ಸಂಕುಚಿತತೆ ಬಿಡಿ, ಸಾಹಿತ್ಯ ಕಾರ್ಯಕ್ಕೆ ಬನ್ನಿ
ರಾಯಚೂರು: ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡಿಗರೆಲ್ಲರೂ ಪಾಲುದಾರರಾಗಬೇಕು. ಕನ್ನಡದ ಕಾರ್ಯಕ್ರಮಗಳಲ್ಲಿ ಸಾಹಿತಿಗಳೂ ಸಂಕುಚಿತ ಮನೋಭಾವ ತೊರೆದು ಹೆಚ್ಚೆಚ್ಚು ತೊಡಗಬೇಕು. ಮಕ್ಕಳಿಗೆ ಅವರ ಮನೆಗಳಲ್ಲೇ ಹವ್ಯಾಸ, ಮೌಲ್ಯಗಳನ್ನು ತುಂಬಿ ಸಾಹಿತ್ಯಾಸಕ್ತಿ ಮೂಡಿಸುವ ಕಾರ್ಯ ಆಗಲಿ...
ಮಸ್ಕಿಯಲ್ಲಿ ಫೆ.11 ರಿಂದ ಎರಡು ದಿನ ನಡೆಯುವ ರಾಯಚೂರು ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ಡಾ. ಸ್ವಾಮಿರಾವ್ ಕುಲಕರ್ಣಿ ಅವರ ಮನದಾಳದ ಮಾತುಗಳಿವು.
ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಭಾನುವಾರ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು ಹೇಳಿದ್ದಿಷ್ಟು-
ಸ್ವಂತ ಜಿಲ್ಲೆಯಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಖುಷಿ ತಂದಿದೆ. ಮಸ್ಕಿ ಪಟ್ಟಣ ಹಿಂದೆ ತಮ್ಮಲ್ಲಿ ಸಂಸ್ಕೃತಿ ತುಂಬಿ, ಕನ್ನಡ ಭಾಷೆ, ಸಾಹಿತ್ಯದ ಕಲಿಕಾ ಕೇಂದ್ರವಾಗಿ ಬದುಕು ರೂಪಿಸಿದ ಸ್ಥಳ. ಸಹಜವಾಗಿಯೇ ಮಸ್ಕಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ ಒಲಿದಿದ್ದಕ್ಕೆ ಅತೀವ ಸಂತಸವಾಗಿದೆ.
ಮೌಲ್ಯ: ಪಾಲಕರು ಮಕ್ಕಳಲ್ಲಿ ಬಾಲ್ಯದಲ್ಲಿಯೇ ಮೌಲ್ಯಗಳನ್ನು ತುಂಬುವ ಕಾರ್ಯ ಮಾಡಬೇಕು. ಒಳ್ಳೆಯ ಹವ್ಯಾಸಗಳನ್ನ ಮೂಡಿಸುವ ಬಹುದೊಡ್ಡ ಹೊಣೆ ಪಾಲಕರದ್ದಾಗಿದೆ. ಶಾಲಾ ಕಾಲೇಜುಗಳೂ ಬೇಕು. ಆದರೆ ಮನೆಯಿಂದಲೇ ಮಕ್ಕಳ ಒಳ್ಳೆಯದನ್ನು ಕಲಿಯುವುದು ರೂಢಿಯಾಗಬೇಕು. ಆಗ ಮಾತ್ರ ಸುಸಂಸ್ಕೃತ ಹಾಗೂ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ.
ಮಸ್ಕಿಯಲ್ಲಿದ್ದಾಗ ದುಡಿಮೆ ಎಂಬ ಪತ್ರಿಕೆಗೆ 8ನೇ ತರಗತಿಯಲ್ಲಿದ್ದಾಗ ಕಳಿಸಿದ ಎರಡು ಚೌಪದಿಗಳು ಪ್ರಕಟಗೊಂಡಿದ್ದು ಸಾಹಿತ್ಯ ಜೀವನಕ್ಕೆ ನಾಂದಿಯಾಯಿತು. ಸಾಹಿತ್ಯದೆಡೆಗೆ ಆಸಕ್ತಿ ಕುದುರಲೂ ಅದೂ ದಾರಿಯಾಗಿ ಮುಂದೆ ಅನೇಕ ಕೃತಿಗಳ ರಚನೆಗೂ ಸ್ಫೂರ್ತಿಯಾಗಿದ್ದು ಮರೆಯಲಾಗದು.
