ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ: ಡಿಸಿ
ಕ.ಪ್ರ. ವಾರ್ತೆ, ರಾಯಚೂರು, ಏ.15
ಪ್ರಸಕ್ತ ಲೋಕಸಭೆ ಚುನಾವಣೆಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಚುನಾವಣೆಯ ವಿವಿಧ ಕೆಲಸಕಾರ್ಯ ನಿರ್ವಹಿಸಲು 9012 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹೇಳಿದರು.
ನಗರದಲ್ಲಿ ಮಂಗಳವಾರ ಸಂಜೆ ಕರೆದಿದ್ದ ಸುದ್ದಿಗೋಷಅಠಿಯಲ್ಲಿ ಮಾತನಾಡಿ, ಪ್ರಸಕ್ತ ಲೋಕಸಭೆ ಚುನಾವಣೆಯ ಮತದಾನಕ್ಕೆ ಜಿಲ್ಲೆಯಲ್ಲಿ ಒಟ್ಟು 1566 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಕ್ಷೇತ್ರದಲ್ಲಿ ಒಟ್ಟು 1878 ಮತಗಟ್ಟೆಗಳಿರಲಿವೆ. ಒಟ್ಟು 1661362 ಮತದಾರರಿದ್ದಾರೆಂದು ಹೇಳಿದರು.
ಒಟ್ಟು ಮತದಾರರ ಪೈಕಿ ಶೇ.98.08 ರಷ್ಟು ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ವಿತರಿಸಲಾಗಿದೆ. ರಾಯ ಚೂರು ನಗರ ಕ್ಷೇತ್ರದಲ್ಲಿ ಮಾತ್ರ ಗುರುತಿನ ಚೀಟಿ ವಿತರಣೆಯಲ್ಲಿ ಹಿನ್ನಡೆಯಾಗಿದ್ದು, ಶೇ.94.16ರಷ್ಟು ಮತದಾರರು ಗುರುತಿನ ಚೀಟಿ ಹೊಂದಿದ್ದಾರೆಂದರು.
14 ಗುರುತಿನ ಚೀಟಿಗಳಲ್ಲೊಂದು: ಗುರುತಿನ ಚೀಟಿ ಹೊಂದಿರದ ಮತದಾರರು ಚುನಾವಣೆ ಆಯೋಗವು ಸೂಚಿಸಿದ ಭಾವಚಿತ್ರವಿರುವ ಪಾಸ್ ಪೋರ್ಟ್, ಚಾಲನಾ ಪರವಾನಗಿ ಪತ್ರ ಸೇರಿದಂತೆ ಇನ್ನುಳಿದ 14 ಗುರುತಿನ ಚೀಟಿಗಳನ್ನು ಬಳಸಿ ಮತದಾನ ಮಾಡಬಹುದಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಆದರೆ ಗುರುತಿನ ಚೀಟಿ ಹೊಂದಿದವರಿಗೆ ಮತದಾನ ಮಾಡಲು ಅವಕಾಶವಿರುವುದಿಲ್ಲ ಎಂದ ಅವರು ಪ್ರಸಕ್ತ ಚುನಾವಣೆಯಲ್ಲಿ 1878 ಮತಗಟ್ಟೆಗಳಲ್ಲಿ 430 ಅತೀಸೂಕ್ಷ್ಮ ಮತಗಟ್ಟೆಗಳು, 524 ಸೂಕ್ಷ್ಮ ಮತಗಟ್ಟೆಗಳಿವೆ. 924 ಸಾಮಾನ್ಯ ಮತಗಟ್ಟೆಗಳಿವೆ ಎಂದು ತಿಳಿಸಿದರು.
