ಕನ್ನಾಳದಲ್ಲಿ ಚಿಕೂನ್ ಗುನ್ಯಾ?
ಮುದಗಲ್: ಎಪ್ಪಾ ಮೊದಲು ಕೈ ನೋವು ಕಾಲು ನೋವು ನಂತರದಲ್ಲಿ ಏಕಾಏಕೀ ಜ್ವರ, ಕೆಮ್ಮು ಬಂತು. ಇದರಿಂದ ನಿತ್ರಾಣ ಆಗಿ ಬಹಳ ತ್ರಾಸ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಕನ್ನಾಳ ಗ್ರಾಮದ ನಿವಾಸಿಗಳು.
ಪಟ್ಟಣ ಸಮೀಪದ ಕನ್ನಾಳ ಗ್ರಾಮದಲ್ಲಿ ಕಳೆದ ನಾಲ್ಕಾರು ದಿನಗಳಿಂದಲೂ ಚಿಕೂನ್ ಗುನ್ಯಾ ಕಾಯಿಲೆಯಿಂದ ಅಲ್ಲಿನ ನಿವಾಸಿಗಳು ನರಳುತ್ತಿದ್ದಾರೆ. ಗ್ರಾಮದ ತುಂಬೆಲ್ಲಾ ಕೊಳಚೆ ಹರಡಿರುವ ಪರಿಣಾಮ ಚಿಕೂನ್ ಗುನ್ಯಾ ಹರಡಿದೆ ಎಂದು ಆರೋಗ್ಯ ಇಲಾಖಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ವೈದ್ಯರ ತಂಡವೇ ಕನ್ನಾಳ ಗ್ರಾಮದಲ್ಲಿ ಬೀಡು ಬಿಡುವಂತಾಗಿದೆ.
ಕನ್ನಾಳ ಗ್ರಾಮದಲ್ಲಿ ಕುಡಿವ ನೀರು ಸಮಸ್ಯೆ ತಲೆದೋರಿದ್ದು ಬೇಸಿಗೆ ಕಾಲದಲ್ಲೂ ಅದು ಮುಂದುವರೆದಿದೆ. ಇದರಿಂದಾಗಿ ನಿವಾಸಿಗಳು ನೀರಿನ ಅನಿವಾರ್ಯತೆಯಿಂದಾಗಿ ನೀರನ್ನು ಶೇಖರಿಸಿ ಇಟ್ಟು ಕುಡಿಯಲಾರಂಭಿಸಿದ್ದು ಚಿಕೂನ್ ಗುನ್ಯಾ ಹರಡಲು ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.
ಪರದಾಟ: ಮೆದಿಕಿನಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುವ ಕನ್ನಾಳ ಗ್ರಾಮದಲ್ಲಿ ಚಿಕೂನ್ ಗೂನ್ಯಾದಿಂದ ರಕ್ಷಿಸಿಕೊಳ್ಳಲು ಮುದಗಲ್ ಹಾಗೂ ಲಿಂಗಸ್ಗೂರು ಪಟ್ಟಣ ಪ್ರದೇಶದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಬಸ್ ಸೌಕರ್ಯವಿಲ್ಲದೇ ಪರದಾಡುವಂತಾಗಿದೆ.
ಬೀಡು: ಮೆದಿಕಿನಹಾಳ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ. ನೇತ್ರಾವತಿ ಸೇರಿದಂತೆ ಸಿಬ್ಬಂದಿ ವರ್ಗ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಈಗಾಗಲೇ ರಕ್ತ ತಪಾಸಣೆ ಹಾಗೂ ಚಿಕೂನ್ ಗುನ್ಯಾದಿಂದ ಬಳಲುತ್ತಿರುವ ರೋಗಿಗಳ ತಪಾಸಣೆಗೈದು ಚಿಕಿತೆಗೆ ಒಳಪಡಿಸಿದ್ದಾರೆ. ಇನ್ನು 2-3 ದಿನಗಳಲ್ಲಿ ಗ್ರಾಮದಲ್ಲಿನ ಚಿಕೂನ್ ಗುನ್ಯಾ ರೋಗ ನಿಯಂತ್ರಣಕ್ಕೆ ಬರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದರು.
ಫಾಗಿಂಗ್: ಈಗಾಗಲೇ ಗ್ರಾಪಂ ಆಡಳಿತ ಮಂಡಳಿ ಹಾಗೂ ಅಭಿವೃಧ್ಧಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಗ್ರಾಮದ ಕೊಳಚೆ ಪ್ರದೇಶದಲ್ಲಿ ಫಾಗಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಔಷಧ ವಿತರಕ ನಾಗರಾಜ ಹಳ್ಳುರು, ತಾಲೂಕು ಮಲೇರಿಯಾ ತಾಂತ್ರಿಕ ಮೇಲ್ವಚಾರಕ ಜಗನ್ನಾಥ, ಬಸವರಾಜ ಜೇಗರಕಲ್, ಸಿಬ್ಬಂಧಿಗಳಾದ ಈರಮ್ಮ, ಹನುಮಂತ ನಾಯಕ, ಸೇರಿದಂತೆ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

