ಎಡದಂಡೆ ನೀರಿಗೆ ಆಗ್ರಹಿಸಿ ರೈತರಿಂದ ರಸ್ತೆ ತಡೆ
ಕ.ಪ್ರ. ವಾರ್ತೆ, ರಾಯಚೂರು, ಫೆ.5
ತುಂಗಭದ್ರಾ ಎಡದಂಡೆ ಕಡೆಯ ಭಾಗದ ರೈತರ ನೀರಿಗಾಗಿನ ಬೇಡಿಕೆ ಸರ್ಕಾರ ನಿರ್ಲಕ್ಷಿಸಿದ್ದರಿಂದ ನೂರಾರು ರೈತರು ಬುಧವಾರ ರಾಯಚೂರು ಸಮೀಪದ ಏಳು ಮೈಲ್ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ಹಾಗೂ ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ವಿವಿಧ ಪಕ್ಷಗಳ ಪ್ರಮುಖರೂ ಸೇರಿದಂತೆ ನೂರಾರು ರೈತರು ರಸ್ತೆ ತಡೆ ನಡೆಸಿದ್ದರಿಂದ ಮಾನವಿ-ರಾಯಚೂರು ಮತ್ತು ಲಿಂಗಸ್ಗೂರು-ರಾಯಚೂರು ರಸ್ತೆಯಲ್ಲಿ ಸಂಚಾರಕ್ಕೆ ವ್ಯತ್ಯಯವಾಯಿತು.
ರಸ್ತೆ ತಡೆ ಚಳವಳಿಯಲ್ಲಿ ಪಾಲ್ಗೊಂಡಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್, ನಗರ ಶಾಸಕ ಡಾ. ಶಿವರಾಜ್ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಎಡದಂಡೆ 104ನೇ ಮೈಲ್ ಕೆಳಭಾಗದ ರೈತರ ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ಸೇರಿದಂತೆ ರೈತ ಮುಖಂಡ ರುಗಳು, ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಅಧಿಕಾರಿಗಳು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆಂದು ಹರಿಹಾಯ್ದರು.
ಅಕ್ರಮವಾಗಿ ನೀರು ಬಳಕೆ: ಕಳೆದ 40 ದಿನಕ್ಕೂ ಹೆಚ್ಚಿನ ಅವಧಿಯಿಂದ ಎಡದಂಡೆ 104ನೇ ಮೈಲ್ ಕೆಳಭಾಗದ ಮಾನವಿ ಮತ್ತು ರಾಯಚೂರು ತಾಲೂಕಿನ ಅನೇಕ ಗ್ರಾಮಗಳ ಹೊಲಗಳಿಗೆ ಸಮರ್ಪಕ ನೀರು ದೊರೆತಿಲ್ಲ. ಕಾಲುವೆಯ ಮೇಲ್ಭಾಗದಲ್ಲಿ ರೈತರು ಅಕ್ರಮವಾಗಿ ನೀರು ಬಳಕೆ ಮಾಡಿಕೊಳ್ಳುತ್ತಿದ್ದರೂ ನೀರಾವರಿ ಅಧಿಕಾರಿಗಳು ಅಂಥ ರೈತರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವ ಕಾರ್ಯ ಮಾಡಿಲ್ಲ ಎಂದು ಆರೋಪಿಸಿದರು.
ಕಾಲುವೆಯಲ್ಲಿ ನೀರಾವರಿ ಅಧಿಕಾರಿಗಳು ನೀರಿನ ಮಟ್ಟ ಕಾಯ್ದುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅದರಿಂದಾಗಿ ಕಾಲುವೆಯ ಕಡೆಯ ಭಾಗದ ರೈತರು ಕೋಟ್ಯಂತರ ರು. ಬೆಳೆ ಹಾನಿ ಅನುಭವಿಸುವಂತಾಗಿದೆ. ರೈತರು ಬೆಳೆದ ಹತ್ತಿ, ಮೆಣಸಿನಕಾಯಿ, ಬತ್ತ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿದ್ದು, ರೈತರು ಹಾನಿಯ ಭೀತಿಯಲ್ಲಿದ್ದಾರೆಂದು ದೂರಿದರು.
ಪಟ್ಟುಬಿಡದ ರೈತರು: ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಕಾಲುವೆಯಲ್ಲಿ ಮಾ.31ರವರೆಗೆ 3200 ಕ್ಯುಸೆಕ್ ನೀರು ಹರಿಸಲಾಗುತ್ತದೆ ಎಂದು ಭರವಸೆ ನೀಡಿದ್ದರಿಂದಲೇ ರೈತರು ಬೆಳೆ ಬೆಳೆಯಲು ಮುಂದಾಗಿದ್ದು, ಸದ್ಯ ಕಾಲುವೆಯಲ್ಲಿ 2400 ಕ್ಯುಸೆಕ್ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ಅದರಿಂದಾಗಿ ಕಾಲುವೆಯ ಕಡೆಯ ಭಾಗದಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ ಎಂದು ಟೀಕಿಸಿದರು.