ವೆಬ್ ಕ್ಯಾಸ್ಟಿಂಗ್: ಚುನಾವಣೆ ಸುಗಮವಾಗಿ ಸಾಗುವಂತಾಗಲು ಮೇಲುಸ್ತುವಾರಿ ಮತ್ತು ವೀಕ್ಷಣೆಗೆ ಒಟ್ಟು 22 ತಂಡಗಳನ್ನು ರಚಿಸಲಾಗಿದೆ. ಚುನಾವಣೆ ಆಯೋಗದ ಸೂಚನೆ ಮೇರೆಗೆ ಜಿಲ್ಲೆಯಲ್ಲಿನ ಅತಿ ಸೂಕ್ಷ್ಮ ಆರು ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆಯಡಿ ಮತದಾನ ಪ್ರಕ್ರಿಯೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ರಾಯಚೂರಿನ ಅರಬ್ ಮೊಹಲ್ಲಾ, ಟಿಪ್ಪುಸುಲ್ತಾನ್ ಪ್ರದೇಶ, ಅಂದ್ರೂನ್ ಕಿಲ್ಲಾ ಹಾಗೂ ಜಹೀರಾಬಾದ್ ಪ್ರದೇಶದ ಮತಗಟ್ಟೆ, ಮಾನವಿಯ ಬಸವಣ್ಣ ಕ್ಯಾಂಪ್ ಮತ್ತು ದೇವದುರ್ಗದ ಜಾಲಹಳ್ಳಿಯ ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮೂಲಕ ಮತದಾನ ಪ್ರಕ್ರಿಯೆಯನ್ನು ಅಂತರ್ಜಾಲದ ಮೂಲಕ ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಕ್ಯಾಮೆರಾ ಕಣ್ಗಾವಲು: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ 82 ಮತಗಟ್ಟೆಗಳಲ್ಲಿ ವಿಡಿಯೋ ಕ್ಯಾಮೆರಾ ಅಳವಡಿಸಿದ್ದು, 784 ಮೈಕ್ರೋ ಅಬ್ಸರ್ವರ್ಸ್ಗಳನ್ನು ನೇಮಿಸಲಾಗಿದೆ. 32 ಮತಗಟ್ಟೆಗಳನ್ನು ಅತ್ಯಂತ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿದ್ದು, ಹೆಚ್ಚಿನ ಭದ್ರತೆ ಒದಿಗಿಸಲಾಗುತ್ತದೆ ಎಂದು ಹೇಳಿದರು.
ಕ್ರಿಟಿಕಲ್ ಮತಗಟ್ಟೆಗಳು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇ.75ಕ್ಕಿಂತ ಹೆಚ್ಚಿನ ಮತಗಳು ಒಂದೇ ಅಭ್ಯರ್ಥಿಗೆ ಬಂದಂಥ ಮತಗಟ್ಟೆಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗುತ್ತಿದೆ. ಇಂಥ ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಿದ್ದು, ಅಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇಂಥ 32 ಮತಗಟ್ಟೆಗಳಿವೆ ಎಂದರು.
ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಡಳಿತವಷ್ಟೇ ಅಲ್ಲದೇ ರಾಜಕೀಯ ಪಕ್ಷಗಳವರು ಬೀಗಮುದ್ರೆ ಹಾಕಿಕೊಳ್ಳಬಹುದು. ಹಾಗೆಯೇ ಕಾವಲು ಕಾಯಬಹುದಾಗಿದೆ ಎಂದ ಅವರು, ಇದಕ್ಕಾಗಿ ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆಯಬೇಕು. ಕಾವಲು ಕಾಯುವ ಕಾರ್ಯಕ್ಕೆ ಅಗತ್ಯ ವ್ಯವಸ್ಥೆ ಆಡಳಿತ ಕಲ್ಪಿಸಲಿದೆ ಎಂದು ತಿಳಿಸಿದರು.
