ರಾಜ್ಯ ಅಂಗವಿಕಲರ, ಪಾಲಕರ ಒಕ್ಕೂಟದ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ
ರಾಯಚೂರು: ಅಂಗವಿಕಲರ ಹಕ್ಕುಗಳ ಕಾಯಿದೆ-2013ರ ನೂತನ ಕಾಯಿದೆಯನ್ನು ರಾಜ್ಯಸಭೆಯಲ್ಲಿ ತಿದ್ದುಪಡಿಯೊಂದಿಗೆ ಮಂಡಿಸುವಂತೆ ಒತ್ತಾಯಿಸಿ ನಗರದಲ್ಲಿ ಸೋಮವಾರ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮಿತಿ ಕಾರ್ಯಕರ್ತರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ, ಕಳೆದ ಅನೇಕ ವರ್ಷಗಳಿಂದ ಅಂಗವಿಕಲರಿಗಾಗಿ ರೂಪಿಸಿದ 1995ನೇ ಕಾಯಿದೆ ಬದಲು ನೂತನ ಕಾಯಿದೆಯ ಜಾರಿಯ ಅವಶ್ಯಕತೆಯಿದೆ. ಈ ಬಗ್ಗೆ ಸಮಿತಿಯಿಂದ ಅನೇಕ ಸಲ ಹೋರಾಟ ಮಾಡಲಾಗಿದೆ ಎಂದು ತಿಳಿಸಿದರು.
ಕಾನೂನು ವಿವಿಗೆ ಹೊಣೆ: ನಿರಂತರ ಹೋರಾಟದ ಫಲವಾಗಿ 2009ರಲ್ಲಿ ಕೇಂದ್ರ ಸರ್ಕಾರವು ಸಮಿತಿಯೊಂದನ್ನು ರಚಿಸಿ ನೂತನವಾಗಿ ಅಂಗವಿಕಲರ ಕಾಯಿದೆ ರಚಿಸುವ ನಿಟ್ಟಿನಲ್ಲಿ ಹೊಣೆಯನ್ನು ಹೈದರಾಬಾದ್ ಕಾನೂನು ವಿವಿಗೆ ವಹಿಸಿದೆ. ವಿವಿ ಯು ಈಗಾಗಲೇ ಕಾಯಿದೆ ಕರಡನ್ನು ತಯಾರಿಸಿದೆ. ಕರಡಿನ ಬಗ್ಗೆ ಅಂಗವಿಕರಲರ ಸಂಘ ಸಮಿತಿಗಳೊಂದಿಗೆ ಚರ್ಚಿಸಿ ಪ್ರಮುಖ ತಿದ್ದುಪಡಿಗಳನ್ನು ಕೈಗೊಳ್ಳಲು ಸೂಚಿಸಿದೆ ಎಂದರು.
ಅನುಮತಿ ಪಡೆಯಲು ವಿಳಂಬ: ಆದರೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಕಾಯಿದೆಯನ್ನು ಎರಡು ವರ್ಷಗಳವರೆಗೆ ಕಾಯ್ದಿರಿಸಿ ನಂತರ ಅಂತರ್ಜಾಲದಲ್ಲಿ ಅಳವಡಿಸಿ ನಂತರ ಮತ್ತೆ 2013ರವರೆಗೆ ಸಂಪುಟದ ಅನುಮತಿ ಪಡೆಯಲು ವಿಳಂಬ ಮಾಡಲಾಗಿದೆ ಎಂದು ಆರೋಪಿಸಿದರು.
ಶೀಘ್ರದಲ್ಲಿಯೇ ಲೋಕಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕಾಯಿದೆ ಜಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ದೇಶದ ಕೋಟ್ಯಂತರ ಅಂಗವಿಕಲರ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರ ಈಗಲಾದರೂ ಚುನಾವಣೆಗೂ ಮುನ್ನ ಕ್ರಮ ಜರುಗಿಸಬೇಕಿದೆ ಎಂದು ಆಗ್ರಹಿಸಿದರು.
ರಾಜ್ಯಸಭೆಯಲ್ಲಿ ಮಂಡಿಸಿ: ಕೆಲ ತಿಂಗಳ ಹಿಂದೆ ಅಂತರ್ಜಾಲದಲ್ಲಿ ಅಳವಡಿಸಿದ ಕಾಯಿದೆಗೂ ಹಾಗೂ ಕೇಂದ್ರ ಸರ್ಕಾರ ಅನುಮೋದಿಸಿದ ಕಾಯಿದೆಯ ಪ್ರತಿಗೂ ವ್ಯತ್ಯಾಸವಿದ್ದು, ಅಂಗವಿಕಲರ ಉದ್ಯೋಗದ ಬಗ್ಗೆ ಸುಪ್ರೀಂಕೋರ್ಟಿನ ತೀರ್ಪು ಕೈಬಿಟ್ಟಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆಗೂ ಮುನ್ನವೇ ಅಂಗವಿಕಲರ ಹಕ್ಕುಗಳ 2013ರ ಕಾಯಿದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದಿಸಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಅಂಗವಿಕಲರ ಬೇಡಿಕೆಯಂತೆ ತಿದ್ದುಪಡಿ ಮಾಡಿ ಮಂಡಿಸಬೇಕು. ಕಾಯಿದೆಯನ್ನು ಅಂಗೀಕರಿಸುವ ಎಲ್ಲ ಪ್ರಯತ್ನ ಮಾಡಬೇಕು. ತಿದ್ದುಪಡಿ ಸೇರ್ಪಡೆಗೊಳಿಸಲು ಸಾಧ್ಯವಾಗದಿದ್ದಲ್ಲಿ ಕಾಯಿದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸಿ ಅಂಗವಿಕಲರ ಮತ್ತು ಸಂಘ, ಸಂಸ್ಥೆಗಳ ಸಲಹೆಗಳನ್ನು ಪುನಾ ಪಡೆದು ಪ್ರಬಲ ಕಾಯಿದೆ ರೂಪಿಸುವಂತೆ ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

