ಸಾಧಿಸಬೇಕು ಎಂಬ ಛಲವೇ ಮೂಲಮಂತ್ರವಾಗಲಿ: ಮೋಳಕೇರೆ
ಭಾಲ್ಕಿ: ಜೀವನದಲ್ಲಿ ಮಂತ್ರದಿಂದ ಮಾವಿನಕಾಯಿ ಉದುರುವುದು ಸಾಧ್ಯವಿಲ್ಲ. ಬದುಕಿನಲ್ಲಿ ಎಲ್ಲವು ನಾವಂದುಕೊಂಡಂತೆ ನಡೆಯಬೇಕಾದರೆ, ಇಟ್ಟ ಗುರಿ ಮುಟ್ಟಬೇಕಾದರೆ ಸಾಧಿಸಬೇಕು ಎಂಬ ಛಲ ಮೂಲಮಂತ್ರವಾಗಿದೆ ಎಂದು ಚನ್ನಬಸವೇಶ್ವರ ಗುರುಕುಲದ ಪ್ರಾಚಾರ್ಯ ಬಸವರಾಜ ಮೋಳಕೇರೆ ಹೇಳಿದರು.
ಶಿವಾಜಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಪಿಯುಸಿ ದ್ವತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಪಿಯು ಹಂತ, ಅತಿ ಮುಖ್ಯ ಘಟ್ಟ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಏನಾದರೊಂದು ಮಹತ್ತರ ಸಾಧನೆಯ ಛಲವನ್ನಿಟ್ಟುಕೊಳ್ಳಬೇಕು. ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆ ಎಂದರೆ ಭಯಕ್ಕೊಳಗಾಗುತ್ತಾರೆ. ಹಾಗಾಗದೆ ಪರೀಕ್ಷೆಯ ಬಗ್ಗೆ ಸದಾ ಸಕಾರಾತ್ಮಕವಾಗಿ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವಿ.ಎಚ್.ಪಾಟೀಲ್ ಮಾತನಾಡಿ, ವಿದ್ಯಾರ್ಥಿಯೊಬ್ಬನ ಮುಂದಿನ ಭವಿಷ್ಯ ಉಜ್ವಲಗೊಳಿಸಿಕೊಳ್ಳುವುದು ಅಥವಾ ವಿರೂಪ ಮಾಡಿಕೊಳ್ಳುವುದು ಅವರವರ ಕೈಯಲ್ಲಿಯೇ ಇದೆ. ಪರೀಕ್ಷೆ ಸಮೀಪಿಸುತ್ತಿವೆ, ಎಲ್ಲಾ ವಿಷಯಗಳಿಗೆ ಮಹತ್ವ ನೀಡಿ ಅಧ್ಯಯನ ಮಾಡಿ. ತಂದೆ-ತಾಯಿ, ಕಲಿತ ಕಾಲೇಜಿಗೆ ಗೌರವ ತಂದು ಕೊಡಬೇಕು ಎಂದು ತಿಳಿಸಿದರು. ಪ್ರೊ. ಬಿ. ಆರ್. ಮುಂಗಳೆ, ಶಂಭುಲಿಂಗ ಕಾಮಣ್ಣ ಮಾತನಾಡಿದರು.
