ತಾಪಂ ಮಳಿಗೆ; ಬಾಡಿಗೆ ಗೋಲ್ಮಾಲ್
ಕ.ಪ್ರ. ವಾರ್ತೆ,ಸಿಂಧನೂರು,ಜ.2
ನಗರದ ಹೃದಯ ಭಾಗದಲ್ಲಿರುವ ತಾಲೂಕು ಪಂಚಾಯಿತಿ ಮಳಿಗೆಗಳನ್ನು ಬಾಡಿಗೆ ಕೊಡುವ ವ್ಯವಹಾರದಲ್ಲಿ ತಾಲೂಕು ಪಂಚಾಯಿತಿ ಆಡಳಿತ ಮಂಡಳಿಯು ಭಾರಿ ಪ್ರಮಾಣದ ಗೋಲ್ಮಾಲ್ ನಡೆದಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಈಗಾಗಲೇ ಈ ಕುರಿತಂತೆ ಸಂಚು ನಡೆಸಿದ್ದು, ಲಕ್ಷಗಟ್ಟಲೆ ಹಣದ ಕೈ ಬದಲು ಮಾಡಿಕೊಳ್ಳುವ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುವುದು ಈ ಆರೋಪದ ತಿರುಳಾಗಿದೆ.
1992-93ರಲ್ಲಿ ಕಟ್ಟಿಸಲ್ಪಟ್ಟ ತಾಲೂಕು ಪಂಚಾಯಿತಿ ವಾಣಿಜ್ಯ ಸಂಕೀರ್ಣಕ್ಕೆ ಆಗ ಕಟ್ಟಿಸಿಕೊಂಡ ವ್ಯಾಪಾರಸ್ಥರು 7 ವರ್ಷಗಳವರೆಗೆ ಉಚಿತವಾಗಿರಬೇಕೆನ್ನುವುದು ನಿಯಮವಾಗಿತ್ತು. ಅವಧಿ ಮುಗಿದ ನಂತರವೂ ಮಳಿಗೆಗಳನ್ನು ಬಾಡಿಗೆ ಪಡೆದವರು ಮಾರುಕಟ್ಟೆ ದರದಲ್ಲಿ ಮಳಿಗೆಗಳನ್ನು ಉಪಬಾಡಿಗೆ ನೀಡಿ ತಾಲೂಕು ಪಂಚಾಯಿತಿಗೆ ಹಾನಿಯುಂಟು ಮಾಡಿದ್ದಾರೆ.
ಅಸಮರ್ಪಕ ಬಾಡಿಗೆ: ಮೂರು ವರ್ಷದ ಹಿಂದೆ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಕವಿತಾ ಶ್ರೀನಿವಾಸ ಮತ್ತವರ ಸಹೋದ್ಯೋಗಿ ಸದಸ್ಯರು ತಾಲೂಕು ಪಂಚಾಯಿತಿ ಆಸ್ತಿಗೆ ಸಮರ್ಪಕ ಬಾಡಿಗೆ ಬರುತ್ತಿಲ್ಲವೆಂದು ಭಾವಿಸಿ ಬಾಡಿಗೆ ಹೆಚ್ಚಿಸುವ ತೀರ್ಮಾನ ಕೈಗೊಂಡರು.
ಮಳಿಗೆಯನ್ನು ಅಧಿಕೃತವಾಗಿ ಬಾಡಿಗೆ ಪಡೆದವರು ಮಾತ್ರ ಮಳಿಗೆಗಳಲ್ಲಿ ವ್ಯವಹಾರ ಮಾಡಬೇಕು. ಬೇರೆಯವರಿಗೆ ಅವಕಾಶ ಕೊಡುವುದಿಲ್ಲ. ಉಪ ಬಾಡಿಗೆ ಕೊಡುವ ಬಾಡಿಗೆದಾರರನ್ನು ಹೊರ ಹಾಕುವುದಾಗಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ಶ್ರೀನಿವಾಸ ಸೇರಿದಂತೆ ಪ್ರಭಾವಿ ಸದಸ್ಯರು ಬಾಡಿಗೆದಾರರನ್ನು ಪರೋಕ್ಷವಾಗಿ ಹೆದರಿಸಿದರು. ಸ್ವಲ್ಪ ಮಟ್ಟಿಗೆ ಬಾಡಿಗೆ ಹೆಚ್ಚಿಸಿದ್ದನ್ನು ಬಿಟ್ಟರೆ, ಲಕ್ಷಗಟ್ಟಲೆ ಹಣವನ್ನು ಬಾಡಿಗೆದಾರರಿಂದ ಕೆಲ ಮಧ್ಯವರ್ತಿಗಳು, ವಿಶೇಷವಾಗಿ ಮುಖಂಡರು ಪಡೆದದ್ದು ಗುಟ್ಟಾಗಿ ಉಳಿದಿಲ್ಲ. ಆಗ ಶಾಸಕರಾಗಿದ್ದ ವೆಂಕಟರಾವ್ ನಾಡಗೌಡರನ್ನು ಸಹ ಕೈಕಟ್ಟಿ ಕುಳಿತುಕೊಳ್ಳುವಂತಹ ವಾತಾವರಣವನ್ನು ಜೆಡಿಎಸ್ ಮುಖಂಡರು ಮತ್ತು ಆಗಿನ ತಾಪಂ ಸದಸ್ಯರು ನಿರ್ಮಿಸಿ ಬಿಟ್ಟಿದ್ದರು.