ತೆಲುಗು ಪ್ರಭಾವ: ರಾಯಚೂರು ಜಿಲ್ಲೆ ಆಂಧ್ರದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಸಹಜವಾಗಿಯೇ ತೆಲುಗು ಭಾಷೆ, ಭಾಷಿಕರ ಪ್ರಭಾವವಿದೆ. ಇಂಥ ಪರಿಸ್ಥಿತಿಯಲ್ಲಿ ಕನ್ನಡ, ಕನ್ನಡಿಗರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು, ಕನ್ನಡದ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜಿಬೇಕಿದೆ.
ಶಾಲೆಗಳು ಭಾಷೆಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಅಂತೆಯೇ ಗಡಿಯಲ್ಲಿ ಕನ್ನಡ ಭಾಷೆ ಉಳಿವಿಗೆ ಇಲ್ಲಿನ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲತ್ತು ಒದಗಿಸಬೇಕು. ಶಾಲೆ ಮುಚ್ಚಲು ಮುಂದಾಗಿರುವ ಸರ್ಕಾರದ ಕ್ರಮ ಕನ್ನಡ ಭಾಷೆಗೆ ಪೆಟ್ಟು ನೀಡುತ್ತಿದೆ ಎಂಬ ಪ್ರಜ್ಞೆ ಸರ್ಕಾರಕ್ಕೆ ಬರಬೇಕಿದೆ. ಗಡಿ ಜಿಲ್ಲೆಯಲ್ಲಿರುವ ಕನ್ನಡಿಗರು ಹೊರರಾಜ್ಯದವರಿಗೆ ತಮ್ಮ ಕೃಷಿ ಜಮೀನು ಮಾರಾಟ ಮಾಡಿ ಸುಖ, ಸಮೃದ್ಧಿಯ ಸಂತೋಷ ಅನುಭವಿಸಲೂ ಸಾಧ್ಯವಾಗದಂಥ ಸ್ಥಿತಿಗೆ ತಲುಪಿರುವ ಬಗ್ಗೆ ತಮಗೆ ನೋವು ನಿರಂತರ ಕಾಡುತ್ತಿದೆ.
ಗಡಿ ಕಾವಲು: ರಾಜ್ಯ ಸರ್ಕಾರ ಗಡಿ ಕಾಯುವ ಕಾವಲುಗಾರನಂತೆ ಕಾರ್ಯ ನಿರ್ವಹಿಸಬೇಕು. ಗಡಿಯಲ್ಲಿ ಕನ್ನಡದ ಬೆಳವಣಿಗೆಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕು. ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ಪ್ರತಿ ವರ್ಷ ಆಯೋಜಿಸಬೇಕು. ಸರ್ಕಾರ ಅಗತ್ಯ ಅನುದಾನ ಒದಗಿಸಬೇಕು.
ಸಂಕುಚಿತತೆ ಸಲ್ಲದು: ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತಿಗಳಿಗೆ ಸೀಮಿತ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಸಾಹಿತಿಗಳಲ್ಲಿಯೂ ಅನೇ ಕರು ಗೋಷ್ಠಿಗಳಲ್ಲಿ ಪಾಲ್ಗೊಳ್ಳದಿರುವುದನ್ನು ಕಾಣುತ್ತೇವೆ. ಸಾಹಿತಿಗಳಲ್ಲಿ ಸಂಕುಚಿತ ಮನೋಭಾವ ಬೇಡ. ಎಲ್ಲರ ಸಾಹಿತ್ಯವನ್ನೂ ಕೇಳಿಸಿಕೊಳ್ಳುವ ಮನೋಭಾವ ರೂಢಿಸಿಕೊಳ್ಳುವುದು ಅವಶ್ಯಕ.
