಾಸಗಿ ವಾಹನಗಳ ಓಡಾಡುತ್ತಿದ್ದರಿಂದ ತರಕಾರಿ ಮಾರುಕಟ್ಟೆಗೆ ಮಕ್ಕಳು, ವೃದ್ಧರು ಹೋಗುವಂತಿಲ್ಲ. ಹೋದರೆ ಸುರಕ್ಷಿತವಾಗಿ ಬರುವುದು ಅಸಾಧ್ಯ ಎಂದು ಸಾರ್ವಜನಿಕರು ದೂರಿದ್ದಾರೆ. ಇಷ್ಟೆಲ್ಲ ಅವ್ಯವಸ್ಥೆ ಇದ್ದರೂ ಪಪಂ ಆಡಳಿತ ಮಾತ್ರ ಈ ಮಾರುಕಟ್ಟೆಗೂ, ತಮಗೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ ಎಂದು ವರ್ತಕರು, ಗ್ರಹಕರು ಆರೋಪಿಸಿದ್ದಾರೆ.
ಇನ್ನಾದರೂ ತರಕಾರಿ ಮಾರುಕಟ್ಟೆಸ್ವಚ್ಛಗೊಳಿಸಿ ಮಾಂಸದ ಅಂಗಡಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಹಂದಿ- ಜಾನುವಾರುಗಳನ್ನು ಸ್ಥಳಾಂತರಿಸಿ ಮಾರುಕಟ್ಟೆಗೆ ಗೇಟ್ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
-ಪಂಪಯ್ಯ ಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.