ಪಶ್ಚಿಮಘಟ್ಟ ಸಂರಕ್ಷಣೆ ವರದಿಗಳ ತಪ್ಪು ಗ್ರಹಿಕೆ
ರಾಯಚೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿ ಸಮಿತಿಗಳು ನೀಡಿದ ವರದಿಯಲ್ಲಿನ ಅಂಶಗಳ ಬಗ್ಗೆ ತಪ್ಪು ಗ್ರಹಿಕೆಯಿಂದಾಗಿ ಘಟ್ಟ ಪ್ರದೇಶದಲ್ಲಿ ಹೋರಾಟಗಳು ನಡೆಯುತ್ತಿದ್ದು, ಪಶ್ಚಿಮ ಘಟ್ಟ ಪ್ರದೇಶದ ಸಂರಕ್ಷಣೆ ಸಾಧ್ಯವಾಗದಿದ್ದರೆ ಅಪಾರ ಜೀವವೈವಿಧ್ಯಕ್ಕೆ ಹಾನಿಯಾಗಲಿದೆ ಎಂದು ಧರಣಿ ಮಂಡಲ ಪರಿಸರ ಪತ್ರಿಕೆಯ ಸಂಪಾದಕ ಸಿ.ಯತಿರಾಜು ಕಳವಳ ವ್ಯಕ್ತಪಡಿಸಿದರು.
ನಗರದ ರಂಗಮಂದಿರದಲ್ಲಿ ಶನಿವಾರ ಜನಸಂಗ್ರಾಮ ಪರಿಷತ್ನ ರಾಜ್ಯ ಸಮ್ಮೇಳನದಲ್ಲಿ ಪಶ್ಚಿಮ ಘಟ್ಟ ಸಂರಕ್ಷಣೆ- ದಖ್ಖನ್ ಪ್ರಸ್ಥಭೂಮಿಯ ಅಳಿವು- ಉಳಿವು ಎಂಬ ವಿಷಯದ ಕುರಿತು ವಿಷಯ ಮಂಡಿಸಿ, ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿ ಸರ್ಕಾರಗಳು ಮಾಧವ ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ಸಮಿತಿಗಳನ್ನು ರಚಿಸಿ ವರದಿ ಪಡೆದಿದೆ. ಆದರೆ ವರದಿಗಳಲ್ಲಿನ ಅಂಶಗಳ ಬಗ್ಗೆ ಸಮರ್ಪಕ ಚರ್ಚೆಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.
ಅಭಿವೃದ್ಧಿ ಹೆಸರಲ್ಲ ಅರಣ್ಯ ನಾಶ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಎರಡೂ ವರದಿಗಳ ಬಗ್ಗೆ ಕಲಾಪದಲ್ಲಿ ಚರ್ಚಿಸಬೇಕಿದೆ. ದಖ್ಖನ್ ಪ್ರಸ್ಥಭೂಮಿಯಲ್ಲಿನ ಎಲ್ಲ ಜೀವರಾಶಿಗಳ ಅಳಿವು ಉಳಿವಿನ ವಿಚಾರಕ್ಕೆ ಸರ್ಕಾರಗಳು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಬದಲಿಗೆ ಅಭಿವೃದ್ಧಿಯ ಹೆಸರಿನಲ್ಲಿ ಅಪಾರ ಪ್ರಮಾಣದ ಅರಣ್ಯ ನಾಶದಂಥ ಕೃತ್ಯಕ್ಕೆ ಕೈಹಾಕಿವೆ ಎಂದು ದೂರಿದರು.
ಘಟ್ಟ ಪ್ರದೇಶದ ಒತ್ತುವರಿಗೆ ಕಡಿವಾಣ ಹಾಕುವಲ್ಲಿ ಸರ್ಕಾರಗಳು ಉದ್ದೇಶಪೂರ್ವಕವಾಗಿ ಅಸಡ್ಡೆ ತೋರಿವೆ. ಹಾಗೆಯೇ ಮರಳಿಗೆ ವಿಪರೀತ ಬೇಡಿಕೆ ಹೆಚ್ಚಿರುವುದರಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿನ ನದಿಗಳಿಂದ ಅಕ್ರಮವಾಗಿ ಮರಳು ಸಂಗ್ರಹಿಸುವುದು ಮತ್ತು ಸಾಗಣೆ ಮಾಡುವಂಥ ಚಟುವಟಿಕೆಗಳು ಹೆಚ್ಚಿವೆ. ಅದರಿಂದ ನದಿಯ ಮೂಲಕ್ಕೆ ಪೆಟ್ಟು ಬಿದ್ದಿದೆ ಎಂದರು.
