ನಾಲೆಯೇ ಇಲ್ಲ, ಆದ್ರೂ ಅಲ್ಲಿನ ಹೂಳು ತೆಗೆದರು!
ಸಿಂಧನೂರು: ನಾಲೆಯೇ ಇಲ್ಲ. ಆದರೂ ಅದರಲ್ಲಿನ ಹೂಳು ತೆಗೆದರು...!
ಇಂತಹ ಅಸಾಧಾರಣ ಕಾರ್ಯವನ್ನು ಸಿಂಧನೂರು ಕಾಡಾ ಇಲಾಖೆಯ ಕೃಷಿ ವಿಭಾಗದ ಅಧಿಕಾರಿಗಳು ಮಾಡಿದ್ದಾರೆ ಎಂದು ಇಲಾಖೆಯ ದಾಖಲಾತಿಗಳೇ ಹೇಳುತ್ತಿವೆ ಎನ್ನುವುದನ್ನು ವಿವಿಧ ಸಂಘಟನೆಗಳ ಮುಖಂಡರು ಬೆಳಕಿಗೆ ತಂದಿದ್ದಾರೆ.
ತುಂಗಭದ್ರಾ ಯೋಜನೆಯ ಕಾಡಾ ಕೃಷಿ ಅಧಿಕಾರಿಗಳ ಕಾರ್ಯಾಲಯದಿಂದ 2011-12 ಮತ್ತು 2012- 13ರಲ್ಲಿ ಕೆಲವು ನಾಲೆಗಳನ್ನು ಹೂಳೆತ್ತಲು ಬೂದಿವಾಳ ಗ್ರಾಮದ ನೀರು ಬಳಕೆದಾರರ ಸಂಘಕ್ಕೆ ಹಣ ಬಿಡುಗಡೆ ಮಾಡಿ ಆ ಮೂಲಕ ಕಾಮಗಾರಿಯನ್ನು ಮುಗಿಸಲಾಯಿತು.
ಆ ಪೈಕಿ ದಾಖಲಾತಿ ಪ್ರಕಾರ- ಬೂದಿವಾಳ ಗ್ರಾಮದ ನಾಲೆಯ ಹೂಳೆತ್ತಲು 4,28,652, ಬೂದಿವಾಳ-ರಂಗದಾಳ ನಾಲೆಯ ಹೂಳೆತ್ತಲು 4,04,176. ಹೀಗೆ ವಿವಿಧ ನಾಲೆಗಳ ಹೂಳೆತ್ತಲು 4- 5 ಲಕ್ಷದವರೆಗೆ ಖರ್ಚು ಮಾಡಲಾಗಿದೆ. ಅದರಲ್ಲಿ ಬೂದಿವಾಳ-ವಳಬಳ್ಳಾರಿ ನಾಲೆಯ ಹೂಳೆತ್ತಲು 3,05,181ರೂ. ಖರ್ಚು ಮಾಡಲಾಗಿದೆ. ಆದರೆ ವಾಸ್ತವದಲ್ಲಿ ಬೂದಿವಾಳ- ವಳಬಳ್ಳಾರಿ ಮಧ್ಯದಲ್ಲಿ ಯಾವುದೇ ನಾಲೆಯೇ ಇಲ್ಲ ಎನ್ನುವುದು ಖರ್ಚಿನ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಬಯಲಾಗಿದೆ ಎಂದು ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಆರೋಗ್ಯಪ್ಪ ಪನ್ನೂರು, ಕರ್ನಾಟಕ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಕರಿಯಪ್ಪ, ಸಿದ್ದಪ್ಪ ಬೂದಿವಾಳ ಮತ್ತಿತರರು ತಿಳಿಸಿದ್ದಾರೆ. ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ವೀರನಗೌಡ ಮತ್ತು ಕಾರ್ಯದರ್ಶಿ ಜಗದೀಶ ಅವರು ಶಾಮೀಲಾಗಿ ಈ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿರುವ ಅವರು, ಮಲ್ಲೇಶ ನಾಯಕ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಿ ಈ ಮಾಹಿತಿಯನ್ನು ಪಡೆದಿದ್ದಾರೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

