ರಾಯಚೂರು

ಕೃಷ್ಯುತ್ಪನ್ನಗಳಿಗೆ ವೈಜ್ಞಾನಿಕ ದರ ನಿಗದಿ ಮಾಡಿ

Published On :

ಕ.ಪ್ರ. ವಾರ್ತೆ    ಲಿಂಗಸ್ಗೂರು    ಫೆ.13
ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು. ಬೆಲೆ ಕುಸಿದಾಗ ಸರ್ಕಾರ ನೇರವಾಗಿ ಮಾರುಕಟ್ಟೆಯಲ್ಲಿ ಖರೀದಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ನೇತೃತ್ವದಲ್ಲಿ ಗುರುವಾರ ಸಾಂಕೇತಿಕ ಧರಣಿ ನಡೆಸಿದರು.
ಮಾಜಿ ಶಾಸಕ, ರೈತ ಸಂಘದ ಸಂಸ್ಥಾಪಕರಲ್ಲೊಬ್ಬರಾದ ದಿ. ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಹುಟ್ಟುಹಬ್ಬದ ನಿಮಿತ್ತ ಸ್ಥಳೀಯ ಸಹಾಯಕ ಆಯುಕ್ತರ ಕಚೇರಿ ಆವರಣದಲ್ಲಿ ಧರಣಿ ನಡೆಸಿದ ರೈತರು, ನಂಜುಂಡಸ್ವಾಮಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವಿಸಿದರು. ನಂತರ ತಹಸೀಲ್ದಾರ್ ಜಿ.ಎಸ್. ಮಹಾಜನ್‌ರಿಗೆ ಮನವಿ ಸಲ್ಲಿಸಿದರು.
ಸಾಲದ ಶೂಲ: ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ.70ರಷ್ಟು ರೈತರು ಒಕ್ಕಲುತನ ಮಾಡುತ್ತಿದ್ದರೂ ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಶೇ.35ರಷ್ಟು ಜನ ಒಕ್ಕಲುತನ ಮಾಡುತ್ತಿದ್ದು, ಆಹಾರ ಭದ್ರತೆ ಕಾಯ್ದುಕೊಳ್ಳುವಲ್ಲಿ ರೈತರು ಸಫಲರಾಗಿದ್ದಾರೆ. ಆದರೆ ರೈತರು ಸಾಲದಲ್ಲಿ ಸಿಲುಕಿ ನಲುಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸದಿರುವುದೇ ಇಂತಹ ದುರಂತಕ್ಕೆ ಕಾರಣವಾಗಿದ್ದು, ಸರ್ಕಾರದ ಸಹಾಯಧನ ಹಾಗೂ ಮತಕ್ಕಾಗಿ ಕೆಲ ಯೋಜನೆಗಳನ್ನು ಪ್ರಕಟಿಸಿ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿವೆ. ಸಾವಿರಾರು ಕೋಟಿ ರೂ. ಆವರ್ತನಿಧಿ ರೈತರಿಗೆ ವರದಾನವಾಗದೆ ಶಾಪವಾಗಿ ಪರಿಣಮಿಸಿದೆ.
ರೈತರು ಹೋರಾಟ ನಡೆಸಿದಾಗ ಕಾಟಾಚಾರಕ್ಕೆ ಖರೀದಿ ಕೇಂದ್ರ ಆರಂಭಿಸಿ ತಂದ ಮಾಲು ಅಧಿಕಾರಿಗಳು ತಿರಸ್ಕರಿಸುತ್ತಿದ್ದಾರೆ. ಜಿಲ್ಲೆಯ ರೈತರು ಕಡಲೆ, ತೊಗರಿ, ಶೇಂಗಾ, ಸೂರ್ಯಕಾಂತಿ, ಬತ್ತ ಬೆಳೆದಿದ್ದರೂ ವೈಜ್ಞಾನಿಕ ಬೆಲೆ ಸಿಗದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘಕ್ಕೆ ಸೇರ್ಪಡೆ: ಇದೇ ವೇಳೆ ತಾಲೂಕಿನ ತೀರ್ಥಹಳ್ಳಿ ಗ್ರಾಮದ ಹನುಮಪ್ಪ, ಅಮರೇಶ ಪಾಟೀಲ್, ರಾಮಣ್ಣ ತಳವಾರ, ಚಿದಾನಂದಪ್ಪ ಸಿರವಾರ, ಈರಪ್ಪ ಎದ್ದಲದೊಡ್ಡಿ, ಛತ್ರಪ್ಪ, ಚಂದಪ್ಪ ಅಡವಿಬಾವಿ, ಹನುಮಂತ, ಅಮರೇಶ ಹುಬ್ಬಳ್ಳಿ, ಶಿವಣ್ಣ ಪಾಟೀಲ್, ಯರ್ರಿಸ್ವಾಮಿ ಅವರು ರೈತ ಸಂಘಕ್ಕೆ ಸೇರ್ಪಡೆಗೊಂಡರು.
ಗಂಗಾಧರ ಅಂಗಡಿ, ಅಮರಗುಂಡಪ್ಪ ಹಟ್ಟಿ, ದುರುಗಪ್ಪ ಹಮ್ಮಾಪುರ, ಯಲ್ಲಪ್ಪ ಸೇರಿದಂತೆ ಧರಣಿ ಸ್ಥಳದಲ್ಲಿ ಸಂಗೀತ ವಾದ್ಯದ ಸಮೇತ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.
ಧರಣಿಯಲ್ಲಿ ರೈತ ಮುಖಂಡರಾದ ಸಿದ್ಧಲಿಂಗೇಶ್ವರ ಪಾಟೀಲ್, ಲಕ್ಷ್ಮಣಗೌಡ ಕಡಗಂದೊಡ್ಡಿ, ಸಿದ್ದೇಶ ಗೌಡೂರು, ಸಿದ್ರಾಮಯ್ಯ ಬನ್ನಿಗನೂರ, ಸಂಗಣ್ಣ ಮುದಗಲ್, ಕುಪ್ಪಣ್ಣ ಗೋನವಾಟ್ಲ, ಗ್ಯಾನಪ್ಪ ಗುಡಿಹಾಳ, ಅಮರಯ್ಯಸ್ವಾಮಿ, ಬಸನಗೌಡ ಪೋಲೀಸ್ಪಾಟೀಲ್, ನರಸಿಂಗರಾವ್, ಶಿವಕುಮಾರ, ಭೀಮೇಶರಾವ್, ಯಂಕಪ್ಪ ಕಾರಬಾರಿ, ವೀರನಗೌಡ, ಅಯ್ಯಪ್ಪ ನಿಲೋಗಲ್, ಮಲ್ಲಣ್ಣ ದಿನ್ನಿ ಇದ್ದರು.


