ರಾಯಚೂರು

ಕಾಂಗ್ರೆಸ್- ಬಿಜೆಪಿಗೆ ತಕ್ಕಪಾಠ ಕಲಿಸಿ: ಬಿಎಸ್ಪಿ

Published On :

ರಾಯಚೂರು: ಬಿಜೆಪಿ- ಕಾಂಗ್ರೆಸ್ ಪಕ್ಷಗಳಲ್ಲಿ ಭ್ರಷ್ಟಾಚಾರ ಎಸಗಿದವರೇ ಸಾಕಷ್ಟು ಸಂಖ್ಯೆಯಲ್ಲಿದ್ದು, ಜನಸಾಮಾನ್ಯರ ಅಭಿವೃದ್ಧಿ ಕಡೆಗಣಿಸಿದ್ದಾರೆ. ಅಂಥವರಿಗೆ ಪ್ರಸಕ್ತ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕಿದೆ ಎಂದು ರಾಯಚೂರು ಲೋಕಸಭೆ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ರಾಜಾ ತಿಮ್ಮಪ್ಪ ನಾಯಕ ಸಲಹೆ ನೀಡಿದರು.
ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳ ಜಾರಿ ಯ ವಿಚಾರದಲ್ಲಿ ಬಿಜೆಪಿ- ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾಜದ ಕೆಳವರ್ಗದವರ ಪರ ಒಲವು ತೋರದ ಈ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿಯೇ ಕಾಲಹರಣ ಮಾಡಿವೆ ಎಂದು ಟೀಕಿಸಿದರು.
ದಲಿತರು, ಶೋಷಿತರು ಮತ್ತು ಸಾಮಾನ್ಯ ಜನ ಪರ ಎಂದಿಗೂ ನೀತಿ ರೂಪಿಸದ ಹಾಗೂ ಕಾಳಜಿ ಪ್ರದರ್ಶಿಸದ ಈ ರಾಜಕೀಯ ಪಕ್ಷಗಳನ್ನು ಮತದಾರರು ತಿರಸ್ಕರಿಸಬೇಕಿದೆ. ಜನಸಾಮಾನ್ಯರಿಗೆ ಟಿಕೆಟ್ ನೀಡುವಲ್ಲಿಯೂ ಈ ಪಕ್ಷಗಳು ಅಸಡ್ಡೆ ಪ್ರದರ್ಶಿಸಿವೆ ಎಂದು ಲೇವಡಿ ಮಾಡಿದರು.
ಕೆಳವರ್ಗದವರ ಪಕ್ಷ ಬೆಂಬಲಿಸಿ: ಇಂಥ ರಾಜಕೀಯ ಪಕ್ಷಗಳಿಗೆ ಮತ ನೀಡುವ ಮೊದಲು ಮತದಾರರು ಆಲೋಚಿಸಬೇಕಾದ ಪ್ರಸಂಗ ಒದಗಿದೆ. ಆದರೆ ಬಹುಜನ ಸಮಾಜ ಪಾರ್ಟಿಯು ದಲಿತರು, ಸಮಾಜದ ಕೆಳವರ್ಗದವರು ಹಾಗೂ ತೀರಾ ಸಾಮಾನ್ಯ ವ್ಯಕ್ತಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಮತದಾರರು ಹಾಗೂ ಕೆಳವರ್ಗದವರು ಬಿಎಸ್ಪಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಮತದಾನ ಪವಿತ್ರ ಕಾರ್ಯವಾಗಿದ್ದು, ಮತದಾರರು ವಿವಿಧ ರಾಜಕೀಯ ಪಕ್ಷಗಳು ನೀಡುವ ಆಮಿಷಗಳಿಗೆ ಬಲಿಯಾಗಬಾರದು. ಆಸೆ, ಆಮಿಷಗಳಿಗೆ ಬಲಿಯಾಗಿ ಬಿಜೆಪಿ- ಕಾಂಗ್ರೆಸಿಗೆ ಮತ ಚಲಾಯಿಸಬಾರದು. ಮತ ನೀಡುವ ಮುಂಚೆ ಮತದಾರರು ಕಣದಲ್ಲಿರುವವರ ಪೈಕಿ ಯಾರು ಭ್ರಷ್ಟರು, ಯಾರು ಶುದ್ಧಹಸ್ತರು ಎಂಬುದನ್ನು ಅರಿತು ಮತ ನೀಡಬೇಕೆಂದು ಸಲಹೆ ನೀಡಿದರು.
ದಾರಿ ತಪ್ಪಿಸದಿರಿ: ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಯ ಈ ಸಂದರ್ಭ ವಿವಿಧ ರಾಜಕೀಯ ಪಕ್ಷಗಳಿಂದ ಹಣ ಪಡೆದ ಕೆಲ ಸಂಘಗಳು ಇಂಥವಿಗೆ ಮತ ನೀಡುವಂತೆ ವಿವಿಧ ಜಾತಿಯವರಿಗೆ ಪ್ರೇರೇಪಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಂಘಟನೆಗಳು ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿವೆ ಎಂದು ಟೀಕಿಸಿದರು. ಸಂಘಟನೆಗಳ ತತ್ವ- ಸಿದ್ಧಾಂತಗಳ ಆಧಾರದ ಮೇಲೆ ಸಂಘ-ಸಂಸ್ಥೆಗಳನ್ನು ಕಟ್ಟಿದ್ದಾಗಿ ಹೇಳಿಕೊಳ್ಳುವವರು ಚುನಾವಣೆ ವೇಳೆ ಮಾತ್ರ ಪ್ರಮುಖ ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡುವ ಕೆಲಸ ಮಾಡುತ್ತಿರುವುದು ಸಮಂಜಸವಲ್ಲ. ಅದರಿಂದ ಆಯಾ ಸಂಘಟನೆಗಳ ತತ್ವ- ಸಿದ್ಧಾಂತಕ್ಕೆ ಹಿನ್ನಡೆಯಾಗಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹನುಮಂತಪ್ಪ ವಕೀಲರು, ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ನರಸಪ್ಪ, ಜಿಲ್ಲಾ ಸಮಿತಿ ಮುಖಂಡರಾದ ಬಸವರಾಜ, ಜಯಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.