ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹ
ಸಿಂಧನೂರು: ಲಕ್ಷಾಂತರ ಜನರು ಸರ್ಕಾರಿ ಕೆಲಸದಿಂದ ವಂಚಿತರಾಗುತ್ತಿರುವುದಕ್ಕೆ ಗುತ್ತಿಗೆ ಆಧಾರಿತ ಪದ್ಧತಿ ಕಾರಣವಾಗಿದ್ದು, ಕೇಂದ್ರ- ರಾಜ್ಯ ಸರ್ಕಾರಗಳನ್ನು ಇದನ್ನು ಕೈಬಿಡಬೇಕೆಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸಾವಿರಾರು ಜನ ಅಸಂಘಟಿತ ಹಮಾಲ ಕಾರ್ಮಿಕರು ರೈತರು ಬೆಳೆದ ಉತ್ಪನ್ನಗಳನ್ನು ನಗರಕ್ಕೆ ಸಾಗಿಸಲು ಹಾಗೂ ಪ್ರಮುಖ ಬಜಾರ್, ಎಪಿಎಂಸಿ, ವೇರ್ಹೌಸ್, ರೈಸ್ ಮಿಲ್ಗಳಲ್ಲಿ ಮೈಮುರಿದು ದುಡಿಯುತ್ತಿದ್ದಾರೆ. ಆದರೆ ಇವರಿಗೆ ಕನಿಷ್ಠ ಸಾಮಾಜಿಕ ಭದ್ರತೆಯೂ ಇಲ್ಲ. ಇದಕ್ಕೆ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಯೇ ಕಾರಣ ಎಂದು ಕಿಡಿಕಾರಿದರು.
ಸರ್ಕಾರ ಮುತುವರ್ಜಿ ವಹಿಸಲಿ: ದೆಹಲಿ, ಹರಿಯಾಣ ಹಾಗೂ ಒರಿಸ್ಸಾ ಮಾದರಿಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಹಂತ ಹಂತವಾಗಿ ಕಾಯಂಗೊಳಿಸುವ ಪ್ರಕ್ರಿಯೆ ನಡೆಯಬೇಕು. ನ್ಯಾಯಯುತ ಸಂಬಳ, ಉದ್ಯೋಗ ಭದ್ರತೆ ದೊರೆಯಬೇಕೆಂದು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಬೃಹತ್ ಪ್ರತಿಭಟನೆಯನ್ನೂ ನಡೆಸಲಾಗಿದೆ. ಈ ಬಗ್ಗೆ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ ಎಂದರು.
ಕಲ್ಯಾಣ ನಿಧಿ ಸ್ಥಾಪಿಸಿ: ಕಟ್ಟಡ ಕಾರ್ಮಿಕರಿಗೆ ಈಗಾಗಲೇ ಸರ್ಕಾರ ಕಲ್ಯಾಣ ನಿಧಿ ಸ್ಥಾಪಿಸಿರುವ ಹಾಗೆ ಎಪಿಎಂಸಿಗಳಲ್ಲಿ ದುಡಿಯುವ ಹಮಾಲಿ ಕಾರ್ಮಿಕರ ಹಿತಕಾಯುವ ದೃಷ್ಟಿಯಿಂದ ಹಮಾಲರ ಕಲ್ಯಾಣ ನಿಧಿಯನ್ನು ಸ್ಥಾಪಿಸಲು ಸರ್ಕಾರದ ಮುಂದೆ ಬೇಡಿಕೆ ಇಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಈ ನಿಧಿ ಸ್ಥಾಪನೆಯಾದರೆ 1 ಲಕ್ಷಕ್ಕೂ ಅಧಿಕ ಹಮಾಲರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಸಮಾವೇಶ: ಹಮಾಲಿ ಕಾರ್ಮಿಕರಿಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಹಕ್ಕುಗಳನ್ನು ಪಡೆಯಲು ಹಾಗೂ ಮಹತ್ವದ ವಿಚಾರಗಳನ್ನು ಚರ್ಚಿಸಲು ಮಾ.4, 5ರಂದು ಹುಬ್ಬಳ್ಳಿ ನಗರದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಆರೋಗ್ಯ, ವಿಮಾ ಸೌಲಭ್ಯ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

