ಸುರಾನಾ ಕಂಪನಿ ಬಾಕಿ ವೇತನ ಪಾವತಿಗೆ ಆಗ್ರಹ
ಕ.ಪ್ರ. ವಾರ್ತೆ ರಾಯಚೂರು ಏ.6
ತಾಲೂಕಿನ ವಡ್ಲೂರು ಗ್ರಾಮದಲ್ಲಿರುವ ಸುರಾನಾ ಇಂಡಸ್ಟ್ರೀಸ್ ಆಡಳಿತ ಮಂಡಳಿಯು ಕಾರ್ಮಿಕರಿಗೆ ಬಾಕಿ ಉಳಿಸಿಕೊಂಡಿರುವ ಮೂರು ತಿಂಗಳ ವೇತನ ಪಾವತಿಸುವಂತೆ ಒತ್ತಾಯಿಸಿ ಏ.10ರಂದು ನಗರದಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ಷಾಖಾದ್ರಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2007ರಲ್ಲಿ ಕಾರ್ಯಾರಂಭ ಮಾಡಿರುವ ಸುರಾನಾ ಇಂಡಸ್ಟ್ರೀಸ್ ಕಂಪನಿಯು 250 ಜನ ಕಾರ್ಮಿಕರನ್ನು ನೇಮಿಸಿಕೊಂಡಿದ್ದು, 2007ರಿಂದ 2011ರವರೆಗೆ ಕಂಪನಿಯು ಪ್ರತಿ ವರ್ಷ ಲಾಭದಲ್ಲಿ ಕಾರ್ಯನಿರ್ವಹಿಸಿತು. ಆದರೆ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದ ನಂತರದಲ್ಲಿ ಕಂಪನಿಯು ದುಸ್ಥಿತಿಗೆ ಸಿಲುಕಿದೆ. ಅದರಿಂದಾಗಿ 2011ರ ನಂತರದಲ್ಲಿ ಕಾರ್ಮಿಕರ ಸಂಖ್ಯೆ ಕಡಿತಗೊಳಿಸುವ ಕ್ರಮಕ್ಕೆ ಮುಂದಾಯಿತು ಎಂದು ತಿಳಿಸಿದರು.
ಕಾರ್ಮಿಕರ ವಜಾ, ನೋಟಿಸ್: ಕಾರ್ಮಿಕರ ಸಂಖ್ಯೆ ಕಡಿತಗೊಳಿಸಲು ಯೋಜಿಸಿದ ಆಡಳಿತ ಮಂಡಳಿಯವರು 2013ರ ಏಪ್ರಿಲ್ನಲ್ಲಿ 60 ಜನ ನೌಕರರನ್ನು ಒತ್ತಾಯಪೂರ್ವಕವಾಗಿ ಸೇವೆಯಿಂದ ವಜಾಗೊಳಿಸಿತು. ಆಡಳಿತ ಮಂಡಳಿಯ ಕ್ರಮ ವಿರೋಧಿಸಿದ 173 ಜನ ಕಾರ್ಮಿಕರನ್ನೂ ವಜಾಗೊಳಿಸಿ ಇನ್ನೂ 147 ಜನರಿಗೆ ನೋಟಿಸ್ ಜಾರಿ ಮಾಡಲಾಯಿತು ಎಂದು ಹೇಳಿದರು.
ಈ ಬಗ್ಗೆ ಉಪಕಾರ್ಮಿಕ ಆಯುಕ್ತರಿಗೆ ಕೈಗಾರಿಕೆ ವಿವಾದ ಕಾಯಿದೆಯಡಿ ಪ್ರಕರಣ ನೋಂದಾಯಿಸಿ ಸಂಧಾನ ಸಭೆಗೆ ಒತ್ತಾಯಿಸಿದ್ದರಿಂದ 2013ರ ಏ.26 ಮತ್ತು ಮೇ 3ರಂದು ಸಹಾಯಕ ಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆದು ಎಲ್ಲ ಕಾರ್ಮಿಕರ ಪುನಾ ನೇಮಕಕ್ಕೆ ಆಡಳಿತ ಒಪ್ಪಿಗೆ ಸೂಚಿಸಿತು. ಕೆಲ ಷರತ್ತುಗಳ ಆಧಾರದಲ್ಲಿ ಆಡಳಿತ ಮಂಡಳಿಯು 15 ಜನ ಕಾರ್ಮಿಕರು ಕಾರ್ಮಿಕರ ಸಂಘದ ಪದಾಧಿಕಾರಿಗಳಾಗಿದ್ದರಿಂದ ಅವರನ್ನು ಕಂಪನಿಯ ಹೊರಗೆ ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು ಎಂದು ಆರೋಪಿಸಿದರು.
