ನಗರದಲ್ಲಿ ಭಾರತೀಯ ಹತ್ತಿ ನಿಗಮ ಸ್ಥಾಪಿಸಲು ಮನವಿ
ರಾಯಚೂರು: ಭಾರತೀಯ ಹತ್ತಿ ನಿಗಮ ರಾಯಚೂರಲ್ಲಿ ಸ್ಥಾಪಿಸಬೇಕೆಂದು ಎಪಿಎಂಸಿ ನಿರ್ದೇಶಕ ಬಾಬೂರಾವ್‌ರವರು ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ರಾಯಚೂರು ಜಿಲ್ಲೆ ಗುಣಮಟ್ಟದ ಹತ್ತಿ ಬೆಳೆಯುವಲ್ಲಿ ಹೆಸರುವಾಸಿಯಾಗಿದ್ದು, ಏಷ್ಯಾದಲ್ಲಿ ಹತ್ತಿ ಬೆಳೆ ತೆಗೆಯುವಲ್ಲಿ 2 ಸ್ಥಾನ ಪಡೆದಿದೆ. ಇತ್ತೀಚಿಗೆ ಇಳುವರಿಯಲ್ಲಿ ಪ್ರಗತಿ ಕಂಡಿದೆ. ಹವಾಮಾನ ವೈಪರಿತ್ಯದಿಂದ ಹತ್ತಿ ಬೆಳೆ ಹಾನಿಯಾಗಿ ರೈತರಿಗೆ ಆರ್ಥಿಕ ನಷ್ಟ ಮಾಡುತ್ತಿದ್ದು, ಇದರಿಂದ ರೈತರು ಕಂಗಾಲಾಗುತ್ತಿದ್ದಾರೆ.
ಬೆಳೆಗೆ ಸಕಾಲದಲ್ಲಿ ತಕ್ಕ ಬೆಲೆ ಸಿಗಲು ಭಾರತೀಯ ಹತ್ತಿ ನಿಗಮ ಸ್ಥಾಪನೆಗೆ ಅಗತ್ಯವಾಗಿದೆ. ಈಗಾಗಲೇ ಇದರ ಕಚೇರಿ ಹತ್ತಿ ನಗರವೆಂದು ಖ್ಯಾತಿ ಪಡೆದ ರಾಯಚೂರಲ್ಲಿ ಇತ್ತು. ಕೆಲವರ ಕುತಂತ್ರದಿಂದ ಈ ಕಚೇರಿ ಹುಬ್ಬಳ್ಳಿಗೆ ಎತ್ತಂಗಡಿ ಮಾಡಲಾಗಿದೆ. ಕಾರಣ ಈ ಹಿಂದೆ ಇದ್ದ ನಿಗಮದ ಕಚೇರಿ ರಾಯಚೂರಲ್ಲಿ ಸ್ಥಾಪಿಸಿ ನಿರ್ದೇಶಕರನ್ನು ನಿಯುಕ್ತಿಗೊಳಿಸಬೇಕು.
ಮುಖ್ಯಮಂತ್ರಿಗಳು ಮತ್ತು ಕೃಷಿ ಮಂತ್ರಿಗಳು ರಾಯಚೂರು ಜಿಲ್ಲೆಯ ಹತ್ತಿ ಬೆಳೆಗಾರರಿಗಾದ ಅನ್ಯಾಯ ಸರಿಪಡಿಸಬೇಕು. ರೈತರ ನೆರವಿಗೆ ಸರ್ಕಾರ ಧಾವಿಸಿ ಹೈ-ಕ ಪ್ರಾಂತದ ಹತ್ತಿ ರೈತರ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜೆಡಿಯು ಸದಸ್ಯತ್ವ ನೋಂದಣಿ ಅಭಿಯಾನ
ರಾಯಚೂರು: ಜನತಾದಳ (ಸಂಯುಕ್ತ) ಕರ್ನಾಟಕ ಪಕ್ಷದಿಂದ ಕಾರ್ಯಕರ್ತರ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಕಲ್ಲೂರು ಮಹಾದೇವಪ್ಪ ವಕೀಲರು ಹಾಗೂ ಜಿಲ್ಲಾಧ್ಯಕ್ಷ ಬಾಬೂ ದಿನ್ನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಆಯಾ ತಾಲೂಕಿನ ಗ್ರಾಮ ಪಂಚಾಯ್ತಿ ಮಟ್ಟದಿಂದ ಪ್ರತಿ ವಾರ್ಡಿನಲ್ಲಿ ಸಕ್ರಿಯ ಕಾರ್ಯಕರ್ತರನ್ನು ನೇಮಿಸಿ ಪಕ್ಷ ಸೇರ್ಪಡೆ ಮಾಡಿಕೊಂಡು ಪಕ್ಷ ಬಲಪಡಿಸುವ ನಿರ್ಧಾರ ಕೈಗೊಂಡು ನೀಡಿರುವ ಜವಾಬ್ದಾರಿಯನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮುನ್ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಪ್ರಥಮ ಆದ್ಯತೆ: ಜಿಲ್ಲಾ ಮತ್ತು ತಾಲೂಕು ಕಾರ್ಯಕಾರಿ ಪದಾಧಿಕಾರಿಗಳನ್ನು ನೇಮಕ ಮಾಡಿ ಪಕ್ಷದ ಚಟುವಟಿಕೆ ಹಾಗೂ ಪಕ್ಷದ ನಿಯಮಾವಳಿ ಪ್ರಕಾರ ಕಾರ್ಯಕ್ರಮ ಮುಂದುವರಿಸಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ಯುವಕರಿಗೆ ಪ್ರಥಮ ಆದ್ಯತೆ ನೀಡುವ ನಿಟ್ಟಿನಲ್ಲಿ ಪಕ್ಷ ಮುನ್ನಡೆಸುವ ಉತ್ತಮ ಉದ್ದೇಶ ಹೊಂದಲಾಗಿದೆ.
