ಎಚ್ಕೆಇ ವಿದ್ಯಾರ್ಥಿಗಳಿಂದ ಎನ್ಎಸ್ಎಸ್ ಶಿಬಿರ
ಆಳಂದ: ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಆಳಂದ ಎಚ್ಕೆಇ ಪ್ರತಿಷ್ಠಿತ ಎ.ವಿ. ಪಾಟೀಲ ಪದವಿ ಮಹಾವಿದ್ಯಾಲಯದ 2014ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ನಡೆಯಿತು.
ದಳಪತಿ ಬಸವರಾಜ ಎನ್.ಪಾಟೀಲ ಶಿಬಿರ ಉದ್ಘಾಟಿಸಿ, ಶಿಬಿರಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಹಕಾರ ಮನೋಭಾವದ ಜತೆಗೆ ಶ್ರಮದಾನದ ಮಹತ್ವವನ್ನು ಇಂಥ ಶಿಬಿರಗಳ ಮೂಲಕ ಜಾಗೃತಿ ಮೂಡಿಸಲು ಸಾದ್ಯವಾಗುತ್ತದೆ. ಕಾಲೇಜಿನ ಪ್ರಾದ್ಯಾಪಕ ಎಸ್.ಡಿ. ಬರ್ದಿ ಅಧ್ಯಕ್ಷತೆ ವಹಿಸಿ, ಸೇವಾ ಮನೋಭಾವ ವಿದ್ಯಾರ್ಥಿಗಳಲ್ಲಿ ಬರಬೇಕಾದರೆ ಶಿಬಿರಗಳಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವಾಗಿದ್ದು ಇದರ ಮೂಲಕ ರಚನಾತ್ಮಕ, ವಿಧಾಯಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಎಂದರು.
ಯೋಜನಾಧಿಕಾರಿ ಎಸ್.ಎಸ್. ಹಿರೇಮಠ ಶಿಬಿರದ ಉದ್ದೇಶ ತಿಳಿಸಿದರು. ಚನ್ನಬಸಪ್ಪ ಕೋಟೆ, ರಾಜೇಂದ್ರ ಬಿರಾದಾರ ಅತಿಥಿಗಳಾಗಿ ಮಾತನಾಡಿದರು. ಎಸ್.ಡಿ. ಬರ್ದಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಸೇವಾಗೀತೆಯನ್ನು ಸಾದರಪಡಿಸಿದರು. ಸಿ.ಎಂ. ಸುತಾರ ಸ್ವಾಗತಿಸಿದರು. ಪ್ರಾಧ್ಯಾಪಕ ಬಸವರಾಜ ಕಾಗೆ ನಿರೂಪಿಸಿದರು. ಸುಧೀರ ಪಡಶೆಟ್ಟಿ ವಂದಿಸಿದರು.
ಚರಂಡಿ ಕಾಮಗಾರಿ ಪರಿಶೀಲನೆ
ಶಹಾಬಾದ್: ಪಟ್ಟಣದ ವಿವಿಧೆಡೆ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ ಚರಂಡಿ ಕಾಮಗಾರಿಗಳನ್ನು ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ನೀಡಿದ ದೂರಿನನ್ವಯ ದಾಖಲಾತಿಗಳೊಂದಿಗೆ ಮಂಗಳವಾರ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿ ದೇವಿಪ್ರಸಾದ ಪರಿಶೀಲನೆ ನಡೆಸಿದರು. ನಗರದ ಶಿವಾಜಿ ಚೌಕ್, ಆಜಾದ್ ಚೌಕ್, ಮಾಂಸ ಮಾರುಕಟ್ಟೆ, ಗಾಂಧಿ ಚೌಕ್, ಅಂಬೇಡ್ಕರ್ ಚೌಕ್ ಇನ್ನಿತರ ಸ್ಥಳಗಳಲ್ಲಿ ನಿರ್ಮಿಸಲಾದ ದೊಡ್ಡ ಹಾಗೂ ಸಣ್ಣ ಚರಂಡಿಗಳ ಸುತ್ತಳತೆ ಪರಿಶೀಲನೆ ಮಾಡಿದರು. ಪುರಸಭೆ ಮುಖ್ಯಾಧಿಕಾರಿ ರಮೇಶ ಪಟ್ಟೇದಾರ, ಜೆ.ಇ. ಸಿದ್ದಪ್ಪ ಸೊಂಪೂರೆ, ಮನೋಜ ಕುಮಾರ ಹಿರೋಳಿ, ಈಶ್ವರ ಅಂಬೇಕರ್, ವಿಶ್ವನಾಥ ಭಾಗೋಡಿ, ಪಿಡಬ್ಲ್ಯೂಡಿ ಇಲಾಖೆ ಸ. ಅಭಿಯಂತರ ಸತೀಶ, ಶ್ರೀಮಂತ, ದೂರುದಾರ ಕರವೇ ಅಧ್ಯಕ್ಷ ಸಿದ್ದು ಪಂಚಾಳ, ಅಂಬರೀಶ ಮಾಳಗೆ, ಸಲ್ಮಾನ್ ಖಾನ್, ಇಸ್ಮಾಯಿಲ್ ಜಿಲಾನಿ ಇದ್ದರು.
