ರಸ್ತೆ ಧೂಳು ಮುಕ್ತಗೊಳಿಸಲು ಒತ್ತಾಯಿಸಿ ಮೆರವಣಿಗೆ
ಸಿಂಧನೂರು: ನಗರದ ಹಳೆ ಬಜಾರ್ ರಸ್ತೆ ದುರಸ್ತಿಗೊಳಿಸಿ ಧೂಳಿನಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ವೆಲ್ಪೇರ್ ವಾಟರ್ ಆಫ್ ಇಂಡಿಯಾದಿಂದ ಮೆರವಣಿಗೆ ನಡೆಸುವ ಮೂಲಕ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಹಳೆ ಬಜಾರ್ ರಸ್ತೆ ಕಳೆದ 10 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದೇ ತೀರಾ ಹದಗೆಟ್ಟಿದ್ದು, ದುರಸ್ತಿಕಾರ್ಯನಡೆಯದೇ ಇರುವುದರಿಂದ ಸಾರ್ವಜನಿಕರು ಧೂಳಿನಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೈರ್ಮಲ್ಯ ಸಂಪೂರ್ಣ ಹಾಳಾಗಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ಭಾವನೆ ತಾಳಿದ್ದಾರೆಂದು ತಹಸೀಲ್ದಾರ್ ಗಮನ ಸೆಳೆದರು. 13ನೇ ಹಣಕಾಸು ಯೋಜನೆಯಲ್ಲಿ 43.50 ಲಕ್ಷ ಟೆಂಡರ್ ಪ್ರಕ್ರಿಯೆ 2013 ಡಿ.3ರಂದು ಮುಗಿದರೂ ಇವತ್ತಿನವರೆಗೂ ಕಾಮಗಾರಿ ಆರಂಭವಾಗಿಲ್ಲ. ನಗರಸಭೆ ಆಡಳಿತ ಮಂಡಳಿ ಒಂದಿಲ್ಲೊಂದು ನೆಪ ಹೇಳುತ್ತಾ ಕಾಲಹರಣ ಮಾಡುತ್ತಿದ್ದು, ಜನರ ಆರೋಗ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವೆಲ್ಫೇರ್ ವಾಟರ್ಯ ತಾಲೂಕು ಘಟಕದ ಅಧ್ಯಕ್ಷ ಸೈಯದ ರಸೂಲ ಮುಲ್ಲಾ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಯಾಕೂಬ್ ಅಲಿ, Ú ಮಹೆಬೂಬ್ ಖಾನ್, ಎಂ.ಡಿ. ಶಫರ್ ಉದ್ದೀನ್, ಮಸೂದ್ ಇತರರಿದ್ದರು.
ಸಮ್ಮೇಳನ ಪೂರ್ವ ತಯಾರಿ ವಿಫಲ
ರಾಯಚೂರು: ಮಸ್ಕಿಯಲ್ಲಿ ಫೆ.11ರಿಂದ ಎರಡು ದಿನ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಯಲ್ಲಿ ಜಿಲ್ಲಾ ಕಸಾಪ ಎಡವಿದೆ ಎಂದು ರಾಜ್ಯ ಕಸಾಪದ ದತ್ತಿ ಸಲಹಾ ಸಮಿತಿ ಸದಸ್ಯ ರಾಮಚಂದ್ರಪ್ಪ ಮಾನವಿ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಾಂತೇಶ್ ಮಸ್ಕಿ ಅವರು ಸಮ್ಮೇಳನದ ಪೂರ್ವ ತಯಾರಿಯಲ್ಲಿ ವಿಫಲರಾಗಿದ್ದಾರೆ. ಸಾಹಿತ್ಯ ಸಂಘಟನೆಯ ಅನುಭವದ ಕೊರತೆ ಹಾಗೂ ಸಲಹೆ ಸೂಚನೆ ಪಡೆಯುವ ಸೌಜನ್ಯವನ್ನೂ ಅವರು ತೋರದೇ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದ್ದಾರೆಂದು ಆರೋಪಿಸಿದ್ದಾರೆ.
