ರಾಯಚೂರು

ನವಮಂತ್ರಾಲಯ ನಿರ್ಮಾತೃ ಸುಯತೀಂದ್ರತೀರ್ಥರು

Published On :

ಕ.ಪ್ರ. ವಾರ್ತೆ    ರಾಯಚೂರು    ಏ.6
ಮಂತ್ರಾಲಯದ ಶ್ರೀಮಠ ಪರಂಪರೆಯ ಸಂರಕ್ಷಣೆ, ಧಾರ್ಮಿಕ, ಭೌತಿಕ ಮತ್ತು ಸರ್ವಾಂಗೀಣ ಪ್ರಗತಿಗೆ ಪೂರ್ವ ಪೀಠಾಧಿಪತಿಗಳಾದ ಸುಯತೀಂದ್ರ ತೀರ್ಥರ ಕೊಡುಗೆ ಅಪಾರ ಎಂದು ಶ್ರೀಮಠದ ಪೀಠಾಧಿಪತಿಗಳಾದ ಸುಬುಧೇಂದ್ರತೀರ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ದೇವಸ್ಥಾನ ಸಮಿತಿಯಿಂದ ಆಯೋಜಿಸಿದ್ದ ಈಚೆಗೆ ಹರಿಪಾದ ಸೇರಿದ ಸುಯತೀಂದ್ರತೀರ್ಥರ ಗುರುಸಂಸ್ಮರಣೆ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿ, ಮಂತ್ರಾಲಯದ ಸರ್ವ ಪ್ರಗತಿಯಲ್ಲಿ ಶ್ರೀಮಠದ ಯತಿಗಳು ಸಾಕಷ್ಟು ಶ್ರಮಿಸಿದ್ದಾರೆಂದರು.
ಅಚ್ಚರಿ ಮೂಡಿಸಿದರು: ಅದರಲ್ಲೂ ಮಂತ್ರಾಲಯವು 2009ರಲ್ಲಿ ಕಂಡಂಥ ಭಾರೀ ಪ್ರವಾಹದಿಂದ ತತ್ತರಿಸಿ ನಾಶವಾಗಿದ್ದ ಸಂದರ್ಭದಲ್ಲಿ ಸುಯತೀಂದ್ರ ತೀರ್ಥರು ನವಮಂತ್ರಾಲಯದ ನಿರ್ಮಾಣದಲ್ಲಿ ಕಂಕಣಬದ್ಧರಾಗಿ ನಿಂತರು. ಅಂತೆಯೇ ಮಂತ್ರಾಲಯದ ಅಭಿವೃದ್ಧಿಗೆ ನೂರಾರು ವರ್ಷ ಬೇಕು ಎಂದುಕೊಂಡಿದ್ದವರಿಗೆ ಅಚ್ಚರಿ ಪಡುವಂತೆ ಕೇವಲ ಒಂದೂವರೆ ವರ್ಷದಲ್ಲಿಯೇ ಮಂತ್ರಾಲಯವನ್ನು ಕಟ್ಟಿದರು ಎಂದು ಶ್ಲಾಘಿಸಿದರು.
ಸದಾಚಾರ, ಧಾರ್ಮಿಕ ಚಿಂತನೆ, ಸಂಸ್ಕೃತಿ ರಕ್ಷಣೆಯ ಕಾರ್ಯಗಳ ಜತೆಜತೆಗೆ ಹಿಂದೂ ಸಮಾಜದ ಅಭಿವೃದ್ಧಿಗೆ ಶ್ರೀಮಠದ ಯತಿಗಳು ಹೆಚ್ಚಿನ ಆದ್ಯತೆ ನೀಡಿದ್ದರು. ಮಂತ್ರಾಲಯ ಮಠವು ಕೇವಲ ಒಂದು ಜಾತಿಗೆ ಸೀಮಿತಗೊಳ್ಳದೇ ಎಲ್ಲ ಜಾತಿ ಜನಾಂಗದವರ ಪಾಲಿನ ಆರಾಧ್ಯ ದೈವವಾಗಲು ಯತಿಗಳೇ ಕಾರಣರು ಎಂದರು.
