ರಾಯಚೂರು

ಅಯೋಗ್ಯ ನೀರಿಂದ ಹತ್ತಾರು ಕಾಯಿಲೆ

Published On :

ಕ.ಪ್ರ. ವಾರ್ತೆ  ಮುದಗಲ್  ಏ.20
'ನಮ್ಮೂರಲ್ಲಿ ನೀರು ಕುಡಿದರೆ ಕಿಡ್ನಿ ಫೇಲ್ ಆಗುತ್ತವೆ. ಕೈ- ಕಾಲು ಮೂಳೆ ಹಿಡಿಯುತ್ತವೆ. ಸೊಂಟ ನೋವು ಬರುತ್ತದೆ. ಹಲ್ಲುಗಳ ಕಂದಾಗುತ್ತವೆ... ಆದ್ರೂ ನಮ್ಮ ಸಮಸ್ಯೆ ಕೇಳಾರು ಯಾರೂ ಇಲ್ರೀ..' ಎಂದು ಬನ್ನೋಗೋಳ ಗ್ರಾಮಸ್ಥರು ತಮ್ಮ ತೋಡಿಕೊಂಡರು.
ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕಿರು ನೀರು ಸರಬರಾಜು ಯೋಜನೆಯ ಬೋರ್‌ವೆಲ್ ನೀರು ಸಂಪೂರ್ಣ ಫ್ಲೋರೈಡ್‌ಯುಕ್ತವಾಗಿದ್ದು ಅದೇ ನೀರು ಕುಡಿಯದೇ ಗತಿ ಇಲ್ಲ. ಬೋರವೆಲ್ ನೀರನ್ನು ತೆರೆದ ಬಾವಿಗೆ ಸರಬರಾಜು ಮಾಡಿ ಅದೇ ನೀರನ್ನು ಬಳಕೆ ಮಾಡಲಾಗುತ್ತಿದೆ.
ಕಿಡ್ನಿ ಕಾಯಿಲೆ: ಗ್ರಾಮದ ಕುಡಿಯುವ ನೀರು ಸೇವಿಸಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶಗೌಡ, ಶಂಕ್ರಪ್ಪ ಹಳ್ಳಿ, ಶಿವಪ್ಪ ಮರಳಿ ಎನ್ನುವವರು ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದರೆ, ಅನೇಕರು ಕೈ-ಕಾಲು ನೋವುಗಳಿಂದ ಬಳಲುತ್ತಿದ್ದಾರೆ. ಬೆಂಗಳೂರು, ಬಾಗಲಕೋಟೆ ಮುಂತಾದಡೆ ಚಿಕಿತ್ಸೆ ಪಡೆಯುತ್ತಿದ್ದು ಕುಡಿಯುವ ನೀರಿನ ದೋಷ ಎಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಚಿಕ್ಕ ಮಕ್ಕಳ ಹಲ್ಲುಗಳು ಕಂದಾಗುತ್ತಿವೆ. ಯುವಕರು, ಯುವತಿಯರು ಕೀಲು ನೋವುಗಳಿಂದ ಬಳಲುತ್ತಿದ್ದಾರೆ. ಮಧ್ಯ ವಯಸ್ಕರು ವಯಸ್ಸಾದವರಂತೆ ಕಾಣುತ್ತಾರೆ. ಗ್ರಾಮದ ಕುಡಿಯುವ ನೀರು ಕುಡಿಯಲು ಆಯೋಗ್ಯವಾಗಿವೆ ಎಂದು ಹೇಳಲಾಗುತ್ತಿದೆ.
ನಿರ್ಲಕ್ಷ್ಯ ಮುಂದುವರಿದರೆ ಸಂಕಷ್ಟ: ಈ ಬಗ್ಗೆ ಸಂಬಂಧಿಸಿದ ಶಾಸಕರಿಗೆ, ತಾಪಂ, ಜಿಪಂ ಸದಸ್ಯರಿಗೆ ಮನವಿ ಮಾಡಲಾಗಿದೆ. ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಆರಂಭಿಸುವುದಾಗಿ ಹೇಳಿದರೂ ಇದುವರೆಗೆ ಶುದ್ಧ ಕುಡಿಯುವ ನೀರು ಸರಬರಾಜು ಆಗಿಲ್ಲ. ಹೀಗೆಯೇ ನಿರ್ಲಕ್ಷ್ಯ ಮುಂದುವರಿದರೆ ಇನ್ನು ಅನೇಕರು ಈ ನೀರು ಕುಡಿದು ಕಿಡ್ನಿ, ಕೈ- ಕಾಲು ನೋವಿನಿಂದ ಬಳಲಬೇಕಾಗುತ್ತದೆ. ಕೂಡಲೇ ಸಂಬಂಧಿಸಿದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸುವುದು ಅಗತ್ಯವಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಜಿಪಂಗೆ ಪ್ರಸ್ತಾವ: ಗ್ರಾಮ ಪಂಚಾಯಿತಿ ಸಭೆಯಲ್ಲಿ ಸಾಕಷ್ಟು ಬಾರಿ ಕುಡಿಯುವ ನೀರು ಸಮಸ್ಯೆ ಮತ್ತು ಶುದ್ಧ ಕುಡಿಯುವ ನೀರಿನ ಯೋಜನೆ ಸಿದ್ಧಪಡಿಸುವಂತೆ ಪ್ರಸ್ತಾಪ ಮಾಡಲಾಗಿದೆ. ಪಂಚಾಯಿತಿ ರಾಜ್ಯ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಜಿಪಂ.ಗೆ ವರದಿ ಕಳುಹಿಸಲಾಗಿದೆ. ಅಧಿಕಾರಿಗಳಿಗೂ ಮನವರಿಕೆ ಮಾಡಲಾಗಿದೆ. ಆದರೆ ಯಾರೂ ಸ್ಪಂದನೆ ನೀಡುತ್ತಿಲ್ಲ ಎಂದು ಜಿಪಂ ಸದಸ್ಯೆ ಮೀನಾಕ್ಷಮ್ಮ ಆದಾಪುರ ತಿಳಿಸಿದ್ದಾರೆ
ಬನ್ನಿಗೋಳ ಸೇರಿದಂತೆ ಹೂನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು, ಆದಾಪುರ, ಕೋಮಲಾಪುರ ಗ್ರಾಮಗಳಲ್ಲಿ ಶುದ್ಧ ಕುಡಿಯುವ ಘಟಕವನ್ನು ಸ್ಥಾಪನೆ ಮಾಡುವಂತೆ ತಾಪಂ ಸಭೆಯಲ್ಲಿ ರೀಜಲೇಷನ್ ಮಾಡಿ ಜಿಪಂ.ಗೆ ಕಳಿಸಲಾಗಿದೆ. ಕೋಮಲಾಪುರಕ್ಕೆ ಮಂಜೂರಾತಿ ದೊರೆತಿದೆ. ಬನ್ನೀಗೋಳ ಗ್ರಾಮಕ್ಕೂ ಅವಶ್ಯಕತೆ ಇದೆ ಎಂದು ತಾಪಂ ಸದಸ್ಯ ರುದ್ರಗೌಡ ತುರಡಗಿ ಹೇಳಿದರು.

 ಪಂಪಯ್ಯ ಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.