ರಾಯಚೂರು

ಎನ್ನಾರ್ಬಿಸಿ ವಿಸ್ತರಣೆ; 2,500 ಕೋಟಿ ಬಿಡುಗಡೆಗೆ ಆಗ್ರಹ

Published On :

ಕ.ಪ್ರ. ವಾರ್ತೆ    ರಾಯಚೂರು    ಫೆ.12
ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯ ಮೂಲ ಯೋಜನೆಯಂತೆ ಪೂರ್ಣಗೊಳಿಸಿದ ನಂತರವಷ್ಟೇ ರಾಜ್ಯ ಸರ್ಕಾರ ಇನ್ನುಳಿದ ನೀರಾವರಿ ಯೋಜನೆ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ 2,500 ಕೋಟಿ ಮಂಜೂರು ಮಾಡುವಂತೆ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಎ.ಪಾಪಾರೆಡ್ಡಿ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದ್ಯ ನಾರಾಯಣಪುರ ಬಲದಂಡೆ ಕಾಲುವೆಯನ್ನು 95 ಕಿ.ಮೀ.ನಿಂದ 125 ಕಿ.ಮೀ.ವರೆಗೆ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಬಾಕಿ 43 ಕಿಮೀ ಕಾಮಗಾರಿಯನ್ನು ಕೂಡಲೇ ಕೈಗೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಒತ್ತಾಯಿಸಿದರು.
50 ಎಕರೆ ನೀರಾವರಿ ಸಾಧ್ಯ: ಕಾಲುವೆಯ ವಿಸ್ತರಣೆಯಾದರೆ ರಾಯಚೂರು ತಾಲೂಕಲ್ಲಿ 50 ಸಾವಿರ ಎಕರೆ ನೀರಾವರಿಯಾಗಲಿದೆ. ಈಗಾಗಲೇ ಈ ಬಗ್ಗೆ ವಿಸ್ತೃತ ವರದಿ ಸಿದ್ಧಗೊಳಿಸಲಾಗಿದೆ. ಕಾಲುವೆಯನ್ನು ಸದ್ಯದ 95 ಕಿಮೀಯನಿಂದ 168 ಕಿಮೀವರೆಗೆ ವಿಸ್ತರಣೆ, ಉಪ, ಶಾಖಾ ಕಾಲುವೆ, ಹೊಲಗಾಲುವೆಗಳ ನಿರ್ಮಾಣಕ್ಕೆ 2,500 ಕೋಟಿ ನೀಡುವಂತೆ ಆಗ್ರಹಿಸಿದರು.
ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಫೆ.14ಕ್ಕೆ ಬಜೆಟ್ ಮಂಡಿಸಲಿದ್ದು ಬಜೆಟ್ ನಲ್ಲಿ ಈ ಮೊತ್ತ ಮಂಜೂರು ಮಾಡುವಂತೆ ನಿಯೋಗದಲ್ಲಿ ತೆರಳಿ ಒತ್ತಾಯಿಸಲಾಗುತ್ತದೆ ಎಂದ ಅವರು, ಬಲದಂಡೆ 9ಎ ವಿತರಣಾ ಕಾಲುವೆ ವಿನ್ಯಾಸ ಮಾರ್ಪಾಡು, ನೀರಾವರಿ ಪ್ರದೇಶ ವಿಸ್ತರಣೆ, ಬಲದಂಡೆ ಹಾಗೂ ತುಂಗಭದ್ರಾ ಎಡದಂಡೆ ನಡುವೆ ಸಂಪರ್ಕ ಕಾಲುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಸಿಎಂಗೆ ಮನವಿ ಮಾಡಲಾಗುತ್ತದೆ ಎಂದರು.
ಕಾಲುವೆ ವಿಸ್ತರಣೆಗೆ ಒತ್ತು: ರಾಯಚೂರು ತಾಲೂಕಿನ ಅನೇಕ ಗ್ರಾಮಗಳು ನೀರಾವರಿ ಸವಲತ್ತಿನಿಂದ ವಂಚಿತವಾಗಿವೆ. ಅಂಥ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಕಾಲುವೆ ವಿಸ್ತರಣೆ ಕಾಮಗಾರಿಗೆ ಹೆಚ್ಚಿನ ಒತ್ತು ನೀಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದರೂ ಎಲ್ಲ ಪಕ್ಷಗಳ ಶಾಸಕರಿಗೆ ಅಭಿವೃದ್ಧಿಯಲ್ಲಿ ಸಮಾನಾವಕಾಶ ಕಲ್ಪಿಸುತ್ತಿದೆ. ಆದರೂ ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಹಾಗೂ ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ಅವರು ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಶಾಸಕರಿಬ್ಬರಿಗೆ ಲೇವಡಿ: ಕ್ಷೇತ್ರದ ಹೊರಗಿನವರಾದ ಶಾಸಕ ತಿಪ್ಪರಾಜು ಹವಾಲ್ದಾರರಿಂದ ರಾಯಚೂರು ತಾಲೂಕಿನ ಉದ್ಧಾರ ಅಸಾಧ್ಯ ಎಂದು ಟೀಕಿಸಿದ ಅವರು, ನೀರಾವರಿ ಯೋಜನೆಗಳ ಅನುಷ್ಠಾನ ಅವರಿಂದ ನಿರೀಕ್ಷಿಸುವುದು ತಪ್ಪಾದೀತು. ನಗರ ಶಾಸಕ ಡಾ. ಶಿವರಾಜ ಪಾಟೀಲ್ ತಮ್ಮ ಸಂಬಂಧಿಕರಿಗೆ ಕಾಮಗಾರಿ ಗುತ್ತಿಗೆ ಕೊಡಿಸುವಲ್ಲಿಯೇ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆಯೇ ವಿನಾ ಅಭಿವೃದ್ಧಿಗಲ್ಲ ಎಂದು ಲೇವಡಿ ಮಾಡಿದರು.
ನಗರದಲ್ಲಿ ನೆರೆ ಪರಿಹಾರ ನಿಧಿಯಡಿ ನಗರದಲ್ಲಿನ ರಸ್ತೆಗಳ ತಗ್ಗುಗುಂಡಿಗಳನ್ನು ಮುಚ್ಚಲು 1.04 ಕೋಟಿ ದೊರೆತಿದ್ದು ಹಣ ವೆಚ್ಚವಾಗಿದ್ದರೂ ರಸ್ತೆಗಳ ತಗ್ಗು ಮುಚ್ಚಿಲ್ಲ ಎಂದ ಅವರು, ಗುತ್ತಿಗೆದಾರರ ಹೆಸರಿನಲ್ಲಿ ಶಾಸಕರ ಸಂಬಂಧಿಕರೇ ಕಾಮಗಾರಿ ನಿರ್ವಹಿಸುತ್ತಿರುವುದು ಸಮಸ್ಯೆಗಳ ಪರಿಹಾರಕ್ಕೆ ಅಡಚಣೆಯಾಗಿದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.