ದಾಸ ಸಾಹಿತ್ಯಕ್ಕೆ ಅಪಮಾನ: ಜಿಲ್ಲೆಯು ದಾಸ ಸಾಹಿತ್ಯದ ತೊಟ್ಟಿಲು ಎಂದೇ ಹೆಸರು ಗಳಿಸಿದೆ. ಆದರೆ ಸಾಹಿತ್ಯ ಸಮ್ಮೇಳನದಲ್ಲಿ ದಾಸ ಸಾಹಿತ್ಯಕ್ಕೆ ಅವಕಾಶ ಒದಗಿಸಿಲ್ಲ. ಸಮ್ಮೇಳನದ ದ್ವಾರಗಳಿಗೆ ದಾಸ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದವರ ಹೆಸರಿಸಿಲ್ಲ. ಆ ಮೂಲಕ ಮಸ್ಕಿ ಅವರು ದಾಸ ಸಾಹಿತ್ಯ ಮತ್ತು ದಾಸರಿಗೆ ಅಪಮಾನ ಮಾಡಿದ್ದಾರೆಂದು ದೂರಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಮಾಧ್ಯಮಗಳ ಕೊಡುಗೆಯೂ ಸಾಕಷ್ಟಿದೆ. ಸಮ್ಮೇಳನದ ಸನ್ಮಾನ ಸಮಾರಂಭದಲ್ಲಿ ಜಿಲ್ಲೆಯಲ್ಲಿರುವ ಮಾಧ್ಯಮ ಕ್ಷೇತ್ರದ ಸಾಧಕರನ್ನು ಗೌರವಿಸುವುದನ್ನು ನಿರ್ಲಕ್ಷ್ಯಿಸಲಾಗಿದೆ. ದಲಿತ ಮತ್ತು ಬಂಡಾಯ ಸಾಹಿತ್ಯವನ್ನೂ ಕಡೆಗಣಿಸಿದ್ದಾರೆಂದು ಆರೋಪಿಸಿದ್ದಾರೆ.
ಜಿಲ್ಲೆಯ ಇತಿಹಾಸ ಕಡೆಗಣನೆ: ಮಸ್ಕಿಯ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಗೋಷ್ಠಿ ಆಯೋಜಿಸಿದ್ದು ಸ್ವಾಗತಾರ್ಹ. ಜಿಲ್ಲೆಯ ಇತಿಹಾಸವನ್ನು ಕಡೆಗಣಿಸಿದ್ದು ಸರಿಯಲ್ಲ. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಆಜೀವ ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿರುವ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕಾರ್ಯ ಜಿಲ್ಲಾಧ್ಯಕ್ಷ ಮಹಾಂತೇಶ್ ಮಸ್ಕಿ ಮಾಡುವುದು ಅವಶ್ಯಕ ಎಂದಿದ್ದಾರೆ.
ಅಕ್ರಮ ಮರಳು ಸಾಗಾಟ: 6 ಟ್ರ್ಯಾಕ್ಟರ್ ಜಪ್ತಿ
ಮುದಗಲ್: ಪಟ್ಟಣ ಸಮೀಪದ ಬಗ್ಗಲಗುಡ್ಡ ಗ್ರಾಮದ ಹೊರವಲಯದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 6 ಟ್ರ್ಯಾಕ್ಟರ್ಗಳನ್ನು ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್ ಹಾಗೂ ಪಿಡಿಒ ನಾಗೇಶ ಜಪ್ತಿ ಮಾಡಿದ ಘಟನೆ ಗುರುವಾರ ಬೆಳಗಿನ ಜಾವ ಜರುಗಿದೆ.
