ಪೌರಾಯುಕ್ತರಿಗೆ ಸಂಘಟನೆ ಕಾರ್ಯಕರ್ತರ ದಿಗ್ಬಂಧನ
ಕ.ಪ್ರ. ವಾರ್ತೆ, ರಾಯಚೂರು, ಫೆ.28
ನಗರದ ಪ್ರತಿಷ್ಠಿತ ನವೋದಯ ಶಿಕ್ಷಣ ಸಂಸ್ಥೆಗೆ ತೆರಿಗೆ ಸಂಗ್ರಹಕ್ಕೆ ಪೂರಕ ಕ್ರಮಕ್ಕೆ ಒತ್ತಾಯ, ನಕಲಿ ಸಂಸ್ಥೆ ಮೆ. ಮಿಸ್ಬಾ ಏಜೆನ್ಸಿ ವಿರುದ್ಧ ದೂರು ದಾಖಲಿಸುವುದು ಸೇರಿ ವಿವಿಧ ಬೇಡಿಕೆಗಳ ಬಗ್ಗೆ ನಗರಸಭೆ ಆಡಳಿತ, ಜಿಲ್ಲಾಧಿಕಾರಿಗಳ ಸೂಚನೆ ಹೊರತಾಗಿಯೂ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಪ್ರಮುಖರು ಶುಕ್ರವಾರ ಪೌರಾಯುಕ್ತರಿಗೆ ದಿಗ್ಬಂಧನ ಹಾಕಿದ ಪ್ರಸಂಗ ನಡೆಯಿತು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಆಯೋಜಿಸಿದ್ದ ಬಜೆಟ್ ಸಭೆಯಲ್ಲಿ ಪಾಲ್ಗೊಳ್ಳಲು ಪೌರಾಯುಕ್ತ ಬಸಪ್ಪ ಅವರು ಆಗಮಿಸುತ್ತಿದ್ದಂತೆಯೇ ಅವರನ್ನು ತಡೆದ ಸಂಘಟನೆಗಳ ಪ್ರಮುಖರಾದ ಅಂಬಣ್ಣ ಅರೋಲಿಕರ್, ಜೆ.ಬಿ.ರಾಜು, ರಾಜು ಪಟ್ಟಿ, ಅಶೋಕಕುಮಾರ ಜೈನ್ ಮತ್ತಿತರರು, ನವೋದಯ ಶಿಕ್ಷಣ ಸಂಸ್ಥೆಯಿಂದ ನಗರಸಭೆಗೆ 8 ಕೋಟಿ ರು. ತೆರಿಗೆ ಬರಬೇಕಿದೆ. ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಹಾಗೆಯೇ ನಕಲಿ ಸಂಸ್ಥೆ ಮಿಸ್ಬಾ ಏಜೆನ್ಸಿ ವಿರುದ್ಧವೂ ಕ್ರಮಕ್ಕೆ ಪೌರಾಯುಕ್ತರು ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಈಗಾಗಲೇ ನಗರಸಭೆಗೆ ಕಾನೂನು ಕ್ರಮಕ್ಕೆ ಸೂಚಿಸಿದ್ದರೂ ಆಡಳಿತ ನಿರ್ಲಕ್ಷ್ಯ ತೋರುತ್ತಿದೆ. ಈ ಹಿಂದೆ ಪ್ರಗತಿಪರ ಸಂಘಟನೆಗಳು ನಡೆಸಿದ ಹೋರಾಟದ ವೇಳೆ ನೀಡಿದ ಭರವಸೆಯಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.
ನಗರದಲ್ಲಿ ಅಕ್ರಮ ಅಪಾರ್ಟ್ಮೆಂಟ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿಯೂ ನಗರಸಭೆ ಅಸಡ್ಡೆ ತೋರುತ್ತಿದೆ. ಈ ಎಲ್ಲ ಬೇಡಿಕೆಗಳ ಬಗ್ಗೆ ಕೂಡಲೇ ದೂರು ದಾಖಲಿಸಬೇಕು ಎಂದು ಒತ್ತಾಯಿಸಿ ಪೌರಾಯುಕ್ತರೊಂದಿಗೆ ವಾಗ್ವಾದ ನಡೆಸಿದರು.
ಈ ವೇಳೆ ಪೌರಾಯುಕ್ತ ಬಸಪ್ಪ ಅವರು ಪ್ರತಿಕ್ರಿಯಿಸಿ ಈ ಬೇಡಿಕೆಗಳ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಂತರ ಬಜೆಟ್ ಸಭೆಗೆ ತೆರಳಲು ಅವರಿಗೆ ಅವಕಾಶ ಮಾಡಿಕೊಡಲಾಯಿತು. ಈ ಕುರಿತು ನಂತರ ಮಾತನಾಡಿದ ಹೋರಾಟಗಾರ ಅಂಬಣ್ಣ ಅರೋಲಿಕರ್, ಪೌರಾಯುಕ್ತರು ಮತ್ತೆ ನಿರ್ಲಕ್ಷ್ಯ ಮುಂದುವರಿಸಿದರೆ ಅವರ ಕಚೇರಿಗೆ ತೆರಳಿ ದಿಗ್ಬಂಧನ ಹಾಕುವುದಾಗಿ ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

