ಸಮಾಜದ ಹೆಸರಲ್ಲಿ ರಾಜಕೀಯ; ಮತದಾರರಿಂದ ತಕ್ಕ ಪಾಠ
ಲಿಂಗಸ್ಗೂರು: ಲಿಂಗಾಯತ ಸಮಾಜದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದು, ವೈಯಕ್ತಿಕ ಹಿತಾಸಕ್ತಿಗೆ ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಕೆಲಸಕ್ಕೆ ಕೈ ಹಾಕುತ್ತಿರುವವರಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ವೀರಶೈವ ಸಮಾಜದ ಮುಖಂಡ ಗಂಗಾಧರ ಯಲಿ ತಪ್ಪಲದೊಡ್ಡಿ ಎಚ್ಚರಿಕೆ ನೀಡಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕರು ಲಿಂಗಾಯತ ವಿರೋಧಿ ಎಂದು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಸುಳ್ಳು ಆರೋಪ ಮಾಡುತ್ತಿದ್ದು, ಸಮಾಜ ಬಾಂಧವರಲ್ಲಿ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜಕ್ಕೆ ಒಳಿತಾಗುವ ಬಗ್ಗೆ ಯೋಚಿಸಬೇಕಾದವರು ಸಮಾಜವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ರಾಜಕೀಯವಾಗಿ ಸಮಾಜಕ್ಕೆ ಏನು ಒಳಿತಾಗಿದೆ ಎಂದು ಯೋಚಿಸದೆ ನನಗೆ ಸಮಾಜದಿಂದ ಏನು ಲಾಭವಾಗಿದೆ ಎಂದು ರಾಜಕೀಯ ಮಾಡುತ್ತಿರುವ ಕೆಲವರ ನಡೆಯನ್ನು ಸಮಾಜ ಎಂದೂ ಸಹಿಸುವುದಿಲ್ಲವೆಂದು ಎಚ್ಚರಿಸಿದರು.
ಅಪಪ್ರಚಾರ ಸರಿಯಲ್ಲ: ಶಿವನಗೌಡ ನಾಯಕರು ಸಚಿವರಾಗಿದ್ದ ವೇಳೆ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಸಮಾಜ ಬಾಂಧವರಿಗೆ ರಾಜಕೀಯವಾಗಿ ಸಾಕಷ್ಟು ಸ್ಥಾನಮಾನ ನೀಡಿದ್ದಾರೆ. ಅಲ್ಲದೆ ಮಠಮಾನ್ಯಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ಇದನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಸಮಾಜವನ್ನು ಗೌರವದಿಂದ ಕಾಣುತ್ತಿರುವ ಕೆ.ಶಿವನಗೌಡ ನಾಯಕರ ಪರವಾಗಿ ವೀರಶೈವ ಸಮಾಜದ ಬಿಜೆಪಿ ಮುಖಂಡರು ಬೆಂಬಲಿಸಲಿದ್ದಾರೆಂದು ಸ್ಪಷ್ಟಪಡಿಸಿದರು.
ಮಿಥ್ಯಾರೋಪಕ್ಕೆ ಕಿವಿಗೊಡಬೇಡಿ: ಸಮಾಜದ ಮುಖಂಡ ಮಲ್ಲನಗೌಡ ಸಾಹುಕಾರ ನಾಗರಹಾಳ ಮಾತನಾಡಿ, ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕರು ಅತ್ಯಂತ ಕಿರಿಯ ವಯಸ್ಸಿನಲ್ಲಿ ದೇವದುರ್ಗ ಕ್ಷೇತ್ರಕ್ಕೆ ಎಂಜಿನಿಯರಿಂಗ್ ಕಾಲೇಜು, ವಸತಿ ನಿಲಯಗಳು, ವಸತಿ ಮನೆಗಳು, ಕುಡಿವ ನೀರು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಈ ಹಿಂದೆ ಆಡಳಿತ ನಡೆಸಿದವರು ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಪ್ರಯುಕ್ತ ಶಿವನಗೌಡರ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಸುಳ್ಳು ಆರೋಪಗಳಿಗೆ ಸಮಾಜ ಬಾಂಧವರು ಕಿವಿಗೊಡಬಾರದೆಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

