ಆರ್ಥಿಕ ನಷ್ಟ ತಾಳದೆ 'ಬದುಕಿ'ಗೆ ಕೊಳ್ಳಿಯಿಟ್ಟ ರೈತ
ಕನ್ನಡಪ್ರಭ ವಾರ್ತೆ ರಾಯಚೂರು ಏ.27
ಬೆಳೆಗೆ ಮಾರುಕಟ್ಟೆಯ ಕೊರತೆ, ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ದೊರೆಯದೇ ರೈತರು ಕಂಗಾಲಾಗುವುದು ಸಾಮಾನ್ಯ ಸಂಗತಿ. ಆದರೆ ತಾನೇ ತನ್ನ ಕೈಯಾರೆ ಬೆಳೆದ ಬೆಳೆ ವಿವಿಧ ರೋಗಕ್ಕೆ ತುತ್ತಾಗಿ ಕಣ್ಮುಂದೆ ಹಾಳಾಗಿ ಆರ್ಥಿಕ ಹೊರೆ ಹೆಚ್ಚಿಸುವುದನ್ನು ತಪ್ಪಿಸಲು ರೈತನೊಬ್ಬ ದಾಳಿಂಬೆ ಬೆಳೆಗೆ ಬೆಂಕಿಯಿಟ್ಟು ನಾಶಪಡಿಸಿದ ಘಟನೆ ಭಾನುವಾರ ತಾಲೂಕಿನ ಕಡಗಂದೊಡ್ಡಿ ಗ್ರಾಮದಲ್ಲಿ ನಡೆದಿದೆ. ನಿರೀಕ್ಷಿತ ಪ್ರಮಾಣದಲ್ಲಿ ದಾಳಿಂಬೆ ಬೆಳೆ ಬಾರದಿದ್ದರೆ ನಷ್ಟ ಹೆಚ್ಚಾಗುತ್ತದೆ. ಇದನ್ನು ಭರಿಸುವುದು ಹೇಗೆ ಎನ್ನುವ ದೊಡ್ಡ ಪ್ರಶ್ನೆ ಎದುರಾಗುತ್ತದೆ.
ಗ್ರಾಮದ ರೈತ ಗುರುಸ್ವಾಮಿ ಎಂಬುವವರು ತಮ್ಮ 8 ಎಕರೆ ಹೊಲದಲ್ಲಿ ತೋಟಗಾರಿಕೆ ಯೋಜನೆಗೆ ಸರ್ಕಾರದಿಂದ ನೀಡಿದ ಉತ್ತೇಜನದಿಂದ ದಾಳಿಂಬೆ ಬೆಳೆ ಬೆಳೆದಿದ್ದರು. ಆರಂಭದಲ್ಲಿ ಕೈಹಿಡಿದಿದ್ದ ಬೆಳೆಯು ಆನಂತರದಲ್ಲಿ ವರ್ಷದಿಂದ ವರ್ಷಕ್ಕೆ ಆರ್ಥಿಕ ಮುಗ್ಗಟ್ಟು ಸೃಷ್ಟಿಸಿದ್ದೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.
15 ಲಕ್ಷಕ್ಕೂ ಅಧಿಕ ವೆಚ್ಚ: ಗ್ರಾಮದಲ್ಲಿರುವ ತನ್ನ 8 ಎಕರೆ ಹೊಲದಲ್ಲಿ 15 ಲಕ್ಷಕ್ಕೂ ಹೆಚ್ಚಿನ ಸಾಲ ಪಡೆದು ಬೆಳೆದಿದ್ದ ದಾಳಿಂಬೆ ಗಿಡಕ್ಕೆ ಕಾಂಡಕೊರಕ ಹುಳುವಿನ ಕಾಟ, ದುಂಡಾಣು ರೋಗ ತಗುಲಿದ್ದರಿಂದ ರೈತ ಕಂಗಾಲಾಗಿದ್ದಾನೆ.
ಮತ್ತಷ್ಟು ನಷ್ಟದಿಂದ ಪಾರಾಗಲು ರೈತ ಗುರುಸ್ವಾಮಿ ಭಾನುವಾರ ತನ್ನ ಬೆಳೆಗೆ ಬೆಂಕಿಯಿಟ್ಟು ಸುಟ್ಟಿದ್ದಾರೆ.
ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ 15 ಲಕ್ಷಕ್ಕೂ ಹೆಚ್ಚಿನ ಸಾಲ ಪಡೆದು ಬೆಳೆದ ದಾಳಿಂಬೆ ಬೆಳೆಗೆ ರೋಗ ಕಾಣಿಸಿಕೊಂಡಿದ್ದರಿಂದ ಕಂಗೆಟ್ಟ ರೈತ ಇಂಥ ನಿರ್ಧಾರಕ್ಕೆ ಬಂದಿದ್ದಾನೆಂದು ಗ್ರಾಮದ ರೈತರು ತಿಳಿಸಿದ್ದಾರೆ. ರೋಗಕ್ಕೆ ಸಂಬಂಧಿಸಿ ರೈತ ಗುರುಸ್ವಾಮಿ ಕೃಷಿ ತಜ್ಞರನ್ನು ಸಂಪರ್ಕಿಸಿದ್ದು ಅವರು ನೀಡಿದ ಸಲಹೆ ಪ್ರಯೋಜನಕ್ಕೆ ಬಾರದ ಹಿನ್ನೆಲೆ ಬೇಸತ್ತು ಮತ್ತಷ್ಟು ಆರ್ಥಿಕ ಸಂಕಷ್ಟದಿಂದ ಪಾರಾಗಲು ತಾನೇ ಬೆಳೆದಿದ್ದ ಬೆಳೆಗೆ ಬೆಂಕಿಯಿಟ್ಟು ಸುಟ್ಟಿರುವ ಘಟನೆ ನಡೆದಿದೆ.
ಒತ್ತಾಯ: ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಕಡಗಂದೊಡ್ಡಿ ಗ್ರಾಮದ ರೈತ ತಾನೇ ಬೆಳೆದ ಬೆಳೆಗೆ ಬೆಂಕಿಯಿಡಲು ಸರ್ಕಾರಗಳ ಕೃಷಿ ವಿರೋಧಿ ನೀತಿಗಳೇ ಕಾರಣ.
ದುಂಡಾಣು ರೋಗದಿಂದ ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಹಾನಿಯ ಹೊಣೆ ಹೊರಬೇಕೆಂದು ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲ ರೈತ ಗುರುಸ್ವಾಮಿ ಅವರು ಪಡೆದಿದ್ದ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಸಂತ್ರಸ್ತ ರೈತ ಮತ್ತೆ ಕೃಷಿಯಲ್ಲಿ ತೊಡಗಲು ಆರ್ಥಿಕ ನೆರವು ನೀಡಬೇಕೆಂದು ಆಡಳಿತವನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