ಸುರಾನಾ ಕಂಪನಿಗೆ ವರ್ಗಾವಣೆ: ಆನಂತರದಲ್ಲಿ 15 ಕಾರ್ಮಿಕರ ಜತೆಗೆ ಇನ್ನೂ 55 ಕಾರ್ಮಿಕರನ್ನು ಗ್ಲೋಬಲ್ಸ್ ಏಜೆನ್ಸಿಗೆ ವರ್ಗಾವಣೆ ಮಾಡುವ ಬಗ್ಗೆ ಸೂಚನೆ ನೀಡಿದೆ. ಆದರೆ ಇದನ್ನು ಸಂಘ ವಿರೋಧಿಸಿದ್ದರಿಂದ 55 ಜನರನ್ನು ಸುರಾನಾ ಪವರ್ ಲಿಮಿಟೆಡ್ಗೆ ವರ್ಗಾಯಿಸಿದೆ ಎಂದು ಪತ್ರ ನೀಡಲಾಗಿದೆ ಎಂದು ದೂರಿದರು.
ಕಾನೂನುಬಾಹಿರ ರೀತಿಯಲ್ಲಿ ಕಾರ್ಮಿಕರನ್ನು ವರ್ಗಾಯಿಸಿರುವ ಕಂಪನಿಯ ಆಡಳಿತವು ವರ್ಗಾವಣೆಗೊಂಡವರು ಕೆಲಸಕ್ಕೆ ಹಾಜರಾಗಲು ವಿರೋಧಿಸಿದ್ದರಿಂದ ಶಿಸ್ತುಕ್ರಮದ ಎಚ್ಚರಿಕೆ ನೀಡಿ ಇದೇ ವರ್ಷದ ಮಾ. 24ರಂದು ಎಲ್ಲ ಅಂಥ ಕಾರ್ಮಿಕರನ್ನು ಸೇವೆಯಿಂದ ವಜಾ ಮಾಡಿದ್ದಾಗಿ ತಿಳಿಸಿದ್ದಾರೆಂದರು.
10ರಂದು ಪ್ರತಿಭಟನೆ: ಸಂಧಾನಸಭೆ ಪ್ರಕ್ರಿಯೆ ನಡೆಯುವ ವೇಳೆ ಕಾರ್ಮಿಕರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತಿಲ್ಲ. ಆದರೆ ಕಾರ್ಖಾನೆ ಆಡಳಿತವು ಕಾರ್ಮಿಕರನ್ನು ವಜಾಗೊಳಿಸಿದೆ. ಈ ಎಲ್ಲ ಕಾನೂನುಬಾಹಿರ ಕ್ರಮ ವಿರೋಧಿಸಿ ಹಾಗೂ ಕಾರ್ಖಾನೆಯನ್ನು ಅನಧಿಕೃತವಾಗಿ ಮುಚ್ಚಿದ ಕ್ರಮ ಖಂಡಿಸಿ, ಮೂರು ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಏ.10ರಂದು ಜಿಲ್ಲಾಧಿಕಾರಿ ಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಈಗಾಗಲೇ ಎಂಪಿಸಿಎಲ್ ಕಾರ್ಖಾನೆ ಸಹ ಇದೇ ರೀತಿಯಲ್ಲಿ ಕಾರ್ಖಾನೆಯನ್ನು ಮುಚ್ಚಿತ್ತು. ಅದೇ ದಾರಿಯಲ್ಲಿ ಸುರಾನಾ ಕಂಪನಿಯು ಸಾಗುತ್ತಿದ್ದು, ಆಡಳಿತ ಮಂಡಳಿಗಳ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹೋರಾಟಕ್ಕೆ ಮುಂದಾಗುತ್ತಿರುವುದಾಗಿ ತಿಳಿಸಿದ ಅವರು, ಏ.10ರಂದು ಬೆ.11.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಪದ್ಮಾ, ಪ್ರಮುಖರಾದ ಡಿ.ಎಸ್. ಶರಣಬಸವ, ಎಚ್.ಸೂಗನಗೌಡ, ನಾಗೇಂದ್ರ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

