ರಾಯಚೂರು

ದೌರ್ಜನ್ಯದಿಂದ ಪಾರಾಗಲು ಕರಾಟೆ ಅಸ್ತ್ರವಾಗಲಿ

Published On :

ಕ.ಪ್ರ. ವಾರ್ತೆ   ರಾಯಚೂರು   ಫೆ.10
ದೇಶದಲ್ಲಿ ಇಂದಿನ ದಿನಮಾನದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರದಂಥ ಘಟನೆಗಳು ನಡೆಯುತ್ತಿದ್ದು, ಮಹಿಳೆಯರು ಸುರಕ್ಷತಾ ದೃಷ್ಟಿಯಿಂದ ಹಾಗೂ ಆತ್ಮರಕ್ಷಣೆಗೆ ಕರಾಟೆ ಕಲಿಯುವುದು ತೀರಾ ಅವಶ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಸಲಹೆ ನೀಡಿದರು.
ನಗರದ ಟಾಗೋರ್ ಕಾಲೇಜಿನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ರಾಜ್ಯಮಟ್ಟದ 14ರಿಂದ 17ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಕರಾಟೆ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹೆಚ್ಚಿದ ಮಹಿಳಾ ದೌರ್ಜನ್ಯ- ಕಳವಳ: ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಸುರಕ್ಷಿತ ಹಾಗೂ ಮುಕ್ತವಾಗಿ ಬದುಕು ಸಾಗಿಸುವುದು ಕಷ್ಟ ಎಂಬಂಥ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ. ಇಂಥ ಅಪಾಯಕಾರಿ ಪರಿಸ್ಥಿತಿಯಲ್ಲಿ ಮಹಿಳೆಯರು ತಮ್ಮ ಬದುಕು ನಡೆಸುವಂಥ ಅನಿವಾರ್ಯತೆಯಿದೆ. ಕೇವಲ ನಗರ ಪ್ರದೇಶಗಳಲ್ಲದೇ ಗ್ರಾಮೀಣ ಪ್ರದೇಶದಲ್ಲಿಯೂ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರದಂಥ ಪ್ರಕರಣಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳೆಯರು ಆತ್ಮರಕ್ಷಣೆ ಮತ್ತು ತುರ್ತು ಸಂದರ್ಭದಲ್ಲಿ ಅಪಾಯದಿಂದ ಪಾರಾಗುವ ನಿಟ್ಟಿನಲ್ಲಿ ಕರಾಟೆಯಂಥ ಕ್ರೀಡೆಗಳನ್ನು ಬಳಸಬಹುದಾಗಿದೆ. ಅದರಲ್ಲೂ ಯುವತಿಯರು ಕರಾಟೆ ಕಲಿಕೆಗೆ ಹೆಚ್ಚು ಆಸಕ್ತಿ ತೋರಬೇಕಿದೆ. ಆ ಮೂಲಕ ಸುರಕ್ಷತೆಯ ಬದುಕು ಸಾಗಿಸಲು ಅದು ನೆರವಾಗಲಿದೆ ಎಂದು ಹೇಳಿದರು.
ರಕ್ಷಣೆಗೆ ಕರಾಟೆ ಅಸ್ತ್ರ: ನಗರ ಕ್ಷೇತ್ರದ ಶಾಸಕ ಡಾ. ಶಿವರಾಜ್ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾಟೆ ದೇಶದ ಪ್ರಾಚೀನ ಕ್ರೀಡೆಯಾಗಿದ್ದು, ಕರಾಟೆಯು ಆತ್ಮರಕ್ಷಣೆ ಜತೆಜತೆಗೆ ದೈಹಿಕ ಸಾಮರ್ಥ್ಯ ಹೆಚ್ಚಳಕ್ಕೂ ಪೂರಕವಾಗಿದೆ. ಅದರಲ್ಲೂ ದೌರ್ಜನ್ಯ, ಅತ್ಯಾಚಾರ, ದುಷ್ಕರ್ಮಿಗಳ ದಾಳಿ ಸಂದರ್ಭ ಮಹಿಳೆಯರಿಗೆ ಕರಾಟೆ ಅಸ್ತ್ರವಾಗಿ ನೆರವಿಗೆ ಬರಲಿದೆ ಎಂದು ಹೇಳಿದರು.
ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಕೇವಲ ಆರೋಗ್ಯ ಸುಧಾರಣೆಯಷ್ಟೇ ಅಲ್ಲ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಗೂ ದಾರಿಯಾಗಲಿದೆ. ಅದರಿಂದ ಬದುಕಿನಲ್ಲಿ ಉನ್ನತವಾದದ್ದನ್ನು ಸಾಧಿಸಲು ನೆರವಾಗಲಿದೆ ಎಂದ ಅವರು, ಕರಾಟೆ ಕಲಿಕೆಗೆ ಮಹಿಳೆಯರು, ಯುವತಿಯರು ಹೆಚ್ಚೆಚ್ಚು ಆಸಕ್ತಿ ತೋರಬೇಕು. ಕರಾಟೆ ಕಲಿತು ಒಳ್ಳೆಯದಕ್ಕೆ ಬಳಕೆ ಮಾಡಬೇಕೇ ವಿನಾ ದುಷ್ಕೃತ್ಯಗಳಿಗೆ ಬಳಸದಂತೆ ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ, ನಗರಸಭೆಯ ಹಿರಿಯ ಸದಸ್ಯ ಜಯಣ್ಣ, ಜಿಪಂ ಸ್ಥಾಯಿ ಸಮಿತಿ ಸದಸ್ಯ ಹನುಮೇಶ ಮದ್ಲಾಪುರ, ಹೆಚ್ಚುವರಿ ಡಿಸಿ ಎಂ.ತಿಮ್ಮಪ್ಪ, ಡಿಡಿಪಿಐ ರಾಮಾಂಜನೇಯ, ಬಿಇಒ ಮಲ್ಲಿಕಾರ್ಜುನ ಸೇರಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕರು  ಮತ್ತು ಬೋಧಕ ವರ್ಗ ಪಾಲ್ಗೊಂಡಿದ್ದರು.
ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕರಾಟೆ ಪಟುಗಳು ಉದ್ಘಾಟನಾ ಸಮಾರಂಭದಲ್ಲಿದ್ದರು. ಈ ವೇಳೆ ವಿದ್ಯಾರ್ಥಿಗಳು ಹಾಗೂ ಕರಾಟೆ ಶಿಕ್ಷಕರು ಕರಾಟೆ ಪ್ರದರ್ಶನ ನೀಡಿದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.