ಪಶ್ಚಿಮಘಟ್ಟದಲ್ಲೇ ರಾಜ್ಯದ ವಾತಾವರಣ ನಿರ್ಧಾರ: ರಾಜ್ಯದ ಹವಾಮಾನವು ಪಶ್ಚಿಮ ಘಟ್ಟ ಪ್ರದೇಶದಲ್ಲಿಯೇ ನಿರ್ಧಾರವಾಗುತ್ತದೆಂಬ ಸತ್ಯವನ್ನು ಅರಿಯುವ ಪ್ರಯತ್ನ ಯಾರೂ ಮಾಡುತ್ತಿಲ್ಲ. ಘಟ್ಟ ಪ್ರದೇಶದಲ್ಲಿನ ಭೂಹೊದಿಕೆಯಿಂದಲೇ ರಾಜ್ಯದ ಒಟ್ಟು ಭವಿಷ್ಯದ ವಾತಾವರಣ ನಿರ್ಭರವಾಗಿದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯವಾಸಿಗಳಷ್ಟೇ ಅಲ್ಲ, ಘಟ್ಟ ಪ್ರದೇಶದಲ್ಲಿ ಹುಟ್ಟುವ ಎಲ್ಲ ನದಿಗಳ ಮೂಲಕ್ಕೆ ಧಕ್ಕೆಯುಂಟು ಮಾಡುವ ಕಾರ್ಯ ಸರ್ಕಾರಗಳು ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಚರ್ಚೆಗೆ ವೇದಿಕೆ ಕಲ್ಪಿಸಿ: ಪಶ್ಚಿಮ ಘಟ್ಟ ಪ್ರದೇಶದ ಸಂರಕ್ಷಣೆ ವಿಚಾರದಲ್ಲಿ ಅರಣ್ಯವಾಸಿಗಳಲ್ಲಿ ಅನಗತ್ಯ ಗೊಂದಲ ಎಬ್ಬಿಸಲಾಗುತ್ತಿದೆ. ಅದರಿಂದಾಗಿ ಘಟ್ಟ ಪ್ರದೇಶದಲ್ಲಿ ಸಾಮಾಜಿಕ ಪರಿಸ್ಥಿತಿ ವಿಷಮಿಸಿದೆ. ಜನರ ಸಾಮಾಜಿಕ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದ ಅವರು, ಕಸ್ತೂರಿ ರಂಗನ್ ಮತ್ತು ಮಾಧವ ಗಾಡ್ಗೀಳ್ ಅವರು ಘಟ್ಟ ಪ್ರದೇಶಕ್ಕೆ ಸಂಬಂಧಿಸಿ ಸಲ್ಲಿಸಿದ ವರದಿಯ ಬಗ್ಗೆ ಚರ್ಚೆಗೆ ವೇದಿಕೆ ಕಲ್ಪಿಸುವಂತೆ ಒತ್ತಾಯಿಸಿದರು. ಈ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಕೊಡಗು ಸಾಹಿತ್ಯ ಸಮ್ಮೇಳನದಲ್ಲಿ ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿ ಸಮ್ಮೇಳನಾಧ್ಯಕ್ಷ ನಾ.ಡಿಸೋಜಾ ಅಭಿಪ್ರಾಯ ಮಂಡಿಸುತ್ತಿದ್ದಂತೆಯೇ ರಿಯಲ್ ಎಸ್ಟೇಟ್ ಮತ್ತಿತರೆ ದಂಧೆಯಲ್ಲಿರುವವರು ಅದಕ್ಕೆ ವಿರೋಧಿಸಿದ್ದು ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ದೂರಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಆರ್. ಹಿರೇಮಠ, ಪ್ರೊ. ಆರ್.ಕೆ. ಹುಡುಗಿ, ಡಾ. ರಜಾಕ್ ಉಸ್ತಾದ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