ನಿರ್ಣಯಗಳು: ಸಾಹಿತ್ಯ ಸಮ್ಮೇಳನ ಎಂದಾಕ್ಷಣ ಅಲ್ಲಿ ಕೈಗೊಳ್ಳುವ ನಿರ್ಣಯಗಳತ್ತಲೇ ಎಲ್ಲರ ದೃಷ್ಟಿ ನೆಡುವುದು ಸಹಜ. ಈಡೇರಿಸಲಾಗದ ನಿರ್ಣಯ ಕೈಗೊಳ್ಳುವ ಬದಲು ನಿರ್ಣಯ ಅಂಗೀಕರಿಸದಿರುವುದೇ ಲೇಸು. ಸಾಧ್ಯವಾದಷ್ಟು ಆಯಾ ಜಿಲ್ಲೆ, ಭಾಗ, ಪ್ರದೇಶದ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಈಡೇರಿಕೆಗೆ ನಿರ್ಣಯ ಅಂಗೀಕರಿಸಿ ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವಂಥ ಕಾರ್ಯ ಸಾಹಿತ್ಯ ವಲಯ ಮಾಡುವುದು ಆಗಬೇಕಿದೆ.
ನಾಳೆಯಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ
ಮಸ್ಕಿ: ಮಸ್ಕಿಯ ಪೊಲೀಸ್ ಠಾಣೆ ಪಕ್ಕದ ವಿಶಾಲ ಮೈದಾನದಲ್ಲಿ ಫೆ.11 ಮತ್ತು 12ರಂದು ರಾಯಚೂರು ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ಸೀಮಿತವಾಗಿದ್ದ ಸಾಹಿತ್ಯ ಸಮ್ಮೇಳನ ಮೊದಲ ಬಾರಿಗೆ ತಾಲೂಕು ಕೇಂದ್ರದಿಂದಾಚೆಗೆ ಹೋಬಳಿ ಕೇಂದ್ರದಲ್ಲಿ ನಡೆಯುತ್ತಿರುವುದು ವಿಶೇಷ. ಸಮ್ಮೇಳನವನ್ನು ಫೆ.11ರಂದು 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ. ಡಿಸೋಜಾ ಉದ್ಘಾಟಿಸಲಿದ್ದಾರೆ.
ಅದೇ ದಿನ ಬೆಳಗ್ಗೆ 7ಕ್ಕೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಪ್ರತಾಪಗೌಡ ಪಾಟೀಲ ರಾಷ್ಟ್ರಧ್ವಜಾರೋಹಣ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತೇಶ ಮಸ್ಕಿ ಪರಿಷತ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆನಂತರ ಸಮ್ಮೇಳನದ ಅಧ್ಯಕ್ಷರಾಗಿರುವ ಡಾ.ಸ್ವಾಮಿರಾವ್ ಕುಲಕರ್ಣಿ ತಲೇಖಾನ್ ಅವರ ನೇತೃತ್ವದಲ್ಲಿ ಬೆಳಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಹಾಗೂ ಕನ್ನಡಾಂಭೆ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಭ್ರಮರಾಂಬಾ ದೇವಸ್ಥಾನದಿಂದ ಸಮ್ಮೇಳನ ಸ್ಥಳಕ್ಕೆ ಆಗಮಿಸಲಿದೆ.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಿವೃತ್ತ ನ್ಯಾ.ಶಿವರಾಜ್ ಪಾಟೀಲ, ರಾಜ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸೇರಿದಂತೆ ಸಂಸದರು, ಜಿಲ್ಲೆಯ ಶಾಸಕರು, ಮಾಜಿ ಮಂತ್ರಿಗಳು, ಶಾಸಕರು, ಸ್ಥಳಿಯ ಸಂಸ್ಥೆಗಳ ಜನಪ್ರತಿನಿಧಿಗಳು, ಸಾಹಿತ್ಯಾಸಕ್ತರು, ಶಿಕ್ಷಕರು, ಉಪನ್ಯಾಸಕರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾಹಿತ್ಯ ಪರಿಷತ್ ಸದಸ್ಯರು, ಪದಾಧಿಕಾರಿಗಳು, ಪಟ್ಟಣದ ಜನತೆ ಸೇರಿ ಜಿಲ್ಲೆಯ ವಿವಿಧೆಡೆಯಿಂದ ಎರಡು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಕಸಾಪ ತಿಳಿಸಿದೆ.