ಮುಂಬರುವ ತಾಪಂ, ಜಿಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಕಣಕ್ಕಿಳಿಸಿ ಸ್ಪರ್ಧಿಸುವ ಆಕಾಂಕ್ಷಿಗಳನ್ನು ನಿಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿ ಕಾರ್ಯ ನಿರ್ವಹಿಸಲಾಗುವುದೆಂದು ಹೇಳಿದರು.
ವಿಚಾರಣಾ ಸಮಿತಿ ಭೇಟಿ
ಸಿಂಧನೂರು: ನಗರಕ್ಕೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಂಜೂರಾಗಿರುವ ಹಿನ್ನೆಲೆಯಲ್ಲಿ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ತೆಗೆದುಕೊಳ್ಳಬಹುದಾದ ವಿಷಯಗಳ ಸಂಯೋಜನೆ ಕುರಿತು ಪರಿಶೀಲನೆ ನಡೆಸಲು ಬಿಜಾಪುರ ಮಹಿಳಾ ವಿಶ್ವವಿದ್ಯಾಲಯ ವಿಚಾರಣಾ ಸಮಿತಿ ಭೇಟಿ ನೀಡಿ ವಸ್ತುಸ್ಥಿತಿಯನ್ನು ವೀಕ್ಷಿಸಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಆಗಮಿಸಿದ ವಿಚಾರಣಾ ಸಮಿತಿ ನೋಡಲ್ ಅಧಿಕಾರಿ ಪಂಪನಗೌಡ ಗುರಿಕಾರ ಅವರೊಂದಿಗೆ ಚರ್ಚೆ ನಡೆಸಿ ವರದಿ ಸಂಗ್ರಹಿಸಲಾಯಿತು. ಬಿಎ, ಬಿಕಾಂ, ಬಿಸಿಎ, ಬಿಎಸ್‌ಡಬ್ಲ್ಯೂ, ಬಿಎಸ್ಸಿ, ಬಿಎಸ್ಸಿ ಹೋಂ ಸೈನ್ಸ್ ಮತ್ತು ಫ್ಯಾಷನ್ ಟೆಕ್ನಾಲಜಿ ಕೋರ್ಸ್‌ಗಳನ್ನು ಮುಂಬರುವ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಸಮಾಲೋಚನೆ ನಡೆಸಲಾಯಿತು.
ವಿಚಾರಣಾ ಸಮಿತಿಯ ಸದಸ್ಯರಾದ ಡಾ. ಮಹೇಶ ಚಿಂತಾಮಣಿ, ಡಾ. ಎನ್.ಚಂದ್ರಪ್ಪ, ಡಾ. ಕೆ.ರಮೇಶ, ಸ್ಥಳೀಯ ಕಾಲೇಜಿನ ಪ್ರಾಂಶುಪಾಲರಾದ ಪ್ರಹ್ಲಾದರಡ್ಡಿ, ಪ್ರಾಧ್ಯಾಪಕ ಹನ್ಮಂತಪ್ಪ, ಆರೀಫ್, ಬಸವರಾಜ, ಗ್ರಂಥಪಾಲಕ ಬಸವರಾಜ, ಅಧೀಕ್ಷಕ ಮುರುಳೀಧರ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಯನಕ್ಕೆ ಸಹಕರಿಸಲು ಸಿದ್ಧ
ರಾಯಚೂರು: ಸರ್ಕಾರ ವಿದ್ಯಾರ್ಥಿಗಳು ಉತ್ತಮ ಅಧ್ಯಯನ ಹೊಂದಿ ಉನ್ನತ ಸ್ಥಾನ ಪಡೆಯಲು ಸಹಕಾರ ನೀಡಲು ಸಿದ್ದವಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಅಧ್ಯಯನಕ್ಕೆ ಬೇಕಾದ ಸೌಲತ್ತು ಪಡೆದುಕೊಳ್ಳಬೇಕೆಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೈ.ಎ. ಕಾಳೇ ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಫೆ.11 ರಿಂದ 14 ರವರೆಗೆ ನಡೆದ 2013-14 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರ್ಕಾರದ ಮತ್ತು ಇಲಾಖೆಗೆ ಘನತೆ ಮತ್ತು ಶ್ರೇಷ್ಠತೆ, ಗೌರವ ಕಾಪಾಡುವ ಕಾರ್ಯ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದರು.
ಮಕ್ಕಳ ಸಂರಕ್ಷಣಾ ಘಟಕ ಯೂನಿಸೆಫ್ ಅಧಿಕಾರಿ ರಾಘವೇಂದ್ರ ಭಟ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಸಪ್ಪ ಗದ್ದಿ, ಕೃಷ್ಣ ಶಾವಂತಗೇರಾ, ರವೀಂದ್ರ ಕುರಿ, ವೀರೇಂದ್ರ ಪಾಟೀಲ್, ಆರ್.ಪಿ. ಕುಲ್ಕರ್ಣಿ, ರಾಜೇಂದ್ರ ಶಹಾ, ವೀರೇಶ ಅಂಗಡಿ, ಸಿದ್ರಾಮ ರೆಡ್ಡಿ, ಅನಿಲ ಕುಮಾರ, ಕೊಟ್ರೇಶ, ಉಮೇಶ ಲಂಬಾಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