ಇಂದಿನಿಂದ ಉರೂಸ್
ಜೇವರ್ಗಿ: ತಾಲೂಕಿನ ಮುದಬಾಳ(ಬಿ) ಗ್ರಾಮದಲ್ಲಿರುವ ಹಜರತ್ ಮಹಿಬೂಬ ಸುಭಾನಿ ಉರೂಸ್ ಫೆ.11ರಿಂದ ಪ್ರಾರಂಭವಾಗಲಿದೆ. ಇಜೇರಿಯ ಹಜರತ್ ಖಾಜಾ ಅಮೀನ್ ರಹಮತ್ ಉಲ್ಲಾ ದರ್ಗಾದ ನಸೀನ್ ಸೈಯದ್ ಇಸ್ಮಾಯಿಲ್ ಹುಸೇನಿ ಸಜ್ಜಾದ್ ನೇತೃತ್ವದಲ್ಲಿ ಉರುಸ್ ಜರುಗಲಿದೆ. ಫೆ.11 ರಂದು ಗಂಧ ಜರುಗಲಿದೆ. ಗ್ರಾಮದ ಮಹ್ಮದ್ ಪಟೇಲ್ ಮಾಲಿಪಾಟೀಲ್, ಖಾಸಿಂಪಟೇಲ್ ಪೊಲೀಸ್ ಪಾಟೀಲ್ ಅವರ ಮನೆಯಿಂದ ಸಕಲ ವಾದ್ಯ ವೈಭವಗಳೊಂದಿಗೆ ಸಂಭ್ರಮದಿಂದ ಗಂಧ ಮೆರವಣಿಗೆ ಮೂಲಕ ದರ್ಗಾಕ್ಕೆ ತಲುಪುವುದು. ಫೆ.12ರಂದು ಸಂಜೆ 6ಕ್ಕೆ ದೀಪೋತ್ಸವ ಸಮಾರಂಭ, ರಾತ್ರಿ 8ಕ್ಕೆ ಗುಲ್ಬರ್ಗದ ಶಕುಂತಲಾಬಾಯಿ ಹಾಗೂ ಶರಣಬಸಪ್ಪ ನದಿಶಿಣ್ಣೂರ್ ಅವರಿಂದ ಗೀಗೀ ಪದಗಳು ಜರುಗಲಿವೆ. ಫೆ.13ರಂದು ಬೆಳಗ್ಗೆ ಜಿಯಾರತ್ ನಂತರ ಜಂಗೀ ಪೈಲ್ವಾನರಿಂದ ಕುಸ್ತಿಗಳು ನಡೆಯಲಿವೆ ಎಂದು ಉರೂಸ್ ಮಂಡಳಿ ತಿಳಿಸಿದೆ.
ನಾಟಕೋತ್ಸವ
ಗುಲ್ಬರ್ಗ: ನಗರದ ಸಂಭ್ರಮ ಕಲಾ ಕುಟೀರ, ಸುಜಯ್ ಎಜುಕೇಷನ್ ಮತ್ತು ವೆಲಫೇರ್ ಸೊಸೈಟಿ, ಎಂ.ಎಂ.ಕೆ ಕಾಲೇಜ ಆಫ್ ವಿಜುವಲ್ ಆರ್ಟ್ ಸಂಯುಕ್ತಾಶ್ರಯದಲ್ಲಿ ಫೆ.11 ಮತ್ತು 12ರಂದು ಎರಡು ದಿನಗಳ ಕಾಲ ಸಂಜೆ 6ಕ್ಕೆ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಹಿರಿಯ ಚಿತ್ರಕಲಾವಿದ ಡಾ. ವಿ.ಜಿ. ಅಂದಾನಿ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರೀಯ ವಿವಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಶಿವಗಂಗಾ ರುಮ್ಮಾ, ಶಿವಶರಣಪ್ಪ ಬನ್ನಿಕಟ್ಟಿ, ಸುನಿಲ್ ಕುಮಾರ ಒಂಟಿ, ಹೆಚ್.ಎಸ್. ಬಸವಪ್ರಭು ಅತಿಥಿಗಳಾಗಿ ಪ್ರೊ. ಲಿಂಗಪ್ಪ ಅಧ್ಯಕ್ಷತೆ ವಹಿಸುವರು.
