ಹೆಣ್ಣು ಭ್ರೂಣ ಹತ್ಯೆಯಿಂದ ಮನುಕುಲ ನಾಶ
ರಾಯಚೂರು: ದೇಶದಲ್ಲಿ ನಡೆಯುವ ಹೆಣ್ಣು ಭ್ರೂಣಹತ್ಯೆಯಿಂದ ಭವಿಷ್ಯದಲ್ಲಿ ಮನುಕುಲದ ನಾಶಕ್ಕೆ ಕಾರಣವಾಗಲಿದೆ. ಸಮತೋಲನವನ್ನು ಕಾಪಾಡಿಕೊಂಡು ಜೀವನ ನಡೆಸುವ ಜಗತ್ತಿನ ನಿಯಮಕ್ಕೆ ವಿರುದ್ಧವಾಗಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಪಿ.ಜಿ.ಎಂ.ಪಾಟೀಲ್ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಗರದಲ್ಲಿ ಆಯೋಜಿಸಿದ್ದ ಪ್ರಸವ ಪೂರ್ವ ಲಿಂಗ ಪತ್ತೆ ಕುರಿತ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸವ ಪೂರ್ವದಲ್ಲಿಯೇ ಲಿಂಗ ಪತ್ತೆ ಕಾರ್ಯ ನಿಷೇಧಿಸಲಾಗಿದೆ. ವೈದ್ಯರು ಸಾರ್ವಜನಿಕರು ಕಾನೂನು ಗೌರವಿಸಬೇಕು. ಯಾವುದೇ ಸಂದರ್ಭದಲ್ಲಿ ಲಿಂಗ ಪತ್ತೆಯಂಥ ವರದಿಗಳನ್ನು ಪಾಲಕರಿಗೆ ನೀಡುವಂತಿಲ್ಲ. ಈ ಕುರಿತು ಅರಿವು ಮೂಡಿಸಬೇಕಿದೆ ಎಂದರು.
ಅಸಮಾನತೆ ಹೆಚ್ಚಳ- ಕಳವಳ: 2001ರ ವರದಿ ಹಾಗೂ 2011ರ ಗಣತಿ ವರದಿಗಳ ಪ್ರಕಾರ-ಗಂಡು ಹೆಣ್ಣಿನ ಸಂಖ್ಯೆಯಲ್ಲಿ ಸಮಾನ ಅನುಪಾತ ಕಾಯ್ದುಕೊಳ್ಳುವಲ್ಲಿ ವಿಫಲರಾಗಿರುವುದು ಸ್ಪಷ್ಟವಾಗಿದೆ. ಒಂದು ಸಾವಿರ ಗಂಡಿಗೆ 940 ಹೆಣ್ಣುಮಕ್ಕಳ ಅನುಪಾತವಿದ್ದಲ್ಲಿ ಇದರಿಂದ ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳ ಮದುವೆ, ವರದಕ್ಷಿಣೆ, ಗಂಡು ಸಂತಾನದಿಂದ ಮೋಕ್ಷ ಇಂತಹ ಮೂಢ ನಂಬಿಕೆಗಳಿಂದಾಗಿ ಪ್ರಸವ ಪೂರ್ವ ಹೆಣ್ಣು ಭ್ರೂಣಹತ್ಯೆಗಳು ನಡೆಯುವ ಸಾಧ್ಯತೆಯಿದೆ. ಕಾನೂನಿನ ಕಟ್ಟುನಿಟ್ಟಿನ ಜಾರಿಗೆ ಎಲ್ಲರೂ ಮುಂದಾಗಬೇಕು. ತಪ್ಪಿತಸ್ಥ ವೈದ್ಯರು ಹಾಗೂ ಪಾಲಕರಿಗೆ ಶಿಕ್ಷೆಯಾಗುವಂತಹ ವಾತಾವರಣ ನಿರ್ಮಾಣ ಮಾಡಲು ಸಜ್ಜಾಗುವಂತೆ ಕರೆ ನೀಡಿದರು.
ಮಹಿಳೆಯರೇ ಕಾರಣ: ನ್ಯಾ. ಚೆಲುವಮೂರ್ತಿ ಮಾತನಾಡಿ, ದೂರದರ್ಶನ ಸಮಾಚಾರ ಪತ್ರಿಕೆಗಳಲ್ಲಿ ವರದಿಯಾದಂತೆ ಹೆಚ್ಚಿನ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗುತ್ತಿಲ್ಲ. ಹೆಣ್ಣು ಭ್ರೂಣಹತ್ಯೆಗೆ ಹೆಚ್ಚಿನ ಪ್ರಕರಣಗಳಲ್ಲಿ ಮಹಿಳೆಯರೇ ಕಾರಣರಾಗುತ್ತಾರೆಂದು ಆತಂಕ ವ್ಯಕ್ತಪಡಿಸಿದರು. ಡಾ. ಶಿವಪ್ಪ ಮಾಲಿಪಾಟೀಲ ಅವರು ಉಪನ್ಯಾಸ ನೀಡಿದರು. ಡಾ. ಸಿ. ಎನ್. ಕುಲ್ಕರ್ಣಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ. ಕೆ. ವಿಜಯಾ ಮಾತನಾಡಿದರು. ಪವಾಡೆಪ್ಪ, ಎನ್. ಭಾನುರಾಜ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