ಸಿಬ್ಬಂದಿಗೆ ಬಸ್ ವ್ಯವಸ್ಥೆ
ರಾಯಚೂರು: ಜಿಲ್ಲೆಯಲ್ಲಿ ಏ.17ರಂದು ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನೇಮಕಗೊಂಡ ಸಿಬ್ಬಂದಿಗೆ ಅವರಿಗೆ ಸೂಚಿಸಿದ ಸ್ಥಳಗಳಿಗೆ ತೆರಳಲು ಅಗತ್ಯ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಲೋಕಸಭೆ ಚುನಾವಣೆಯ ಮತದಾನ ಕಾರ್ಯಕ್ಕಾಗಿ ನೇಮಕಗೊಂಡಿರುವ ಎಲ್ಲ ಸಿಬ್ಬಂದಿಯನ್ನು ಅವರಿಗೆ ಸೂಚಿಸಿದ ಮತದಾನ ಕೇಂದ್ರಗಳಿಗೆ ತಲುಪಿಸಲು ವಾಹನಗಳು ಏ.16ರಂದು ಬೆಳಗ್ಗೆ 6ಕ್ಕೆ ಸರಿಯಾಗಿ ಒಂದು ತಾಲೂಕು ಕೇಂದ್ರದಿಂದ ಮತ್ತೊಂದು ತಾಲೂಕು ಕೇಂದ್ರಕ್ಕೆ ತೆರಳಲಿವೆ ಎಂದು ತಿಳಿಸಿದ್ದಾರೆ.
ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಯಾಣಕ್ಕಾಗಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳ ವ್ಯವಸ್ಥೆ ಮಾಡಿದ್ದು, ಎಲ್ಲಾ ಸಿಬ್ಬಂದಿ ಏ.16ರ ಬೆಳಗ್ಗೆ 5.30ಕ್ಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಬಸ್ ಹೊರಡುವ ಸ್ಥಳದಲ್ಲಿರಲು ಸೂಚಿಸಿದ್ದಾರೆ.
ಬಸ್ ಹೊರಡುವ ಸ್ಥಳಗಳು: ರಾಯಚೂರು ತಾಲೂಕು ಕೇಂದ್ರ- ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದಿಂದ ಏ.16ರಂದು ಬೆಳಗ್ಗೆ 6ಕ್ಕೆ, ಮಾನವಿ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣ, ದೇವದುರ್ಗದ ಎಪಿಎಂಸಿ ಆವರಣ, ಸಿಂಧನೂರಿನ ತಹಸೀಲ್ದಾರ್ ಕಚೇರಿ ಆವರಣ, ಲಿಂಗಸ್ಗೂರಿನ ಸರ್ಕಾರಿ ಪಪೂ ಕಾಲೇಜು ಆವರಣ, ಮಸ್ಕಿಯ ಭ್ರಮರಾಂಬಾ ದೇವಸ್ಥಾನ ಮುಂಭಾಗ ಪೊಲೀಸ್ ಠಾಣೆ ಹತ್ತಿರದಿಂದ ಸಾರಿಗೆ ಸಂಸ್ಥೆಯ ಬಸ್ಗಳು ತೆರಳಲಿವೆ ಎಂದು ತಿಳಿಸಿದ್ದಾರೆ.
ಜಾತ್ರೆ, ಸಂತೆ ಮುಂದೂಡಿಕೆ: ಡಿಸಿ ಆದೇಶ
ರಾಯಚೂರು: ಲೋಕಸಭೆ ಚುನಾವಣೆಯ ಮತದಾನದ ದಿನವಾದ ಏ.17ರಂದು ಜಿಲ್ಲೆಯಲ್ಲಿ ವಿವಿಧೆಡೆ ನಡೆಯುವ ಜಾತ್ರೆ, ದನಗಳ ಸಂತೆ ಸೇರಿ ವಿವಿಧ ಉತ್ಸವಗಳನ್ನು ಮುಂದೂಡಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಆದೇಶ ಹೊರಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಏ.17ರಂದು ಜಿಲ್ಲೆಯಲ್ಲಿ ನಡೆಯಬೇಕಿದ್ದ ಜಾತ್ರೆ, ದನಗಳ ಸಂತೆ, ಉತ್ಸವ ಮತ್ತು ಉರೂಸ್ ಮುಂದೂಡಲು ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