ವಿಚಾರ ಸಂಕಿರಣ
ಗುಲ್ಬರ್ಗ: ಕರ್ನಾಟಕ ಜನಪದ ಅಕಾಡೆಮಿ ಬೆಂಗಳೂರು ಹಾಗೂ ಜಿಲ್ಲಾ ಕನ್ನಡ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಫೆ.23 ರಂದು ಬೆಳಗ್ಗೆ 10ಕ್ಕೆ ಜನಪದ ಪ್ರಸ್ತುತ ಸವಾಲುಗಳ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಕುವೆಂಪು ವಿಶ್ವವಿದ್ಯಾಲಯ ನಿವೃತ್ತ ಕನ್ನಡ ಪ್ರಾದ್ಯಾಪಕ ಡಾ. ತೀನಂ ಶಂಕರನಾರಾಯಣ ಕಾರ್ಯಕ್ರಮ ಉದ್ಘಾಟಿಸುವರು. ಬೆಳಗ್ಗೆ 11.30ಕ್ಕೆ ನಡೆಯುವ ಜನಪದ ಪ್ರಸ್ತುತ ಸವಾಲುಗಳ ಗೋಷ್ಠಿ-1ರ ಅಧ್ಯಕ್ಷತೆಯನ್ನು ಗುವಿವಿ ಜನಪದ ವಿದ್ವಾಂಸ ಬಸವರಾಜ ಸಬರದ ವಹಿಸುವರು. ಜನಪದ ಜಾಗತೀಕರಣ ಮುಖಾಮುಖಿಯ ವಿಷಯ ಕುರಿತಂತೆ ಗುವಿವಿ ಕುಲಸಚಿವ ಪ್ರೊ. ಹೆಚ್.ಟಿ. ಪೋತೆ, ಜನಪದ ಪರ್ಯಾಯ ಸಂಸ್ಕೃತಿಯ ಚಿಂತನೆ ವಿಷಯ ಕುರಿತು ಪ್ರೊ. ವಸು ಮಳಲಿ, ಜನಪದ ಶಿಕ್ಷಣ- ಉದ್ಯೋಗ ಪ್ರಸ್ತುತ ಸವಾಲುಗಳ ಕುರಿತಂತೆ ಡಾ. ರಂಗಾರೆಡ್ಡಿ ಪ್ರಬಂಧ ಮಂಡಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ನಡೆಯುವ ಮಹಿಳಾ ಜನಪದ ಗೋಷ್ಠಿ-2 ಯಲ್ಲಿ ಡಾ. ಗಾಯತ್ರಿ ನಾವಡ ಅಧ್ಯಕ್ಷತೆ ವಹಿಸುವರು. ಡಾ. ಸವಿತಾ ಬನ್ನಾಡಿ, ಡಾ. ಶೈಲಜಾ ಹಿರೇಮಠ, ಡಾ. ರಾಜೇಶ್ವರಿ ಕಲ್ಲೂರಕರ್ ಅವರು ವಿವಿಧ ವಿಷಯದ ಮೇಲೆ ಪ್ರಬಂಧ ಮಂಡಿಸಲಿದ್ದಾರೆ.
ಮಧ್ವನವಮಿ ಉತ್ಸವ
ಗುಲ್ಬರ್ಗ: ಇಲ್ಲಿನ ವಿದ್ಯಾನಗರದಲ್ಲಿರುವ ಕೃಷ್ಣಮಂದಿರದ ಜಯತೀರ್ಥ ವಿದ್ಯಾರ್ಥಿನಿಲಯದಲ್ಲಿ ನವಲಿ ಕೃಷ್ಣಚಾರ್ಯ ಅಧ್ಯಕ್ಷತೆಯಲ್ಲಿ ಮಧ್ವನವಮಿ ಉತ್ಸವ ನಿಮಿತ್ತ ವಿಶೇಷ ಕಾರ್ಯಕ್ರಮಗಳು ಜರುಗಿದವು. ರಥೋತ್ಸವ, ಪಾರಾಯಣ, ಭಜನೆ ಹಾಗೂ ಪಿಡಂತರಿಂದ ಉಪನ್ಯಾಸಗಳು ನಡೆದವು. ನಿಲಯದ ವಿದ್ಯಾರ್ಥಿಗಳು, ಹಿರಿಯರಾದ ಪ್ರಲ್ಹಾದ ಸಂತೆಕೆಲ್ಲೂರ, ಗೋವಿಂದರಾವ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