ಹಕ್ಕೊತ್ತಾಯಗಳು...
 ರಾಯಚೂರು, ಬೀದರ್, ಗುಲ್ಬರ್ಗ, ಬಾಗಲಕೋಟೆ, ಧಾರವಾಡ, ಗದಗ, ಬಿಜಾಪುರ, ಯಾದಗಿರಿ ಜಿಲ್ಲೆಗಳಲ್ಲಿ ಮಾರುಕಟ್ಟೆಯಲ್ಲಿ ಕಡಲೆ ಬೆಲೆ ಬೆಂಬಲ ಬೆಲೆಗಿಂತ ಕಡಿಮೆಯಾಗಿದ್ದು, ಖರೀದಿ ಕೇಂದ್ರ ಪ್ರಾರಂಭಿಸಿ ಕಡಲೆ ಖರೀದಿ ಮಾಡಬೇಕು.
 ಬಗರ್ ಹುಕುಂ ಸಾಗುವಳಿ ಮಾಡುವ ಬಡ ರೈತರಿಗೆ ಸಾಗುವಳಿ ಚೀಟಿ ನೀಡಬೇಕು.
 ಕೃಷಿ ಭೂಮಿ ಸರ್ವೆ ಕಾರ್ಯ ಬ್ರಿಟೀಷರ ಕಾಲದಲ್ಲಿ ಆಗಿವೆ. ಪುನಃ ಸರ್ವೆ ಕಾರ್ಯ ಮಾಡಬೇಕು.
 ರೈತರ ಪಂಪ್‌ಸೆಟ್‌ಗಳಿಗೆ 8 ತಾಸು ವಿದ್ಯುತ್ ಪೂರೈಸಬೇಕು. ಖಾತ್ರಿ ಯೋಜನೆ ಅವ್ಯವಹಾರ ತನಿಖೆಗೆ ಒಳಪಡಿಸಬೇಕು.
 ಮಾರುಕಟ್ಟೆಯಲ್ಲಿ ರೈತರಿಗೆ ಬಿಳಿ ಚೀಟಿ ಕೊಡುವುದು ಹಾಗೂ ದಲಾಲಿ ತೆಗೆಯುವುದು, ತೂಕದಲ್ಲಿ ಮೋಸ ಮಾಡುವುದು ನಿಲ್ಲಬೇಕು.
 ಮಾರಾಟ ಮಾಡಿದ ಕೃಷಿ ಉತ್ಪನ್ನಗಳ ಹಣ ಸರ್ಕಾರ ಮಾರುಕಟ್ಟೆ ಮೂಲಕ ಸಂದಾಯ ಮಾಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.