'ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡುವುದಿಲ್ಲ'
ಕನ್ನಡಪ್ರಭ ವಾರ್ತೆ, ಸಿಂಧನೂರು, ಸೆ.22
ಶಾಸಕ ಹಂಪನಗೌಡ ಬಾದರ್ಲಿಯವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಪ್ರತಿಪಕ್ಷದವರು ವೃತಾರೋಪ ಮಾಡುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಸೈಯದ್ ಜಾಫರ್ ಅಲಿ ಜಾಗೀರದಾರ ಸ್ಪಷ್ಟನೆ ನೀಡಿದರು.
ನಗರಸಭೆ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆ ಪ್ರತಿಪಕ್ಷಗಳ ಸದಸ್ಯರು ಶನಿವಾರ ಎಸ್ಎಫ್ಸಿ ಅನುದಾನದ ಹಂಚಿಕೆ ಕುರಿತು ಶಾಸಕರ ಬಗ್ಗೆ ಹಾಗೂ ತಮ್ಮ ಬಗ್ಗೆ ಇನ್ನಿಲ್ಲದ ಆರೋಪಗಳನ್ನು ಮಾಡಿದ್ದಾರೆ. ಆ ಎಲ್ಲ ಆರೋಪ ಸತ್ಯಕ್ಕೆ ದೂರವಾದವು. ಪ್ರತಿಪಕ್ಷಗಳು ವಿರೋಧಕ್ಕಾಗಿ ವಿರೋಧ ಮಾಡುವುದು ಸರಿಯಲ್ಲ ಎಂದರು.
ಹತಾಶೆಯ ಹೇಳಿಕೆ: ತಾವು ಅಧಿಕಾರ ವಹಿಸಿಕೊಂಡು 15 ದಿನಗಳಾಗಿವೆ. ಇಷ್ಟರಲ್ಲಿ ಶಾಸಕರು ತಮ್ಮ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ಪ್ರತಿಪಕ್ಷದವರಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಸರಣಿ ಆರೋಪಗಳನ್ನು ಜೆಡಿಎಸ್, ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್ ಸದಸ್ಯರ ಹೇಳಿಕೆಗಳು ಹತಾಶೆಯಿಂದ ಕೂಡಿವೆ ಎಂದು ಟೀಕಿಸಿದರು.
ಎಸ್ಎಫ್ಸಿ ಅನುದಾನವನ್ನು ಆಡಳಿತಾಧಿಕಾರಿ ಅವಧಿಯಲ್ಲಿ 11ರಿಂದ 31 ವಾರ್ಡಗಳ ಸಮಸ್ಯೆಗಳ ಆಧಾರದ ಮೇಲೆ ನಿಗದಿಪಡಿಸಲಾಗಿತ್ತು. 1ರಿಂದ 10ರ ವರೆಗಿನ ವಾರ್ಡ್ಗಳಲ್ಲಿ ಹಾಸುಬಂಡೆ ಇರುವುದರಿಂದ ಅಷ್ಟೊಂದು ಹಣ ಅವಶ್ಯವಿಲ್ಲ ಎಂದು ಪರಿಗಣಿಸಿ ಆಡಳಿತಾಧಿಕಾರಿಗಳು ನಿಗದಿಪಡಿಸಿದ್ದರು. ಇದರಲ್ಲಿ ಶಾಸಕರ ಯಾವುದೇ ಹಸ್ತಕ್ಷೇಪವಿಲ್ಲ. ಇದೆಲ್ಲ ಅಧಿಕಾರಿಗಳ ಮಟ್ಟದಲ್ಲಿ ತೀರ್ಮಾನವಾಗಿದೆ. ಈ ಮಾಹಿತಿ ಪಡೆಯದೇ ಪ್ರತಿಪಕ್ಷದ ಸದಸ್ಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸರ್ವರ ಸಲಹೆಯೊಂದಿಗೆ ಅಭಿವೃದ್ಧಿ: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಾಫರ್, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಇನ್ನು ಅನೇಕ ಯೋಜನೆಗಳಲ್ಲಿ ಅನುದಾನಗಳು ಬರಲಿವೆ. ಆಗ ಎಲ್ಲ ಸದಸ್ಯರ ಸಲಹೆ, ಸಹಕಾರ ಪಡೆದು ವಾರ್ಡ್ಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲೇ ಸಾಮಾನ್ಯ ಸಭೆ ಕರೆಯಲಾಗುವುದು. ಶಾಸಕರು ಅಭಿವೃದ್ಧಿ ವಿಷಯಗಳಿಗೆ ಸಲಹೆ- ಸೂಚನೆಗಳನ್ನು ಕೊಟ್ಟರೆ ಅವುಗಳನ್ನು ಸಹೃದಯದಿಂದ ಸ್ವೀಕರಿಸುತ್ತೇನೆ. ಅನುಭವಿ ರಾಜಕಾರಣಿಯ ಅಭಿವೃದ್ಧಿಪರ ಸಲಹೆಗಳನ್ನು ಕೇಳಿದರೆ ತಪ್ಪೇನಿಲ್ಲ ಎಂದು ಉತ್ತರಿಸಿದರು.
ಅನುಮಾನ ಪಡಬೇಡಿ: ನಗರದಲ್ಲಿ ಕೆಲ ವಾರ್ಡ್ಗಳಲ್ಲಿ ಕಸ ವಿಲೇವಾರಿ ಹಾಗೂ ವಿದ್ಯುತ್ ದೀಪಗಳ ಕೊರತೆಯ ದೂರುಗಳಿವೆ. ಅವುಗಳನ್ನು ಆದ್ಯತೆ ಮೇರೆಗೆ ನಿಭಾಯಿಸಲಾಗುವುದು. ಎಸ್ಎಫ್ಸಿ ಅನುದಾನದಲ್ಲಿ ತುರ್ವಿಹಾಳ ಕೆರೆಗೆ 30 ಲಕ್ಷ ಕಾಯ್ದಿರಿಸಿರುವುದು ಮುಂದಾಲೋಚನೆಯ ದೃಷ್ಟಿಯಿಂದ. ಇದಕ್ಕೆ ಪ್ರತಿಪಕ್ಷದವರು ಅನುಮಾನಗಳನ್ನು ಹೊಂದಬಾರದೆಂದು ಮನವಿ ಮಾಡಿದರು.
ನಗರಸಭೆಯ ಆದಾಯದ ಮೂಲಗಳನ್ನು ಹೆಚ್ಚಿಸಲು ವಿದ್ಯುತ್, ನೀರು ಸರಬರಾಜು, ಕರ ವಸೂಲಿ ಕುರಿತು ಈಗಾಗಲೇ ಸಿಬ್ಬಂದಿಯೊಂದಿಗೆ ಮೂರು ಸಭೆಗಳನ್ನು ನಡೆಸಲಾಗಿದೆ. ಕರ ವಸೂಲಿ ಕುರಿತು ಪ್ರತಿನಿತ್ಯ ತಮಗೆ ಮೊಬೈಲ್ ಸಂದೇಶ ಬರುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