ವಿದ್ಯಾಮಠ: ಹಾಗೆಯೇ ಸುಯತೀಂದ್ರತೀರ್ಥರು ಬ್ರಾಹ್ಮಣ ಸಮಾಜದ ಎಲ್ಲ ಮಠಗಳ ಮಠಾಧೀಶರೊಂದಿಗೆ ಸಂಪರ್ಕವಿರಿಸಿಕೊಂಡು ಸಮಾಜದ ಏಳಿಗೆಗೆ ಅನೇಕ ರೀತಿಯ ಯೋಜನೆ ಜಾರಿಗೆ ತಂದಿದ್ದರು. ವಿದ್ಯಾಮಠವೆಂದೇ ಖ್ಯಾತವಾಗಿರುವ ಮಂತ್ರಾಲಯ ಶ್ರೀಮಠದ ಸಂಸ್ಕೃತ ವಿದ್ಯಾಪೀಠದ ಅಭಿವೃದ್ಧಿಗೆ ಶ್ರೀಗಳು ಹೆಚ್ಚಿನ ಆಸಕ್ತಿ ವಹಿಸಿದ್ದರು. ಅಂತೆಯೇ ಕೋಟ್ಯಂತರ ರು. ವೆಚ್ಚದಲ್ಲಿ ವಿದ್ಯಾಪೀಠವನ್ನು ಸಂಸ್ಕೃತ ವಿವಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಗೆ ಚಾಲನೆ ನೀಡಿದ್ದಾರೆಂದು ಹೇಳಿದರು.
ಕೇವಲ ಮಂತ್ರಾಲಯವಷ್ಟೇ ಅಲ್ಲ, ಅದರ ಶಾಖಾ ಮಠಗಳ ಅಭಿವೃದ್ಧಿ ಸಮಾಜದ ಎಲ್ಲರಿಗೂ ಅನುಕೂಲವಾಗುವಂತೆ ಮಂಗಲ ಭವನಗಳ ನಿರ್ಮಾಣ, ಶ್ರೀಮಠದ ಅನುಯಾಯಿಗಳ ಮನಸ್ಸಂತೋಷಕ್ಕಾಗಿ ವಿವಿಧ ಅಭಿವೃದ್ಧಿ ಕಾರ್ಯಗಳ ಜಾರಿಯಂಥ ದೂರ ದೃಷ್ಟಿಯ ಕಾರ್ಯಕ್ರಮಗಳನ್ನು ಸುಯತೀಂದ್ರತೀರ್ಥರು ಜಾರಿಗೆ ತಂದು ಕಾರುಣ್ಯಮೂರ್ತಿಯಾಗಿ ಮೆರೆದಿದ್ದಾರೆಂದು ಕೊಂಡಾಡಿದರು.
ಪ್ರೇರೇಪಣೆ: ಸ್ವಚ್ಛ, ಸುಂದರ ಹಾಗೂ ಸಂಪೂರ್ಣ ಮಂತ್ರಾಲಯ ನಿರ್ಮಾತೃಗಳಾದ ಸುಯತೀಂದ್ರ ತೀರ್ಥರು ಹರಿಪಾದ ಸೇರುವ ಮೂಲಕ ದೂರವಾಗಿರಬಹುದು. ಆದರೆ ಭಕ್ತರು ಹಾಗೂ ತಮ್ಮಲ್ಲಿ ಸದಾಕಾಲವಿದ್ದು, ಕೈಹಿಡಿದು ನಡೆಸಲಿದ್ದಾರೆ. ಸನ್ಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸಲಿದ್ದಾರೆಂದು ಹೇಳಿದರು.
ವಿದ್ವಾಂಸರು, ಪಂಡಿತರು ಹಾಗೂ ಬ್ರಾಹ್ಮಣ ಸಮಾಜದ ಮುಖಂಡರು ಗುರುಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿ ಮಾತನಾಡಿದರು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.