ಇಂದು ವಿಶ್ವ ಭೂ ದಿನಾಚರಣೆ
ಗುಲ್ಬರ್ಗ: ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಏ.23 ರಂದು ವಿಶ್ವ ಭೂ ದಿನಾಚರಣೆ ಆಚರಿಸಲಾಸಲಾಗುತ್ತಿದೆ ಎಂದು ಜಿಲ್ಲಾ ವಿಜ್ಞಾನ ಅಧಿಕಾರಿ ಸಿ.ಎನ್. ಲಕ್ಷ್ಮೀನಾರಾಯಣ ತಿಳಿಸಿದ್ದಾರೆ. ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಬಿಸಿಯಾಗುತ್ತಿರುವ ಧರೆ, ತೆಳುವಾಗುತ್ತಿರುವ ಓಝೋನ್ ಪದರ ಮತ್ತು ಅದರಿಂದಾಗುವ ಪರಿಣಾಮ ಎಂಬ ವಿಷಯದ ಮೇಲೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಪರಿಸರ ಸ್ನೇಹಿ ಶಕ್ತಿಯ ಮೂಲಗಳು ಪರಿಸರ ಸ್ನೇಹಿ ನಗರಗಳು ಎಂಬ ವಿಷಯದ ಮೇಲೆ ಭಾಷಣ ಸ್ಪರ್ಧೆ, ಜೀವಿ ಪರಿಸ್ಥಿತಿ ಮತ್ತು ಪರಿಸರ ಎಂಬ ವಿಷಯ ಕುರಿತ ಮುಕ್ತ ರಸಪ್ರಶ್ನೆ ಹಾಗೂ ಪರಿಸರ ಸ್ನೇಹಿ ಶಕ್ತಿ ಮೂಲಗಳು ಹಾಗೂ ಪರಿಸರ ಸ್ನೇಹಿ ನಗರಗಳು ಎಂಬ ವಿಷಯದ ಮೇಲೆ ಉಪನ್ಯಾಸ ಏರ್ಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಎಲ್ಲಾ ಸ್ಪರ್ಧಾಳುಗಳು ಬೆಳಗ್ಗೆ 10ಕ್ಕೆ ವಿಜ್ಞಾನ ಕೇಂದ್ರದಲ್ಲಿ ಹಾಜರಿರಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ಸಿದ್ದಲಿಂಗೇಶ್ವರ ಜಾತ್ರೆ ಇಂದು
ಶಹಾಬಾದ್: ಗ್ರಾಮದ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವವು ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಏ.23ರಂದು ಸಂಭ್ರಮ, ಸಡಗರದಿಂದ ನಡೆಯಲಿದೆ. ಸಾಯಂಕಾಲ 6 ಗಂಟೆಗೆ ರಥೋತ್ಸವ, ನಂತರ ಶಿವಾನುಭವ ಚಿಂತನ ನಡೆಯಲಿದ್ದು ಜವಳಗಿ ವಿರಕ್ತಮಠದ ಜಡಿ ಬಸವಲಿಂಗೇಶ್ವರ ಸ್ವಾಮಿ ಅಧ್ಯಕ್ಷತೆ ವಹಿಸುವರು. ಮುಗಳನಾಗಾವಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯ, ಸೊನ್ನ ಮಠದ ಡಾ. ಶಿವಾನಂದ ಸ್ವಾಮೀಜಿ ಭಾಗವಹಿಸಲಿದ್ದಾರೆ. ಏ.24ರಂದು ಗೀಗೀ ಪದ, ಜಂಗೀ ಕುಸ್ತಿಗಳು, ಏ.25ರಂದು ದನಗಳ ಪ್ರದರ್ಶನ ಜರುಗಲಿದೆ ಎಂದು ಜಾತ್ರಾ ಮಹೋತ್ಸವದ ಪ್ರಕಟಣೆ ತಿಳಿಸಿದೆ.
ಇಂದು ಸಭೆ
ಗುಲ್ಬರ್ಗ: ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಮತ್ತು ಉಪ ತೆರಿಗೆಗಳಲ್ಲಿ ಮಾಡಿರುವ ಹೆಚ್ಚಳ ಹಿನ್ನೆಲೆಯಲ್ಲಿ ಹೈದ್ರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಏ.23ರಂದು ಮ.4.30ಕ್ಕೆ ವಿಐಪಿಗಳು, ಸರ್ಕಾರೇತರ ಸಂಘ ಸಂಸ್ಥೆಗಳು ಸಭೆ ಆಯೋಜಿಸಿವೆ. ಮಹಾನಗರ ಪಾಲಿಕೆಯು ನಗರದ ನಾಗರಿಕರಿಗೆ ಯಾವುದೇ ಮುನ್ಸೂಚನೆ ನೀಡದೆ ಪ್ರಸಕ್ತ ಸಾಲಿನ ಆಸ್ತಿಗಳ ಮೇಲೆ ಸಂಗ್ರಹಿಸುತ್ತಿರುವ ಆಸ್ತಿ ತೆರಿಗೆ ಮತ್ತು ಉಪ ತೆರಿಗೆಗಳಲ್ಲಿ ಮಾಡಿರುವ ಹೆಚ್ಚಳ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲ ಸಂಘ ಸಂಸ್ಥೆಗಳು, ಕಾರ್ಯದರ್ಶಿಗಳು ಜಂಟಿಯಾಗಿ ಸಭೆಯನ್ನು ಕೈಗೊಂಡಿವೆ ಎಂದು ಗೌರವ ಕಾರ್ಯದರ್ಶಿ ಅಮರನಾಥ ತಿಳಿಸಿದ್ದಾರೆ.
ಉಚಿತ ಪ್ರವೇಶ
ಗುಲ್ಬರ್ಗ: ಚಿಮ್ಮಲಗಿ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ 8ನೇ ತರಗತಿಯಲ್ಲಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 9ನೇ ತರಗತಿಗೆ ಉಚಿತ ಪ್ರವೇಶ ಪ್ರಾರಂಭಗೊಂಡಿವೆ. ವಿವರಕ್ಕೆ ಮೊ. 9902876174, 08472-275119ಗೆ ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