ನೀರಾವರಿ ಇಲಾಖೆಯ ಅಧಿಕಾರಿಗಳು ನೀರೊದಗಿಸುವ ಭರವಸೆ ನೀಡುವವರೆಗೆ ರಸ್ತೆ ತಡೆ ಚಳವಳಿ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದರು. ಈ ವೇಳೆ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಮಲ್ಲಿಕಾರ್ಜುನ ಮುಂಗೆ ರೈತರನ್ನುದ್ದೇಶಿಸಿ ಮಾತನಾಡಿ, ರೈತರಿಗೆ ಮುಂದಿನ ಒಂದೆರಡು ದಿನಗಳಲ್ಲಿ ಸಮರ್ಪಕ ನೀರೊದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಮೊಸಳೆ ಕಣ್ಣೀರು ಸುರಿಸುವುದು ಬೇಡ: ಆದರೆ ಈ ರೈತರು ಅಧಿಕಾರಿಯ ಮಾತು ಸುತಾರಾಂ ಒಪ್ಪಲಿಲ್ಲ. ಬದಲಿಗೆ ಮಲ್ಲಿಕಾರ್ಜುನ ಮುಂಗೆ ಜತೆ ವಾಗ್ವಾದಕ್ಕಿಳಿದರು. ಕಳೆದ 40 ದಿನಗಳಿಂದ ರೈತರಿಗೆ ನೀರು ಕೊಟ್ಟಿಲ್ಲ. ಈಗ ಮೊಸಳೆ ಕಣ್ಣೀರು ಸುರಿಸುವುದು ಬೇಡ. ಮೊದಲು ರೈತರ ಹೊಲಗಳಿಗೆ ಸಮರ್ಪಕ ನೀರು ಹರಿಸಿ ನಂತರ ನೀರಾವರಿ ಅಧಿಕಾರಿಗಳ ಮೇಲೆ ರೈತರಿಗೆ ನಂಬಿಕೆ ಮೂಡಲಿದೆ ಎಂದು ತಾಕೀತು ಮಾಡಿದರು.
ಈ ವೇಳೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಎಸ್ಪಿ ಎಂ.ಎನ್. ನಾಗರಾಜ್, ನೀರಾವರಿ ಮುಖ್ಯ ಎಂಜಿನಿಯರ್ ಮಲ್ಲಿಕಾರ್ಜುನ ಮುಂಗೆ ಪರಸ್ಪರ ಚರ್ಚಿಸಿ ಮತ್ತೆ ಪ್ರತಿಭಟನಾ ನಿರತ ರೈತರ ಬಳಿ ತೆರಳಿ ಬುಧವಾರದಿಂದಲೇ ಎಡದಂಡೆಯಲ್ಲಿ 3500 ಕ್ಯುಸೆಕ್ ನೀರು ಹರಿಸುವ ಮೂಲಕ ಕಾಲುವೆಯಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳಲು ಕ್ರಮ ಜರುಗಿಸಲಾಗುತ್ತದೆ. 104ನೇ ಮೈಲ್ನಲ್ಲಿ ಕನಿಷ್ಠ 4.5 ಅಡಿ ನೀರು ಗೇಜ್ ನೀಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಆಡಳಿತದ ಭರವಸೆ ನಂತರ ರೈತರು ಹೋರಾಟ ಹಿಂಪಡೆದು ಇನ್ನೆರಡು ದಿನದಲ್ಲಿ ನೀರು ಸಮರ್ಪಕ ಹರಿಯದಿದ್ದರೆ ಫೆ.10ರಿಂದ ಮತ್ತೆ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದರು.
ಸಿದ್ದನಗೌಡ ನೆಲಹಾಳ, ಲಕ್ಷ್ಮಣಗೌಡ ಕಡಗಂದೊಡ್ಡಿ, ತ್ರಿವಿಕ್ರಮ್ ಜೋಷಿ, ಬಸವರಾಜ ಕಳಸ, ನರಸಪ್ಪ ಯಕ್ಲಾಸಪುರ, ಮಹಾಂತೇಶ್ ಪಾಟೀಲ್ ಅತ್ತನೂರು, ನಾರಾಯಣ ರಾವ್ ಪೂರತಿಪ್ಲಿ, ಬಂಡೇಶ್ ವಲ್ಕಂದಿನ್ನಿ, ಶಶಿಕಲಾ ಭೀಮರಾಯ, ರಮಾನಂದ ಯಾದವ್, ಅಶ್ವತ್ಥ್ ರಾಜಪುರೋಹಿತ್ ಸೇರಿ ನೂರಾರು ರೈತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