ಕಂದಾಯ ಇಲಾಖೆ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ ಹಾಗೂ ಪಿಡಿಒ ನಾಗೇಶ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ 6 ಟ್ರ್ಯಾಕ್ಟರ್ಗಳನ್ನು ವಶಕ್ಕೆ ಪಡೆದು ಸಹಾಯಕ ಆಯುಕ್ತರ ಆದೇಶದ ಮೇರೆಗೆ ಪೊಲೀಸ್ ಸುಪರ್ದಿಗೆ ನೀಡಲಾಗಿದೆ ಎಂದು ಪಿಡಿಒ ನಾಗೇಶ ಪತ್ರಿಕೆಗೆ ತಿಳಿಸಿದರು.
300 ಲೀ. ಸೇಂದಿ ಜಪ್ತಿ
ರಾಯಚೂರು: ನಗರದ ಮೈಲಾರ ನಗರ ಪ್ರದೇಶದಲ್ಲಿ ಅಬಕಾರಿ ಇಲಾಖೆಯು ನಡೆಸಿದ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಸೇಂದಿ ಜಪ್ತಿ ಮಾಡಲಾಗಿದೆ. ಅಬಕಾರಿ ಉಪಆಯುಕ್ತ ಎಸ್.ನಾಗರಾಜಪ್ಪ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಶ್ರೀರಾಮ ರಾಠೋಡ ಮತ್ತು ಶರಣಪ್ಪ ಕರಡಿ ಅವರಿದ್ದ ತಂಡವು ಮೈಲಾರನಗರದ ಮನೆಯೊಂದರ ಮೇಲೆ ದಾಳಿ ಮಾಡಿ 300 ಲೀಟರ್ ಸೇಂದಿ ಮತ್ತು 2 ಕೆ.ಜಿ. ಸಿಎಚ್ ಪೌಡರ್ ಹಾಗೂ 500 ಗ್ರಾಪಂ ಯೀಸ್ಟ್ ಜಪ್ತಿ ಮಾಡಿದ್ದು ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆಯಲ್ಲಿ ಕಳವು
ಲಿಂಗಸ್ಗೂರು: ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿಯ ಆಜಾದ್ ನಗರದಲ್ಲಿರುವ ಮನೆಯೊಂದರಲ್ಲಿ ಕಳವು ಸಂಭವಿಸಿದೆ. ಕಾಲನಿ ನಿವಾಸಿ ಪ್ರಭುಗೌಡರ ಎಂಬುವವರಿಗೆ ಸೇರಿದ ಮನೆಯ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿರುವ ಕಳ್ಳರು 3 ಚಿನ್ನದ ಉಂಗುರ, ಬೆಳ್ಳಿ ಸಾಮಗ್ರಿ ಸೇರಿ ಸಾವಿರಾರು ನಗದು ದೋಚಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಲಿಂಗಸ್ಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಶವ ಪತ್ತೆ
ರಾಯಚೂರು: ತಾಲೂಕಿನ ಹೊಸೂರು ಗ್ರಾಮದ ಬಳಿ ಹೊಲದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯು ಸುಮಾರು 30- 35 ವರ್ಷ ವಯಸ್ಸಿನವನಾಗಿದ್ದು, ಬಸವನಗೌಡ ಎಂಬುವವರ ಹೊಲದ ಬದುವಿನಲ್ಲಿನ ಗಿಡ ಕಂಟೆಗಳ ಮಧ್ಯೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಶಂಕೆ
ರಾಯಚೂರು: ಶಕ್ತಿನಗರದ ಕೃಷ್ಣಾ ನದಿ ಮೇಲಿನ ಸೇತುವೆಯ ಕೆಳಗೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನು ಸುಮಾರು 30ರಿಂಮದ 35 ವರ್ಷ ವಯಸ್ಸಿನವನಾಗಿದ್ದು, ಈತ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಳಿನಡಿ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ಸಂತೆಕೆಲ್ಲೂರು ಬಳಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಅದರಡಿ ಸಿಲುಕಿ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಮೃತನನ್ನು ವಿರೂಪಾಕ್ಷಿ ಎಂದು ಗುರುತಿಸಲಾಗಿತೆ. ಈ ಕುರಿತು ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

