ರಾಯಚೂರು

ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ನ್ಯಾ. ಮಜಗೆ

Published On :

ಕ.ಪ್ರ. ವಾರ್ತೆ   ರಾಯಚೂರು   ಫೆ.3
ನಗರದ ವಿವಿಧ ಬಡಾವಣೆಗಳಿಗೆ ಸೋಮವಾರ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ಎಸ್.ಬಿ. ಮಜಗೆ ಅವರು ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ನಗರದ ಮಡ್ಡಿಪೇಟೆ, ಜಲಾಲ್ ನಗರ, ಗದ್ವಾಲ್ ರಸ್ತೆ ಮತ್ತಿತರೆ ಪ್ರದೇಶಗಳಿಗೆ ಬೆಳಗ್ಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ನಗರಸಭೆಯ ಅಧಿಕಾರಿಗಳ ಅಸಮರ್ಪಕ ಕಾರ್ಯವೈಖರಿಯನ್ನು ಕಂಡು ತೀವ್ರ ಬೇಸರ ವ್ಯಕ್ತಪಡಿಸಿ, ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿ ನಿರ್ಲಕ್ಷ್ಯಕ್ಕೆ ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳ ವೈಫಲ್ಯಕ್ಕೆ ಅಸಮಾಧಾನ: ನಗರದ ಮಡ್ಡಿಪೇಟೆಯಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಾರ್ವಜನಿಕ ಶೌಚಾಲಯ ಸೌಲಭ್ಯವಿಲ್ಲದಿರುವುದನ್ನು ನಾಗರಿಕರು ದೂರಿದರು. ಹಾಗೆಯೇ ರಸ್ತೆಯ ಇಕ್ಕೆಲಗಳಲ್ಲಿ ಘನತ್ಯಾಜ್ಯ ಮತ್ತು ಚರಂಡಿ ತುಂಬಿ ಹರಿಯುತ್ತಿರುವುದನ್ನು ಕಂಡ ಅವರು, ನಗರಸಭೆಯ ಸಿಬ್ಬಂದಿ ಕಾರ್ಯನಿರ್ವಹಣೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಜನತೆಗೆ ಸ್ವಚ್ಛ ಪರಿಸರ ನೀಡುವಲ್ಲಿ ಅಧಿಕಾರಿಗಳ ವೈಫಲ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಅವರು ರಿಮ್ಸ್ ಬೋಧಕ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ವಿವಿಧ ವಾರ್ಡುಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಅವರು ಆಸ್ಪತ್ರೆಯ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ವಾರ್ಡಿಗೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ವೈದ್ಯರಿಂದ ಮಾಹಿತಿ ಕೇಳಿದರು.
ಅಪೌಷ್ಟಿಕ ಮಕ್ಕಳಿಗೆ ನೀಡಲಾಗುವ ಆಹಾರ ಮತ್ತು ಹಾಲಿನ ಗುಣಮಟ್ಟವನ್ನು ಪರಿಶೀಲಿಸಿದ ಅವರು, ವೈದ್ಯರು ಹಾಗೂ ನರ್ಸ್‌ಗಳಿಗೆ ಮಾಹಿತಿ ನೀಡುವಂತೆ ಸೂಚಿಸುವ ಮೂಲಕ ಬಿಸಿ ಮುಟ್ಟಿಸಿದರು. ನಂತರ ಅವರು ಆಸ್ಪತ್ರೆಯ ಬಾಣಂತಿಯರ ವಿಭಾಗಕ್ಕೆ ತೆರಳಿ ಅಲ್ಲಿ ದಾಖಲಾಗಿದ್ದ ಮಹಿಳೆಯರನ್ನು ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಕೇಳಿತಿಳಿದುಕೊಂಡರು.
ಶೌಚಾಲಯದ ದುರ್ವಾಸನೆ: ಈ ವೇಳೆ ಅವರು ಬಾಣಂತಿಯರ ವಿಭಾಗದಲ್ಲಿನ ಶೌಚಾಲಯ ಗಬ್ಬುನಾರುತ್ತಿರುವುದನ್ನು ಕಂಡು ತೀವ್ರ ಬೇಸರಗೊಂಡರು. ಹಾಗೆಯೇ ವೈದ್ಯರನ್ನು ಈ ಬಗ್ಗೆ ತರಾಟೆಗೆ ತೆಗೆದುಕೊಂಡು ತೀರಾ ಶೋಚನೀಯ ಪರಿಸ್ಥಿತಿ ಇದಾಗಿದೆ. ರೋಗಿಗಳ ಪರಿಸ್ಥಿತಿ ಸುಧಾರಿಸಲು ಸಿಬ್ಬಂದಿ ಪ್ರಯತ್ನಿಸಬೇಕು. ಸ್ವಚ್ಛತೆ ಕಾಯ್ದುಕೊಳ್ಳುವತ್ತ ಹೆಚ್ಚಿನ ಗಮನ ನೀಡದ ಸಿಬ್ಬಂದಿಯನ್ನು ಅವರು ತೀವ್ರ ತರಾಟೆಗೆ ತೆಗೆದುಕೊಂಡರು.
ನಂತರ ಅವರು ರಾಯಚೂರು ತಾಲೂಕಿನ ಹೆಗ್ಗಸನಹಳ್ಳಿ ಮತ್ತಿತರೆ ಪ್ರದೇಶದಿಂದ ಲೋಕಾಯುಕ್ತಕ್ಕೆ ಸಲ್ಲಿಕೆಯಾದ ದೂರುಗಳ ಪರಿಶೀಲನೆಗೆ ಪ್ರವಾಸ ಕೈಗೊಂಡರು. ಈ ವೇಳೆ ನಗರಸಭೆ ಪೌರಾಯುಕ್ತ ಬಸಪ್ಪ, ಪರಿಸರ ಅಭಿಯಂತರ ಮಲ್ಲಿಕಾರ್ಜುನ, ಜಿಲ್ಲಾ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಉಪ ಲೋಕಾಯುಕ್ತರೊಂದಿಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.