ನೋವಿನ ಮಾತು: ಜೆಡಿಎಸ್ ಆಡಳಿತದಲ್ಲಿದ್ದ ಸಮಯದಲ್ಲಿ ಕೆಲವರು ಲಕ್ಷಗಟ್ಟಲೆ ಹಣ ಪಡೆದಿರುವುದನ್ನು ಗಮನಿಸಿರುವ ಕಾಂಗ್ರೆಸ್ ಮುಖಂಡರು, ವಿಶೇಷವಾಗಿ ಶಾಸಕ ಬಾದರ್ಲಿ ಹಂಪನಗೌಡ ಆಪ್ತರ ನಾಯಕತ್ವದಲ್ಲಿ ಪ್ರತಿ ಬಾಡಿಗೆದಾರರಿಂದ ತಲಾ ರು. 1ಲಕ್ಷ ಭಕ್ಷಿಸು ಪಡೆಯಲು ತಾಪಂ ಅಧ್ಯಕ್ಷೆ ಬಸಮ್ಮ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಒಪ್ಪಿಕೊಂಡಿದ್ದಾರೆ ಎಂದು ಹೆಸರು ಬಹಿರಂಗ ಪಡಿಸಲಿಚ್ಛಿಸದ ಸದಸ್ಯರೊಬ್ಬರು ನೋವಿನಿಂದ ಹೇಳುತ್ತಾರೆ. ಕಳೆದ ಬಾರಿ ನಿಗದಿ ಪಡಿಸಿದ್ದ ಪ್ರತಿ ಮಳಿಗೆಗೆ ವರ್ಷಕ್ಕೆ ರು. 50ರಿಂದ ರು. 70ಸಾವಿರದ ಬದಲಾಗಿ, ಈ ಬಾರಿ ಮುಂದಿನ ಮೂರು ವರ್ಷದ ಅವಧಿಗೆ ಹೊಸ ಒಪ್ಪಂದ ಮಾಡಿಕೊಂಡು, ಶೇ.10ರಷ್ಟು ಬಾಡಿಗೆಯನ್ನು ಹೆಚ್ಚಿಸಬೇಕು. ಪ್ರತಿ ಬಾಡಿಗೆದಾರರಿಂದ ರು. 1.50 ಲಕ್ಷ ಭಕ್ಷೀಸು ಪಡೆಯಬೇಕೆಂದು ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಆಕ್ಷೇಪಣೆ: ಯಾರೊ ಒಬ್ಬರು ಮಾಡುವ ತಪ್ಪಿನಿಂದ ಶಾಸಕರ ಹೆಸರಿಗೆ ಕಳಂಕ ಬರುತ್ತಿದೆ. ಇಂತಹ ಅಪಸ್ವರ ಬರಬಾರದೆಂದರೆ ಟೆಂಡರ್ ಕರೆದು ಹೆಚ್ಚಿನ ಬಾಡಿಗೆ ಕೊಡುವ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ಕೊಡಬೇಕು ಎನ್ನುವುದು ಹಂಪನಗೌಡರ ನಿಷ್ಠಾವಂತ ಕಾರ್ಯಕರ್ತರ ಆಕ್ಷೇಪಣೆಯಾಗಿದೆ.
ತಾ.ಪಂ. ಆಡಳಿತ ಮಂಡಳಿ ಕಾನೂನು ಬಾಹಿರವಾಗಿ ಮಳಿಗೆ ಬಾಡಿಗೆದಾರರಿಂದ ಒಪ್ಪಂದ ಮಾಡಿಕೊಳ್ಳುವ ಮತ್ತು ತಾ.ಪಂ.ಗೆ ದೊರೆಯುವ ಕಂದಾಯಕ್ಕೆ ಧಕ್ಕೆಯುಂಟು ಮಾಡುವ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿ ಮುಖಂಡರು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ, ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಕಾರ್ಯದರ್ಶಿಗೆ ಮತ್ತು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಸಚಿವರಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ. ಹಾಗೆಯೇ ಕೆಲವು ಪ್ರಗತಿಪರ ಸಂಘಟನೆಗಳು ತಾ.ಪಂ. ಮಳಿಗೆಗಳನ್ನು ಮಾರುಕಟ್ಟೆ ದರದಲ್ಲಿ ಬಾಡಿಗೆ ನೀಡುವ ಮೂಲಕ ಸರ್ಕಾರಕ್ಕೆ ಸೂಕ್ತ ಕಂದಾಯ ದೊರೆಯುವಂತೆ ಮಾಡಬೇಕೆಂದು ಒತ್ತಾಯಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