ಸಮ್ಮೇಳನಾಧ್ಯಕ್ಷರ ಸಂಕ್ಷಿಪ್ತ ಪರಿಚಯ
ಡಾ. ಸ್ವಾಮಿರಾವ್ ಕುಲಕರ್ಣಿ
ಜನನ-14-2-1953. ಗುಲ್ಬರ್ಗ ವಿವಿಯಿಂದ 1975ರಲ್ಲಿ ಕನ್ನಡ ಎಂಎ ಸ್ನಾತಕೋತ್ತರ ಪದವಿ. 1995ರಲ್ಲಿ ಡಾಕ್ಟರೇಟ್ ಗೌರವ. 1975ರಿಂದ 1980ರವರೆಗೆ ಗುಲ್ಬರ್ಗ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಉದ್ಘೋಷಕರಾಗಿ ಸೇವೆ ಸಲ್ಲಿಕೆ. 1979ರಲ್ಲಿ ಗುಲ್ಬರ್ಗದ ನೂತನ ವಿದ್ಯಾಸಂಸ್ಥೆಯ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭ. 1994ರಲ್ಲಿ ಅಲ್ಲಿಯೇ ಪ್ರಾಚಾರ್ಯರಾಗಿ ಬಡ್ತಿ. 2013ರಲ್ಲಿ ಪ್ರಾಚಾರ್ಯ ಹುದ್ದೆಯಿಂದ ನಿವೃತ್ತಿ. ಗುಲ್ಬರ್ಗ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಕೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು, ಗುಲ್ಬರ್ಗ ವಿವಿ ವಿವಿಧ ಸಮಿತಿಗಳ ಸದಸ್ಯರಾಗಿಯೂ ಸೇವೆ.
ಕಾದಂಬರಿ, ಕಾವ್ಯ, ನಾಟಕ, ದಾಸಸಾಹಿತ್ಯ ಕುರಿತು ಬರೆದ, ಸಂಪಾದಿಸಿದ 45 ಪುಸ್ತಕ ಪ್ರಕಟ. ದಾಸ, ವಚನ, ಜನಪದ ಸಾಹಿತ್ಯ ಕುರಿತ 120 ಲೇಖನ ಪ್ರಕಟ. 4 ದಶಕದಲ್ಲಿ 2600 ಭಾಷಣ. ದಾಸಸಾಹಿತ್ಯದ ಕುರಿತು 12 ಪುಸ್ತಕಗಳು ಪ್ರಕಟಗೊಂಡಿವೆ. 1976 ರಿಂದ ರಂಗಭೂಮಿ ಕಲಾವಿದರಾಗಿ 30 ನಾಟಕಗಳಲ್ಲಿ ನಟನೆ, 5 ರಂಗಭೂಮಿ ನಾಟಕಗಳ ನಿರ್ದೇಶಕರಾಗಿಯೂ ಸೇವೆ. ಆಕಾಶವಾಣಿ ಬಿ ಹೈ ಕಲಾವಿದರು. ಆಕಾಶವಾಣಿಯಲ್ಲಿ 40 ನಾಟಕಗಳು ಹಾಗೂ ದೂರದರ್ಶನದ 12 ನಾಟಕಗಳಲ್ಲಿ ಪಾತ್ರ ನಿರ್ವಹಣೆ. ಆಕಾಶವಾಣಿಯಲ್ಲಿ 10 ಮತ್ತು ದೂರದರ್ಶನದ 8 ರೂಪಕ, ನಾಟಕಗಳ ರಚನೆ. ಖ್ಯಾತ ನಿರ್ದೇಶಕ ನಾಗಾಭರಣ ಅವರ ಹಳ್ಳಿ ಹಳ್ಳಿಯ ಕತೆ ಸಾಕ್ಷ್ಯಚಿತ್ರದ ಸಂಭಾಷಣೆ ಪರಿಷ್ಕರಣೆಕಾರರಾಗಿ, ನಟರಾಗಿ ಹಾಗೂ ಐದು ರಂಗನಾಟಕಗಳಿಗೆ ಶೀರ್ಷಿಕೆ ಗೀತೆ, ಸಾಂದರ್ಭಿಕ ಗೀತೆ ರಚಿಸಿದ್ದಾರೆ.
ಸಾಹಿತ್ಯ ಸಮ್ಮೇಳನ ಪ್ರಚಾರ: ಮನಸೆಳೆದ ಸೈಕಲ್ ಜಾಥಾ
ಮಸ್ಕಿ: ಪಟ್ಟಣದಲ್ಲಿ ಫೆ.11 ಮತ್ತು 12ರಂದು ನಡೆಯಲಿರುವ ರಾಯಚೂರು ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಾರ್ಥವಾಗಿ ಭಾನುವಾರ ಶಾಲಾ ಮಕ್ಕಳ ಸೈಕಲ್ ಜಾಥಾ ಆಯೋಜಿಸಲಾಗಿತ್ತು.
ಜಿಲ್ಲಾ ಕಸಾಪ ಅಧ್ಯಕ್ಷ ಮಹಾಂತೇಶ ಮಸ್ಕಿ, ತಾಪಂ ಸದಸ್ಯ ಹನುಮಂತಪ್ಪ ಮೋಚಿ, ಗ್ರಾಪಂ ಅಧ್ಯಕ್ಷ ಎಂ.ಅಮರೇಶ, ಮಾಜಿ ಅಧ್ಯಕ್ಷ ರವಿಕುಮಾರ ಪಾಟೀಲ್, ಮುಖಂಡರಾದ ಪ್ರಸನ್ನ ಪಾಟೀಲ್ ಕಸಾಪ ಕಾರ್ಯಾಲಯದಿಂದ ಸೈಕಲ್ ಸವಾರಿ ಮಾಡಿ ಜಾಥಾಕ್ಕೆ ಚಾಲನೆ ನೀಡಿದರು.
ಜಾಥಾವು ಪಟ್ಟಣದ ಕನಕ ವೃತ್ತ, ತೇರು ಬಜಾರ, ಮೇನ್ ಬಜಾರ, ಅಗಸಿ, ಮುದಗಲ್ ಕ್ರಾಸ್, ಹಳೇ ಬಸ್ ನಿಲ್ದಾಣದ ಮೂಲಕ ಕಸಾಪ ಕಾರ್ಯಾಲಯದವರೆಗೂ ಸಾಗಿತು. ಜಾಥಾದಲ್ಲಿ ಜೆಆರ್ಎಂ ಪ್ರೌಢಶಾಲೆ, ಬಾಲಕರ ಸರ್ಕಾರಿ ಪ್ರೌಢಶಾಲೆ ಸೇರಿ ಮತ್ತಿತರೆ ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮುಖ್ಯಗುರು ಸಿದ್ದಾರಡ್ಡಿ, ವಿಶ್ವನಾಥ ಕುಲಕರ್ಣಿ, ಲಕ್ಷಣ ಹಾಗೂ ಮುಖಂಡರಾದ ಸೂಗಣ್ಣ ಬಾಳೇಕಾಯಿ, ಶರಣಯ್ಯ ಸೊಪ್ಪಿಮಠ, ಶ್ರೀಧರ ಬೆಳ್ಳುಳ್ಳಿ, ಗುಂಡೂರಾವ್ ದೇಸಾಯಿ, ಪ್ರಭುದೇವ ಸಾಲಿಮಠ, ಪರಶುರಾಮ ಕೋಡಗುಂಟಿ, ಯಮನೂರು ಒಡೆಯರ, ಕಿರಣ ಮುರಾರಿ ಇನ್ನಿತರರಿದ್ದರು.
ಜಗನ್ನಾಥ ಆರ್. ದೇಸಾಯಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

